ನ್ಯೂಸ್

ಜಾರ್ಜಿಯಾ ಚುನಾವಣಾ ಪ್ರಕರಣ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬಂಧನ

ವಾಷಿಂಗ್ಟನ್​: ಚುನಾವಣಾ ವಂಚನೆ ಮತ್ತು ಪಿತೂರಿ ಆರೋಪ ಹೊತ್ತಿರುವ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ.

ಟ್ರಂಪ್​ ಅವರನ್ನು ಜಾರ್ಜಿಯಾದ ಅಟ್ಲಾಂಟಾದಲ್ಲಿರುವ ಫೌಲ್ಟನ್​ ಕೌಂಟಿ ಜೈಲಿನಲ್ಲಿ ಬಂಧಿಸಲಾಯಿತು. 2020ರಲ್ಲಿ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಜಾರ್ಜಿಯಾ ರಾಜ್ಯದ ಚುನಾವಣಾ ಫಲಿತಾಂಶವನ್ನು ತಿರುಚಲು ಸಂಚು ರೂಪಿಸಿದ ಆರೋಪದ ಮೇಲೆ ಟ್ರಂಪ್​ರನ್ನು ಬಂಧನ ಮಾಡಲಾಗಿದೆ.

30 ನಿಮಿಷಗಳಿಗಿಂತ ಕಡಿಮೆ ಅವಧಿಯ ಸಂಕ್ಷಿಪ್ತ ಸೆಸ್ಸೆನ್​ನಲ್ಲಿ 77 ವರ್ಷದ ಟ್ರಂಪ್ ಅವರನ್ನು ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿ 13 ಆರೋಪಗಳ ಮೇಲೆ ಬುಕ್​ ಮಾಡಲಾಗಿದೆ ಎಂದು ಶೆರಿಫ್ ಕಚೇರಿ ತಿಳಿಸಿದೆ. ಅಲ್ಲದೆ, ಟ್ರಂಪ್‌ ಅವರ ಎತ್ತರವನ್ನು ಆರು ಅಡಿ ಮೂರು ಇಂಚುಗಳು (1.9 ಮೀಟರ್‌ಗಳು), ಅವರ ತೂಕ 215 ಪೌಂಡ್‌ಗಳು (97 ಕೆಜಿ) ಮತ್ತು ಅವರ ಕೂದಲಿನ ಬಣ್ಣವನ್ನು "ಬ್ಲಾಂಡ್ ಅಥವಾ ಸ್ಟ್ರಾಬೆರಿ" ಎಂದು ಜೈಲು ಸಿಬ್ಬಂದಿ ಪಟ್ಟಿ ಮಾಡಿದೆ. ಇದರೊಂದಿಗೆ ಟ್ರಂಪ್​ ಅವರ ಮಗ್​ಶಾಟ್​ ಅನ್ನು ಸಹ ಬಿಡುಗಡೆ ಮಾಡಿದೆ.

2020ರ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಟ್ರಂಪ್​ ಸಂಚಿನಲ್ಲಿ ಭಾಗಿಯಾಗಿದ್ದ ಇತರೆ ಆರೋಪಿಗಳನ್ನು ಸಹ ಈಗಾಗಲೇ ಬಂಧಿಸಲಾಗಿದೆ. ಬಂಧನ ವೇಳೆ ಮಾತನಾಡಿದ ಟ್ರಂಪ್​, ಇಲ್ಲಿ ನಡೆದಿರುವುದು ನ್ಯಾಯದ ಅಣಕವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು. (ಏಜೆನ್ಸೀಸ್​)