ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಅಂಬುಲೆನ್ಸ್ ಹಸ್ತಾಂತರಿಸಲಾಯಿತು. ಅತುಲ್ ಭೀರಂಗಿ, ನಾಗರಾಜ ನಾಯ್ಕ, ಶಾಂತರಾಜ್, ಅಪರ್ಣಾ, ಅಶೋಕ್‌ಕುಮಾರ್ ಇತರರಿದ್ದರು. 
ನ್ಯೂಸ್

ಸುಸಜ್ಜಿತ ಆಂಬುಲೆನ್ಸ್ ಕೊಡುಗೆ

ರಿಪ್ಪನ್‌ಪೇಟೆ: ಕೇರ್ ಟ್ರಸ್ಟ್ ಸಂಸ್ಥೆ ಮುಂದಾಳತ್ವದಲ್ಲಿ 33.75 ಲಕ್ಷ ರೂ. ವೆಚ್ಚದಲ್ಲಿ ರೂಪುಗೊಂಡ ಆಂಬುಲೆನ್ಸ್‌ನಲ್ಲಿ ಇಸಿಜಿ, ವೆಂಟಿಲೇಟರ್ ಒಳಗೊಂಡಂತೆ 11 ರೀತಿಯ ತುರ್ತು ಜೀವರಕ್ಷಕ ಪರಿಕರಗಳಿವೆ. ಇಂತಹ ಸುಸಜ್ಜಿತ ವಾಹನವನ್ನು ಗಣ್ಯಾತಿಗಣ್ಯರ ಬೆಂಗಾವಲು ವಾಹನವಾಗಿ ಬಳಸಲಾಗುತ್ತದೆ ಎಂದು ದಾನಿ ಬೆಂಗಳೂರಿನ ಪ್ರಗತಿ ಆಟೋಮಿಷನ್ ವ್ಯವಸ್ಥಾಪಕ ನಿರ್ದೇಶಕ ಅತುಲ್ ಭೀರಂಗಿ ಹೇಳಿದರು.

ಹುಂಚ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿದ್ದ ಆಂಬುಲೆನ್ಸ್ ಅನ್ನು ಶುಕ್ರವಾರ ಜಿಲ್ಲಾ ಆರೋಗ್ಯ ಇಲಾಖೆಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರಿಗೂ ಸೌಲಭ್ಯ ದೊರೆಯಲಿ ಎಂಬ ಉದ್ದೇಶದಿಂದ ಆಧುನಿಕ ವಿನ್ಯಾಸದೊಂದಿಗೆ ಆಂಬುಲೆನ್ಸ್ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮೂರು ವಾಹನಗಳಿದ್ದು, ಇದು ನಾಲ್ಕನೆಯದು. ಆಧುನಿಕ ಸೌಲಭ್ಯದಲ್ಲಿ ಜಿಲ್ಲೆಗೆ ಮೊದಲನೆಯದು. ಆದರೆ ವಾಹನದ ಬಳಕೆ ಮತ್ತು ನಿರ್ವಹಣೆಯಲ್ಲಿ ಇಲ್ಲಿನ ಆಡಳಿತ ವ್ಯವಸ್ಥೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಪ್ರಭಾರ ಜಿಲ್ಲಾ ಅರೋಗ್ಯಾಧಿಕಾರಿ ನಾಗರಾಜ ನಾಯ್ಕ ಮಾತನಾಡಿ ಗ್ರಾಮೀಣರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಇಷ್ಟೊಂದು ದೊಡ್ಡ ಮೊತ್ತದ ವಾಹನವನ್ನು ದಾನಿ ಅತುಲ್ ಭೀರಂಗಿ ದಂಪತಿಗೆ ಹಾಗೂ ಕೇರ್ ಟ್ರಸ್ಟ್‌ನ ಪದಾಧಿಕಾರಿಗಳು ನೀಡಿದ್ದಾರೆ. ಆರೋಗ್ಯದ ಗಂಭೀರ ಸಮಸ್ಯೆಯಲ್ಲಿ ಮಾತ್ರ ವಾಹನವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ತಾಲೂಕು ಅರೋಗ್ಯಾಧಿಕಾರಿ ಶಾಂತರಾಜ್, ಡಾ. ನಿತೀಶ್ ಭಟ್, ಜೈನ ಮಠದ ಆಡಳಿತಾಧಿಕಾರಿ ಅಶೋಕ್‌ಕುಮಾರ್, ಕೇರ್ ಟ್ರಸ್ಟ್‌ನ ಗುರುರಾಜ, ಅಪರ್ಣಾ, ರವೀಂದ್ರ ಭಗತ್, ಶಿಕ್ಷಕ ದಿನೇಶ, ದೇವೇಂದ್ರ, ಅಭಿಷೇಕ್, ಯಶಸ್ವತಿ ಜೈನ್ ಇತರರಿದ್ದರು.