ನ್ಯೂಸ್

ಸಂಪಾದಕೀಯ | ಅಚಾತುರ್ಯ ಆಗದಿರಲಿ

ಮೋಹನ್​ ಶೆಟ್ಟಿ

ರಾಜ್ಯದಲ್ಲಿ ಅನರ್ಹರಿಗೆ ನೀಡಲಾಗಿರುವ ಸುಮಾರು 14 ಲಕ್ಷ ಬಿಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆ ಪೈಕಿ, ಈಗಾಗಲೇ ಮೂರೂವರೆ ಲಕ್ಷ ಬಿಪಿಎಲ್ ಕಾರ್ಡ್​ಗಳನ್ನು ರದ್ದು ಮಾಡಲಾಗಿದ್ದು, ಪ್ರಕ್ರಿಯೆ ಮುಂದುವರಿದಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಪ್ರತಿ ತಿಂಗಳು ಉಚಿತವಾಗಿ ಅಥವಾ ರಿಯಾಯ್ತಿ ದರದಲ್ಲಿ ಆಹಾರ ಧಾನ್ಯ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಜಾರಿಗೆ ತಂದಿರುವ ಪಡಿತರ ಚೀಟಿ ಅದು. ಯಾವುದೇ ಕಾರಣಕ್ಕೂ ಅದು ಶ್ರೀಮಂತರ ಅಥವಾ ಸ್ಥಿತಿವಂತರ ಪಾಲಾಗಲೇಬಾರದು. ಈ ವಿಷಯದಲ್ಲಿ ಯಾರಿಗೂ ಅಭಿಪ್ರಾಯಭೇದ ಇರಲು ಸಾಧ್ಯವೇ ಇಲ್ಲ.

ರಾಜ್ಯದಲ್ಲಿ ಸುಮಾರು ಆರೂವರೆ ಕೋಟಿ ಜನಸಂಖ್ಯೆ ಇದ್ದರೆ, ಬಿಪಿಎಲ್ ಕಾರ್ಡ್​ಗಳೇ ಸುಮಾರು ನಾಲ್ಕೂವರೆ ಕೋಟಿ ಇವೆ. ಅದಲ್ಲದೆ ಬಡತನ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ಕಾರ್ಡ್​ಗಳನ್ನೂ ವಿತರಿಸಲಾಗಿದೆ. ಅದರ ಅರ್ಥ- ಜನಸಂಖ್ಯೆಗಿಂತ ಪಡಿತರ ಚೀಟಿಗಳೇ ಹೆಚ್ಚಾಗಿವೆ! ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಬಿಪಿಎಲ್ ಕಾರ್ಡ್​ಗಳ ಸಂಖ್ಯೆಯು ಅಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಶೇ.50ಕ್ಕಿಂತ ಕಡಿಮೆ ಇವೆ. ಆದರೆ ನಮ್ಮ ರಾಜ್ಯದಲ್ಲಿ ಶೇ.80ರಷ್ಟಿವೆ. ಸುಮಾರು 3 ಲಕ್ಷ ಬಿಪಿಎಲ್ ಕಾರ್ಡ್​ದಾರರು 6 ತಿಂಗಳಿಂದ ಪಡಿತರವನ್ನೇ ಪಡೆದಿಲ್ಲವೆಂದ ಮೇಲೆ ಅವರನ್ನು ಬಡವರೆಂದು ಪರಿಗಣಿಸುವುದಾದರೂ ಹೇಗೆ? ಅದೇ ರೀತಿ, ಆದಾಯ ತೆರಿಗೆ ಪಾವತಿಸುವವರು, ಸ್ವಂತದ ಬಳಕೆಗಾಗಿ ನಾಲ್ಕು ಚಕ್ರಗಳ ವಾಹನ ಹೊಂದಿರುವವರು, ಮನೆಗಳನ್ನು ಬಾಡಿಗೆಗೆ ನೀಡಿ ಜೀವನ ನಡೆಸುತ್ತಿರುವವರು ಹೀಗೆ ಅನೇಕ ರೀತಿಯ ಸ್ಥಿತಿವಂತರು ಕೂಡ ಬಿಪಿಎಲ್ ಕಾರ್ಡ್​ಗಳನ್ನು ಹೊಂದಿರುವುದು ಆಶ್ಚರ್ಯವಾದರೂ ಸತ್ಯ.

