ರಾಯಚೂರು: ಕರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಹೆಚ್ಚಿನ ಹಣ ಅಗತ್ಯ ಇರುವುದರಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅನೇಕರು ದೇಣಿಗೆ ನೀಡುತ್ತಿದ್ದಾರೆ.
ಈ ಮಧ್ಯೆ ರಾಯಚೂರು ಪೊಲೀಸರು ತಾವು ಒಂದು ದಿನ ಸಂಬಳ ನೀಡುವುದಿಲ್ಲ ಎಂದು ಎಸ್ಪಿಗೆ ಪತ್ರ ಬರೆದಿದ್ದಾರೆ.
ಮಾರ್ಚ್ ತಿಂಗಳ ಒಂದು ದಿನದ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿ ಎಂದು ರಾಜ್ಯ ಸರ್ಕಾರ ಪೊಲೀಸರ ಬಳಿ ಮನವಿ ಮಾಡಿತ್ತು. ಆದರೆ ರಾಯಚೂರು ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ನಾವು ಹಣ ನೀಡುವುದಿಲ್ಲ ಎಂದಿದ್ದಾರೆ.
ಕೊವಿಡ್ -19 ನಿಯಂತ್ರಣಕ್ಕೆ ಲಾಕ್ಡೌನ್ ಹೇರಲಾಗಿದ್ದು, ಈ ಪರಿಸ್ಥಿತಿಯನ್ನು ಹಗಲಿರುಳು ಶ್ರಮವಹಿಸಿ ನಿಭಾಯಿಸುತ್ತಿದ್ದೇವೆ. ರಜೆಯೂ ಸಿಗುತ್ತಿಲ್ಲ. ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಯಾರೂ ಸಹಾಯ ಮಾಡಲಿಲ್ಲ. ತೆಲಂಗಾಣ ಸರ್ಕಾರ ಪೊಲೀಸರಿಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ನಾವೂ ಕಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತಿರುವ ಅಧಿಕಾರಿಗಳ ವೇತನವನ್ನು ಬೇಕಾದರೆ ಕಡಿತಗೊಳಿಸಿ, ನಮ್ಮದು ಏಕೆ ಎಂದು ಪ್ರಶ್ನಿಸಿದ್ದಾರಂತೆ.