ನ್ಯೂಸ್

ರಷ್ಯಾ & ಯುಕ್ರೇನ್ ಯುದ್ಧ ಕೊನೆಗೊಳಿಸಲು ಇರುವುದೊಂದೆ ದಾರಿ; ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದೇನು? | Donald Trump

ವಾಷಿಂಗ್ಟನ್​​ ಡಿಸಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅಚ್ಚರಿಯ ಹೆಜ್ಜೆಯನ್ನಿಟ್ಟಿದ್ದಾರೆ. ತೈಲ ಬೆಲೆಗಳನ್ನು ಕಡಿಮೆ ಮಾಡುವಂತೆ ಸೌದಿ ಅರೇಬಿಯಾ ಮತ್ತು ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆಯ (OPEC) ಇತರ ದೇಶಗಳಿಗೆ ಹೇಳಿದ್ದಾರೆ. ಕಡಿಮೆ ತೈಲ ಬೆಲೆಯು ರಷ್ಯಾ ಮತ್ತು ಯುಕ್ರೇನ್​​ ನಡುವಿನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸಲು ಸಹಾಯ ಮಾಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ಸೌದಿ ಅರೇಬಿಯಾ ಮತ್ತು ಒಪೆಕ್‌ಗೆ ತೈಲ ಬೆಲೆಯನ್ನು ಕಡಿಮೆ ಮಾಡುವಂತೆ ಕೇಳಲಿದ್ದೇನೆ. ನೀವು ಅದನ್ನು ಕಡಿಮೆ ಮಾಡಬೇಕು. ಚುನಾವಣೆಗೂ ಮುನ್ನ ಇದನ್ನು ಏಕೆ ಮಾಡಲಿಲ್ಲ ಎಂದು ನಾನೂ ಆಶ್ಚರ್ಯ ಪಡುತ್ತೇನೆ. ತೈಲ ಬೆಲೆಯನ್ನು ಕಡಿಮೆ ಮಾಡುವ ಕಡೆ ಅವರು ಒಲವು ತೋರಿಸಲಿಲ್ಲ. ಇದರಿಂದ ನನಗೆ ಸ್ವಲ್ಪ ಆಶ್ಚರ್ಯವಾಗಿದೆ. ಬೆಲೆ ಕಡಿಮೆಯಾದರೆ ರಷ್ಯಾ-ಯುಕ್ರೇನ್ ಯುದ್ಧವು ತಕ್ಷಣವೇ ಕೊನೆಗೊಳ್ಳುತ್ತದೆ ಎಂದು ಟ್ರಂಪ್ ಹೇಳಿದರು.

ಯುಕ್ರೇನ್​​ನಲ್ಲಿ ಏನಾಗುತ್ತಿದೆ ಎಂಬುದಕ್ಕೆ ಒಪೆಕ್​ ರಾಷ್ಟ್ರಗಳು ಸ್ವಲ್ಪ ಮಟ್ಟಿಗೆ ಜವಾಬ್ದಾರರಾಗಿರುತ್ತವೆ. ತೈಲ ಬೆಲೆ ಕಡಿಮೆಯಾದರೆ ರಷ್ಯಾ-ಯುಕ್ರೇನ್ ಯುದ್ಧ ತಕ್ಷಣವೇ ಕೊನೆಗೊಳ್ಳುತ್ತದೆ. ನೀವು ಯುದ್ಧವನ್ನು ಕೊನೆಗೊಳಿಸಬೇಕು. ಅವರು ಇದನ್ನು ಬಹಳ ಹಿಂದೆಯೇ ಮಾಡಬೇಕಿತ್ತು. ಆದ್ದರಿಂದ ಸ್ವಲ್ಪ ಮಟ್ಟಿಗೆ ಏನಾಗುತ್ತಿದೆ ಎಂಬುದಕ್ಕೆ ಅವರೇ ಜವಾಬ್ದಾರರು. ತೈಲ ಬೆಲೆಗಳು ಹಾಗೂ ಬಡ್ಡಿದರಗಳನ್ನು ತಕ್ಷಣವೇ ಕಡಿತಗೊಳಿಸಬೇಕೆಂದು ಟ್ರಂಪ್​​ ಒತ್ತಾಯಿಸಿದರು.

ನಾನು ರಷ್ಯಾವನ್ನು ನೋಯಿಸಲು ನೋಡುತ್ತಿಲ್ಲ. ನಾನು ರಷ್ಯಾದ ಜನರನ್ನು ಪ್ರೀತಿಸುತ್ತೇನೆ ಮತ್ತು ಅಧ್ಯಕ್ಷ ಪುಟಿನ್ ಅವರೊಂದಿಗೆ ಯಾವಾಗಲೂ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಯುಕ್ರೇನ್ ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಮುಂದಾಗದಿದ್ದರೆ ಮಾಸ್ಕೋ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸಬಹುದು ಎಂದು ಡೊನಾಲ್ಡ್ ಟ್ರಂಪ್ ಈ ಹಿಂದೆ ರಷ್ಯಾಕ್ಕೆ ಎಚ್ಚರಿಕೆ ನೀಡಿದ್ದರು. ಇದರೊಂದಿಗೆ ರಷ್ಯಾ ಸಹವರ್ತಿ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಪುಟಿನ್ ಅವರನ್ನು ಭೇಟಿ ಮಾಡಲು ಸಿದ್ಧ ಎಂದು ಟ್ರಂಪ್ ಹೇಳಿದ್ದರು.(ಏಜೆನ್ಸೀಸ್​​)