ನ್ಯೂಸ್

ಪ್ರಧಾನಿ ಮೋದಿಯವರು ದೀಪ ಹಚ್ಚಲು ಹೇಳಿದ್ದಕ್ಕೆ ನಿಜವಾದ ಕಾರಣ ತಿಳಿಸಿದ ಪಿಐಬಿ; ರೂಮರ್​ಗಳನ್ನು ನಂಬಬೇಡಿ, ಜ್ಯೋತಿಷ್ಯ ಲಿಂಕ್​ ಮಾಡಬೇಡಿ ಎಂದು ಮನವಿ

lakshmihegde

ನವದೆಹಲಿ: ಏ.5ರ ಭಾನುವಾರ ರಾತ್ರಿ 9ಗಂಟೆಗೆ 9ನಿಮಿಷ ಎಲ್ಲರೂ ಮನೆಯ ಲೈಟ್​ ಆಫ್​ ಮಾಡಿ, ದೀಪ ಅಥವಾ ಮೊಂಬತ್ತಿಗಳನ್ನು ಹಚ್ಚಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಆದರೆ ಮೋದಿಯವರ ಈ ದೀಪ ಹಚ್ಚುವ ಕರೆಗೆ ಅನೇಕರು ವ್ಯಂಗ್ಯಭರಿತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಮತ್ತೊಂದಷ್ಟು ಜನ ತಮ್ಮದೇ ಆದ ರೀತಿಯಲ್ಲಿ ವಿಚಿತ್ರವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಜ್ಯೋತಿಷ್ಯ, ವೈಜ್ಞಾನಿಕ ಸಿದ್ಧಾಂತಗಳನ್ನೆಲ್ಲ ಅದಕ್ಕೆ ಜೋಡಿಸಿ ಅದೆಷ್ಟೋ ರೀತಿಯಲ್ಲಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಹೀಗೆ ಎಲ್ಲರೂ ಒಗ್ಗಟ್ಟಾಗಿ ಮೊಂಬತ್ತಿ, ದೀಪಗಳನ್ನು ಉರಿಸುವುದರಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿ ಕರೊನಾ ವೈರಸ್​ ಸಾಯುತ್ತವೆ ಎಂದೂ ಪ್ರತಿಪಾದಿಸಲಾಗುತ್ತಿದೆ.

ಆದರೆ ಕೇಂದ್ರ ಸರ್ಕಾರದ ಮಾಧ್ಯಮ ಸಂಸ್ಥೆ ಪ್ರೆಸ್​ ಇನ್ಫಾರ್ಮೇಶನ್​ ಬ್ಯೂರೋ ಈ ಕಾರಣಗಳನ್ನೆಲ್ಲ ತಳ್ಳಿ ಹಾಕಿದೆ. ಪ್ರಧಾನಿ ಮೋದಿಯವರು ದೀಪ ಹಚ್ಚಲು ಹೇಳಿದ್ದರ ಹಿಂದೆ ಯಾವುದೇ ವೈಜ್ಞಾನಿಕ, ಜ್ಯೋತಿಷ್ಯ ಅಥವಾ ಸಂಖ್ಯಾಶಾಸ್ತ್ರದ ಕಾರಣವಿಲ್ಲ ಎಂದಿದೆ.

ಟ್ವೀಟ್​ ಮಾಡಿರುವ ಪಿಐಬಿ, ಯಾವುದೇ ರೂಮರ್​​ಗಳನ್ನೂ ನಂಬಬೇಡಿ. ಕರೊನಾ ಒಂದು ಅಂಧಕಾರದಂತೆ ವಕ್ಕರಿಸಿದೆ. ಅದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ, ಏಕತೆಯಿಂದ ಹೋರಾಡಬೇಕು. ತನ್ಮೂಲಕ ಅದನ್ನು ಹೊಡೆದೋಡಿಸಬೇಕು ಎಂಬ ಸಂದೇಶ ಸಾರುವ ಸಲುವಾಗಿ ಮೋದಿಯವರು ಏ.5ರಂದು ನಿಮ್ಮ ಮನೆಯ ವಿದ್ಯುತ್​ ಬೆಳಕನ್ನು ಆರಿಸಿ ದೀಪ, ಮೊಂಬತ್ತಿ ಹಚ್ಚಿ, ಇಲ್ಲವೇ ಮೊಬೈಲ್​ನ ಫ್ಲ್ಯಾಶ್​ ಲೈಟ್​, ಟಾರ್ಚ್​ ಆನ್​ ಮಾಡಲು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದೆ. (ಏಜೆನ್ಸೀಸ್​)