ನ್ಯೂಸ್

ಇಸ್ರೇಲ್​-ಇರಾನ್​ ಕದನ ವಿರಾಮಕ್ಕೆ ಒಪ್ಪಿವೆ ಎಂದ ಡೊನಾಲ್ಡ್​ ಟ್ರಂಪ್​: ಅದೆಲ್ಲ ಸುಳ್ಳು ಎಂದ ಟೆಹರಾನ್​! Donald Trump

Donald Trump : ಇಸ್ರೇಲ್ ಮತ್ತು ಇರಾನ್ ಸಂಪೂರ್ಣ ಕದನ ವಿರಾಮ ಒಪ್ಪಂದಕ್ಕೆ ಬಂದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಆದರೆ, ಇರಾನ್, ಟ್ರಂಪ್​ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಕದನ ವಿರಾಮದ ಕುರಿತು ಯಾವುದೇ ಒಪ್ಪಂದ ಆಗಿಲ್ಲ ಎಂದು ಹೇಳಿದೆ.

ತಮ್ಮ ಸಾಮಾಜಿಕ ಜಾಲತಾಣ ಟ್ರೂತ್​ನಲ್ಲಿ ಬರೆದುಕೊಂಡಿರುವ ಟ್ರಂಪ್​, ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಕದನ ವಿರಾಮ ನಡೆಯಲಿದೆ. ಕದನ ವಿರಾಮಕ್ಕೆ ಎರಡೂ ದೇಶಗಳು ಸಂಪೂರ್ಣವಾಗಿ ಒಪ್ಪಿಕೊಂಡಿವೆ ಎಂದಿದ್ದಾರೆ. 12 ದಿನಗಳ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ. ಪ್ರತಿಯೊಂದು ಕದನ ವಿರಾಮದ ಸಮಯದಲ್ಲಿ, ಇನ್ನೊಂದು ಕಡೆಯವರು ಶಾಂತಿಯುತ ಮತ್ತು ಗೌರವಯುತವಾಗಿರುತ್ತಾರೆಂದು ಟ್ರಂಪ್​ ಒತ್ತಿ ಹೇಳಿದರು. ಅಲ್ಲದೇ, ಎರಡೂ ದೇಶಗಳನ್ನು ಟ್ರಂಪ್​ ಅಭಿನಂದಿಸಿದರು.

ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಇಸ್ರೇಲ್ ಮತ್ತು ಇರಾನ್ ತೋರಿದ ಸಹಿಷ್ಣುತೆ, ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಅಮೆರಿಕ ಅಧ್ಯಕ್ಷರು ಶ್ಲಾಘಿಸಿದರು. ಇದು ವರ್ಷಗಳ ಕಾಲ ನಡೆಯಬಹುದಾದ ಯುದ್ಧ ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು, ಆದರೆ, ಅದು ಆಗಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ! ದೇವರು ಇಸ್ರೇಲ್ ಅನ್ನು ಆಶೀರ್ವದಿಸಲಿ, ದೇವರು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಆಶೀರ್ವದಿಸಲಿ ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ ಎಂದು ಟ್ರಂಪ್​ ಹೇಳಿದ್ದಾರೆ.

ಇಸ್ರೇಲ್ ಜೊತೆಗಿನ ಯುದ್ಧವನ್ನು ನಿಲ್ಲಿಸಲು ಅಮೆರಿಕವು ಕತಾರ್ ಮಧ್ಯಸ್ಥಿಕೆಯಲ್ಲಿ ಮಂಡಿಸಿದ ಕದನ ವಿರಾಮ ಪ್ರಸ್ತಾಪಕ್ಕೆ ಟೆಹರಾನ್​ ಒಪ್ಪಿಕೊಂಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಎರಡೂ ಕಡೆಯವರು ಹೊಸ ದಾಳಿಗಳ ಬೆದರಿಕೆ ಹಾಕಿದ ಕೆಲವೇ ನಿಮಿಷಗಳ ಬಳಿಕ ಟ್ರಂಪ್ ಕದನ ವಿರಾಮ ಘೋಷಿಸಿದರು. ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ನಂತರ ಈ ಘೋಷಣೆ ಬಂದಿದೆ. ಆದರೆ, ಇರಾನ್​ ಕದನ ವಿರಾಮವನ್ನು ತಳ್ಳಿಹಾಕಿದ್ದು, ಯುದ್ಧದ ಭೀತಿ ಹಾಗೇ ಮುಂದುವರಿದಿದೆ.

ಇನ್ನು ಇರಾನ್​ ನಡೆಸಿದ ದಾಳಿಯನ್ನು "ತುಂಬಾ ದುರ್ಬಲ" ಮತ್ತು "ನಿರೀಕ್ಷಿತ" ಎಂದು ಟ್ರಂಪ್​ ಕರೆದರು. ಟ್ರೂತ್​ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್​, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಇರಾನಿನ ಪರಮಾಣು ಸೌಲಭ್ಯಗಳನ್ನು "ನಾಶಪಡಿಸಿದ" ನಂತರ ಇರಾನ್ 14 ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಟ್ರಂಪ್ ದೃಢಪಡಿಸಿದರು. ಅವುಗಳಲ್ಲಿ 13 ಕ್ಷಿಪಣಿಗಳನ್ನು ತಡೆಹಿಡಿಯಲಾಯಿತು ಎಂದರು.

ಇದಕ್ಕೂ ಮೊದಲು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಅಮೆರಿಕದ ಆಕ್ರಮಣವನ್ನು ಟೀಕಿಸಿದರು. ಯುದ್ಧದಿಂದ ಹಾನಿಗೊಳಗಾದ ಪ್ರದೇಶ, ಉರಿಯುತ್ತಿರುವ ಕಟ್ಟಡಗಳು, ಕತ್ತಲೆ, ಹೊಗೆಯುಕ್ತ ಆಕಾಶ, ಕಂಬದ ಮೇಲೆ ಉರಿಯುತ್ತಿರುವ ಅಮೆರಿಕನ್ ಧ್ವಜದ ಚಿತ್ರವನ್ನು ಖಮೇನಿ ಅವರು ಪೋಸ್ಟ್ ಮಾಡಿ, ನಾವು ಯಾರಿಗೂ ಹಾನಿ ಮಾಡಿಲ್ಲ ಮತ್ತು ಯಾವುದೇ ಸಂದರ್ಭದಲ್ಲೂ ನಾವು ಯಾರಿಂದಲೂ ಯಾವುದೇ ಕಿರುಕುಳವನ್ನು ಸ್ವೀಕರಿಸುವುದಿಲ್ಲ ಹಾಗೂ ನಾವು ಯಾರ ಕಿರುಕುಳಕ್ಕೂ ಮಣಿಯುವುದಿಲ್ಲ. ಇದು ಇರಾನ್ ರಾಷ್ಟ್ರದ ತರ್ಕ ಎಂದು ಬರೆದುಕೊಂಡಿದ್ದರು. ಸದ್ಯ ಉಭಯ ರಾಷ್ಟ್ರಗಳ ನಡುವಿನ ಯುದ್ಧದ ಸ್ಥಿತಿ ಹಾಗೇ ಮುಂದುವರಿದಿದೆ. ಯಾವಾಗ ನಿಲ್ಲುತ್ತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)