ಶಿವಮೊಗ್ಗ: ಲೋಕಾಯುಕ್ತ ಹೆಸರಲ್ಲಿ ಹೆದರಿಸುವುದು ಅಥವಾ ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಅರ್ಜಿಗಳು ಒಳಗೊಂಡಂತೆ ಯಾವುದೇ ಒತ್ತಡಕ್ಕೂ ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ)ಗಳು ಮಣಿಯಬಾರದು. ಒತ್ತಡಗಳನ್ನು ಧೈರ್ಯವಾಗಿ ಎದುರಿಸುವ ಮನೋಸ್ಥಿತಿ ಮೈಗೂಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಕುವೆಂಪು ರಂಗಮಂದಿರಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಬೆಂಗಳೂರು ಮತ್ತು ಜಿಲ್ಲಾ ಘಟಕದಿಂದ ರಾಜ್ಯಮಟ್ಟದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಬಹಳಷ್ಟು ಸಂದರ್ಭಗಳಲ್ಲಿ ಸ್ಥಳೀಯರು ಅಥವಾ ಗ್ರಾಪಂ ಸದಸ್ಯರಿಂದಲೇ ಪಿಡಿಒಗಳ ಮೇಲೆ ಒತ್ತಡ ಬರುವುದು ಸಾಮಾನ್ಯ. ಆದರೆ ಅಂತಹ ಒತ್ತಡಗಳಿಗೆ ಮಣಿಯದೇ ಒತ್ತಡದ ನಡುವೆ ನೆಮ್ಮದಿ ಬದುಕು ಕಂಡುಕೊಳ್ಳಬೇಕಿದೆ ಎಂದರು.
ಹಿಂದೆಲ್ಲ ಪಿಡಿಒಗಳ ವಿರುದ್ಧ ಇಲ್ಲಸಲ್ಲದ ಆರೋಪ ನಡೆಸಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ಆತ್ಮಹತ್ಯೆ, ವರ್ಗಾವಣೆ, ಬೇರೆ ಇಲಾಖೆಗೆ ನಿಯೋಜನೆ, ಸ್ವಯಂ ನಿವೃತ್ತಿಯಂತಹ ನಿರ್ಧಾರಕ್ಕೆ ಪಿಡಿಒಗಳು ಮುಂದಾಗುತ್ತಿದ್ದರು. ಆದರೆ ಪ್ರಸ್ತುತ ಇದು ಬದಲಾಗಿದೆ. ಪಿಡಿಒಗಳು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾರೆ. ವಿಶೇಷವಾಗಿ ಆರ್‌ಟಿಐ ಅರ್ಜಿಗಳಿಗೆ ಯಾವುದೇ ಕಾರಣಕ್ಕೂ ರಾಜೀ ಆಗಬಾರದು ಎಂದು ಸಲಹೆ ನೀಡಿದರು.
ನನ್ನ ಮೇಲೂ 500ಕ್ಕೂ ಅಧಿಕ ಆರ್‌ಟಿಐ ಅರ್ಜಿಗಳು, 8 ಲೋಕಾಯುಕ್ತ ಕೇಸ್‌ಗಳಿವೆ. 8ರಲ್ಲಿ ಐದು ಕೇಸ್‌ಗಳು ಈಗಾಗಲೇ ವಿಚಾರಣೆ ಇಲ್ಲದೆ ಮುಕ್ತಾಯವಾಗಿವೆ. ನೌಕರರಿಗೆ ತೊಂದರೆ ಆದಾಗ ಧ್ವನಿ ಎತ್ತಿದ್ದಕ್ಕೆ 4 ಎಫ್‌ಐಆರ್ ಹಾಕಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಅಧ್ಯಕ್ಷ ರಾಜು ವಾರದ ಮಾತನಾಡಿ, ಸವಾಲುಗಳನ್ನು ಎದುರಿಸಲು ಸಂಘಟನೆಯೊಂದಿಗೆ ಕೈ ಜೋಡಿಸಬೇಕು. ಇದರಿಂದ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಪಡೆದುಕೊಳ್ಳಬಹುದು ಎಂದರು.
ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಖುಬಾಸಿಂಗ್ ಜಾಧವ್, ಸಂಘದ ಜಿಲ್ಲಾಧ್ಯಕ್ಷ ವೈ.ಎಲ್.ಗಂಗಾಧರ್ ನಾಯ್ಕ್, ಉಪಾಧ್ಯಕ್ಷ ಮೋಹನ್‌ಕುಮಾರ್, ಗೌರವಾಧ್ಯಕ್ಷ ಎಸ್.ರಮೇಶ್, ಬಿ.ಎಂ.ದಿಲೀಪ್‌ಕುಮಾರ್, ಡಿ.ಹರೀಶ್, ಅನುಪಮಾ ಚೆನ್ನಪ್ಪ, ಬಿ.ಎಂ.ಸಂಗಮೇಶ್, ಟಿ.ಪ್ರಶಾಂತ ಬಾಬು, ಎಚ್.ಆರ್.ಗಿರೀಶ್, ಶರತ್‌ಕುಮಾರ್, ಮಂಜುನಾಥ ಶೆಟ್ಟಿ, ಎಚ್.ಪಿ.ರವೀಶ್, ಅನಿಲ್ಕುಮಾರ್ ಇದ್ದರು.
ಡೈರಿ, ಸಹಾಯವಾಣಿ, ವೆಬ್‌ಸೈಟ್ ಬಿಡುಗಡೆ
ರಾಜ್ಯಮಟ್ಟದ ಸಮಾವೇಶದಲ್ಲಿ ಡೈರಿ-2024, ಸಹಾಯವಾಣಿ, ವೆಬ್‌ಸೈಟ್ ಮತ್ತು ಆ್ಯಪ್ ಲೋಕಾರ್ಪಣೆಗೊಳಿಸಲಾಯಿತು. ಇದೇ ವೇಳೆ ಉತ್ತಮ ಸಾಧನೆ ಮಾಡಿದ ಪಿಡಿಒಗಳನು ಸನ್ಮಾನಿಸಲಾಯಿತು. ಜತೆಗೆ ಪಿಡಿಒ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.