ಗದಗ: ಮಹಿಳೆಯರು ಒಂದುಗೂಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯದ ಅಂಗಡಿಗಳ ಮೇಲೆ ದಾಳಿ ನಡೆಸಿರುವ ಅಪರೂಪದ ಘಟನೆ ಡೋಣಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಹಿಳೆಯರು ದಾಳಿ ನಡೆಸಿ ಇಬ್ಬರನ್ನು ಅಬಕಾರಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಅಲ್ಲದೆ ಮದ್ಯದ ಪಾಕೆಟ್ಗಳನ್ನು ವಶಕ್ಕೆ ಪಡೆದು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ.
ಡೋಣಿ ಗ್ರಾಮದಲ್ಲಿ ಅಂಗಡಿ ಹಾಗೂ ಮನೆಗಳಲ್ಲಿ ಪರವಾನಗಿ ಇಲ್ಲದೆ ಮದ್ಯ ಮಾರಾಟ ನಡೆಯುತ್ತಿತ್ತು. ಗ್ರಾಮಸ್ಥರು ಅಧಿಕ ದರಕ್ಕೆ ಮದ್ಯ ಖರೀದಿಸಿ ಸೇವಿಸುತ್ತಿದ್ದರು. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಶೋಚನೀಯವಾಗಿ ಪತ್ನಿ ಹಾಗೂ ಮಕ್ಕಳು ಉಪವಾಸ ಇರುವ ಸ್ಥಿತಿ ಗ್ರಾಮದಲ್ಲಿ ಎದುರಾಗಿತ್ತು. ಮಹಿಳೆಯರು ಒಂದುಗೂಡಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟವನ್ನು ತಡೆಯಲು ಯೋಜನೆ ರೂಪಿಸಿದರು.
ಮೊದಲು ಎಲ್ಲ ಅಂಗಡಿಗಳಿಗೆ ತೆರಳಿ ಮದ್ಯ ಮಾರದಂತೆ ಸೂಚನೆ ನೀಡಿದರು. ಸೂಚನೆ ನಂತರ ಮದ್ಯ ಮಾರಿದರೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ನೀಡಿದ ನಂತರ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಹಿಳೆಯರ ಗುಂಪು ದಾಳಿ ನಡೆಸಿದೆ. ಮಹಿಳೆಯರ ಈ ಕಾರ್ಯಕ್ಕೆ ಅಬಕಾರಿ ಪೊಲೀಸರು ಸಹ ಕೈಜೋಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)