ಈ ಕಾರಣಗಳಿಂದ ಅನರ್ಹರ ಬಿಪಿಎಲ್ ಕಾರ್ಡ್​ಗಳನ್ನು ಸರ್ಕಾರ ರದ್ದುಪಡಿಸಲು ಹೊರಟಿರುವುದನ್ನು ಶ್ಲಾಘಿಸಲೇಬೇಕು. ಆದರೆ ಅನರ್ಹರ ಕಾರ್ಡ್ ರದ್ದು ಮಾಡುವ ಭರಾಟೆಯಲ್ಲಿ ಅಧಿಕಾರಿಗಳು ಕೆಲವೆಡೆ ನಿಜವಾದ ಬಡವರ ಕಾರ್ಡ್​ಗಳನ್ನೂ ರದ್ದುಪಡಿಸುತ್ತಿರುವುದು ಖೇದಕರ ಸಂಗತಿ. ಸಂಬಂಧಪಟ್ಟ ಕುಟುಂಬದವರಿಗೆ ಮಾಹಿತಿಯನ್ನೂ ನೀಡದೇ ಇರುವುದು ಸರಿಯಲ್ಲ. ಇನ್ನು ಕೆಲವೆಡೆ ಯಾವುದೇ ವಿಚಾರಣೆ ನಡೆಸದೆ, ಬಿಪಿಎಲ್ ಕಾರ್ಡ್​ಗಳನ್ನು ಎಪಿಎಲ್ ಕಾರ್ಡ್​ಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಇದು ಅಕ್ಷಮ್ಯ. ಫಲಾನುಭವಿಗಳು ನಿಜವಾಗಿಯೂ ಅನರ್ಹರೇ ಎಂಬುದನ್ನು ಸ್ಥಳ ಪರಿಶೀಲನೆ ಮಾಡಿ ಅಥವಾ ಅವರನ್ನೇ ಕರೆಸಿ ವಿಚಾರಣೆ ನಡೆಸಿ ಖಚಿತಪಡಿಸಿಕೊಳ್ಳಬೇಕಾದದ್ದು ಅಧಿಕಾರಿಗಳ ಕರ್ತವ್ಯ.

ಅನರ್ಹರು ಯಾರು ಎಂಬುದಕ್ಕೆ ಮಾರ್ಗಸೂಚಿ ಇದೆ, ಆದರೆ ಅವರ ಪತ್ತೆಗೆ ಸರಿಯಾದ ಮಾರ್ಗಸೂಚಿ ಇಲ್ಲ. ಅನರ್ಹ ಕಾರ್ಡ್​ದಾರರನ್ನು ಪತ್ತೆ ಮಾಡಿದ ಬಳಿಕ, ಆ ಕಾರ್ಡ್ ಪಡೆದವರ ಮೇಲೆ ಮಾತ್ರವಲ್ಲದೆ ಅವುಗಳನ್ನು ಮಾಡಿಕೊಟ್ಟ ಅಧಿಕಾರಿಗಳನ್ನೂ ಗುರುತಿಸಿ, ಅವರ ಮೇಲೆ ಕ್ರಮ ಜರುಗಿಸಬೇಕು. ಬಡವರ ಕಾರ್ಡ್​ಗಳನ್ನೂ ರದ್ದುಪಡಿಸುತ್ತಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶವನ್ನು ರಾಜ್ಯ ಸರ್ಕಾರ ಗಮನಿಸಿ, ನೈಜ ಫಲಾನುಭವಿಗಳನ್ನು ಗುರುತಿಸಲು ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು.