ನ್ಯೂಸ್

ಮೆತ್ತಗಾದ ದೊಡ್ಡಣ್ಣ: ಕರೊನಾ ಚೀನಿ ವೈರಸ್ ಅಲ್ಲವೆಂದ ಟ್ರಂಪ್​

ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ ಇದೀಗ ಕರೊನಾ ವೈರಸ್ ಮಹಾಮಾರಿಯ ಸಂಕಟದ ನಡುವೆ ಇದ್ದಕ್ಕಿದ್ದಂತೆ ಕದನ ವಿರಾಮ ಘೊಷಿಸಿವೆ. ಜಗತ್ತನ್ನೇ ತಲ್ಲಣಗೊಳಿಸಿರುವ ವೈರಾಣನ್ನು ‘ವುಹಾನ್ ವೈರಸ್’, ‘ಚೀನಿ ವೈರಸ್’ ಎನ್ನುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಧೋರಣೆಯಲ್ಲಿ ಮೆತ್ತಗಾಗಿದ್ದಾರೆ.

ಮಾರ್ಚ್ 26ರಂದು ಚೀನಿ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ನಂತರದಿಂದ ಚೀನಾವನ್ನು ಟೀಕಿಸುವುದರಿಂದ ಟ್ರಂಪ್ ದೂರವುಳಿದಿದ್ದಾರೆ. ಯಾವುದೇ ಮುಲಾಜಿಲ್ಲದೆ ಚೀನಾವನ್ನು ಟೀಕಿಸುತ್ತಿದ್ದ ಅವರು ಈಗ ‘ಚೀನಿ ವೈರಸ್’ ಪದ ಬಳಕೆಯನ್ನು ಕೈಬಿಟ್ಟಿದ್ದಾರೆ. ವುಹಾನ್ ವೈರಸ್ ಎಂದೇ ಸಂಬೋಧಿಸುತ್ತಿದ್ದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಕೂಡ ಈಗ ಸಹಕಾರದ ಮಾತನಾಡಲು ಆರಂಭಿಸಿದ್ದಾರೆ.

‘ಇದೊಂದು ಜಾಗತಿಕ ಸಾಂಕ್ರಾಮಿಕ ರೋಗವೆಂಬುದು ನಮಗೆ ಗೊತ್ತು. ಅದನ್ನು ಎದುರಿಸಲು ಪ್ರತಿಯೊಂದು ದೇಶ ಒಟ್ಟಾಗಿ ಕೆಲಸ ಮಾಡಲು ಇದು ಸಕಾಲ’ ಎಂದು ಪಾಂಪಿಯೋ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.