ನ್ಯೂಸ್

H-1B ವೀಸಾ ಶುಲ್ಕ ಹೆಚ್ಚಳಕ್ಕೆ ತತ್ತರಿಸಿದ ಐಟಿ ಷೇರುಗಳು: ಟೆಕ್ ಮಹೀಂದ್ರಾ, ಇನ್ಫೋಸಿಸ್​, ವಿಪ್ರೋಗೆ ನಷ್ಟ! Donald Trump

Donald Trump : ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು H-1B ವೀಸಾ ಮೇಲಿನ ಶುಲ್ಕವನ್ನು ಗಣನೀಯವಾಗಿ ಹೆಚ್ಚಳ ಮಾಡಿರುವುದು ಭಾರತೀಯ ಐಟಿ ಷೇರುಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲೇ ಐಟಿ ವಲಯ ತತ್ತರಿಸಿ ಹೋಗಿದೆ.

ಅಂದಹಾಗೆ, ಹೊಸದಾಗಿ ಪಡೆಯುವ H-1B ವೀಸಾ ಅರ್ಜಿಗಳ ಮೇಲಿನ ಶುಲ್ಕವನ್ನು 1,00,000 ಡಾಲರ್​ (ಸುಮಾರು 88 ಲಕ್ಷ ರೂಪಾಯಿ)ಗೆ ಹೆಚ್ಚಿಸಿರುವುದರಿಂದ, ಇಂದು (ಸೆ.22) ಐಟಿ ಷೇರುಗಳು ಶೇ. 3 ರಿಂದ 6%ರಷ್ಟು ಕುಸಿತ ಕಂಡಿವೆ. ಭಾರತದ 283 ಬಿಲಿಯನ್ ಡಾಲರ್​ ಮೌಲ್ಯದ ಐಟಿ ಉದ್ಯಮವನ್ನು ವೀಸಾ ಶುಲ್ಕ ಹೆಚ್ಚಳ ತತ್ತರಿಸುವಂತೆ ಮಾಡಿದೆ. ಸೋಮವಾರದ ವಹಿವಾಟು ಕುಸಿತದಿಂದಲೇ ಆರಂಭವಾಗಿದೆ.

ನಿಫ್ಟಿ ಐಟಿ ಸೂಚ್ಯಂಕ ಶೇ. 3% ಹೆಚ್ಚು ಇಳಿಕೆಯಾಗಿ 35,482 ಅಂಕಗಳಿಗೆ ಬಂದಿದೆ. ಇನ್ನು ಸೆನ್ಸೆಕ್ಸ್ 487 ಅಂಕ ಅಥವಾ ಶೇ. 0.59 ರಷ್ಟು ಕುಸಿತದೊಂದಿಗೆ 82,138 ಅಂಕಗಳಿಗೆ ಇಳಿಕೆಯಾದರೆ, ನಿಫ್ಟಿ 50 88 ಪಾಯಿಂಟ್ ಅಥವಾ ಶೇ. 0.35 ರಷ್ಟು ಕುಸಿತದೊಂದಿಗೆ 25,238 ಅಂಕಗಳಿಗೆ ತಲುಪಿದೆ.

ವೀಸಾ ಸೃಷ್ಟಿಸಿರುವ ಮಾರುಕಟ್ಟೆ ತಲ್ಲಣದಿಂದಾಗಿ ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್ ಟೆಕ್ ಮತ್ತು ಟೆಕ್ ಮಹಿಂದ್ರಾ ಇತ್ಯಾದಿ ಕಂಪನಿಗಳ ಷೇರುಗಳು ಭಾರಿ ಹೊಡೆತ ಕಂಡಿವೆ. ಆದರೆ, ಆಟೋ ಮೊಬೈಲ್​, ಎಫ್‌ಎಂಸಿಜಿ ಮತ್ತು ಮಾಧ್ಯಮಗಳು ಸ್ಥಿರತೆ ಕಾಯ್ದುಕೊಂಡಿವೆ.

ಆರಂಭಿಕ ವಹಿವಾಟಿನಲ್ಲೇ ಟೆಕ್​ ಮಹೀಂದ್ರಾ ಕಂಪನಿ ಸುಮಾರು ಶೇ. 6 ರಷ್ಟು ನಷ್ಟ ಅನುಭವಿಸಿದ್ದು, ಅತಿದೊಡ್ಡ ನಷ್ಟಗಳಲ್ಲಿ ಒಂದಾಗಿದೆ. ಮಧ್ಯಮ ಹಂತದ ಸಂಸ್ಥೆಗಳಾದ ಪರ್ಸಿಸ್ಟೆಂಟ್ ಸಿಸ್ಟಮ್ಸ್, ಎಲ್‌ಟಿಐಮೈಂಡ್‌ಟ್ರೀ ಮತ್ತು ಎಂಫಸಿಸ್ ಸಹ ತಲಾ 5% ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಈ ಅಂಕಿ-ಅಂಶ ಹೊಸ H-1B ಅನುಮೋದನೆಗಳ ಮೇಲೆ ಹೆಚ್ಚಿನ ಅವಲಂಬನೆಯನ್ನು ಹೊಂದಿರುವ ಕಂಪನಿಗಳ ದುರ್ಬಲತೆಯನ್ನು ಒತ್ತಿಹೇಳುತ್ತದೆ.

ಈ ಕುಸಿತದಿಂದ ಐಟಿ ಕ್ಷೇತ್ರದ ಮಾರುಕಟ್ಟೆ ಮೌಲ್ಯ 63,000 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ವೀಸಾ ಶುಲ್ಕ ಹೆಚ್ಚಳವು ಮಧ್ಯಮ ಮತ್ತು ದೀರ್ಘಕಾಲೀನವಾಗಿ ಐಟಿ ಕಂಪನಿಗಳ ಮೇರ್ಜಿನ್‌ಗಳಿಗೆ (100-400 ಬೇಸಿಸ್ ಪಾಯಿಂಟ್‌ಗಳಷ್ಟು) ಒತ್ತಡ ಹಾಕಬಹುದು ಆದರೆ, ದೊಡ್ಡ ಕಂಪನಿಗಳು ಈ ವೆಚ್ಚವನ್ನು ಹೊಂದಿಕೊಳ್ಳಬಹುದು. ಇನ್ನು ಷೇರು ಮಾರುಕಟ್ಟೆಯ ತಲ್ಲಣವು ಭಾರತೀಯ ಐಟಿ ಕಂಪನಿಗಳ ಅಮೆರಿಕದ ಮೇಲಿನ ಅವಲಂಬನೆಯನ್ನು ಎತ್ತಿ ತೋರಿಸುತ್ತದೆ. ಏಕೆಂದರೆ, ಭಾರತೀಯ ಕಂಪನಿಗಳು H-1B ವೀಸಾಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿಯನ್ನು ಅಮೆರಿಕಕ್ಕೆ ಕಳುಹಿಸುತ್ತವೆ. (ಏಜೆನ್ಸೀಸ್​)