ನ್ಯೂಸ್

ವಿಮಾನ ಸಂಚಾರ ಪುನಾರಂಭ; ಲಾಕ್​ಡೌನ್ ಬಳಿಕ ಮೊದಲ ಬಾರಿಗೆ ವೈಮಾನಿಕ ಸೇವೆ ಶುರು, ಹಲವು ರಾಜ್ಯಗಳ ಆಕ್ಷೇಪ

ನವದೆಹಲಿ: ಕರೊನಾ ವೈರಸ್ ತಡೆಯಲು ಹೇರಲಾಗಿರುವ ರಾಷ್ಟ್ರವ್ಯಾಪಿ ಲಾಕ್​ಡೌನ್ ಸಡಿಲಿಕೆ ನಡುವೆ ಸೋಮವಾರದಿಂದ ದೇಶೀಯ ವಿಮಾನ ಸಂಚಾರ ಆರಂವಾಗಲಿದೆ. ಆದರೆ ಕೇಂದ್ರದ ಯೋಜನೆಗೆ ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಜತೆಗೆ ವಿಮಾನ ಸಂಚಾರ ನಿಯಮಗಳ ಬಗ್ಗೆಯೂ ಗೊಂದಲ ಇದೆ.

ದೇಶದ ಅತ್ಯಂತ ಹೆಚ್ಚು ಸಂಚಾರ ದಟ್ಟಣೆಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಮಹಾರಾಷ್ಟ್ರ (ಮುಂಬೈ), ಪಶ್ಚಿಮ ಬಂಗಾಳ (ಕೊಲ್ಕತಾ) ಮತ್ತು ತಮಿಳುನಾಡು (ಚೆನ್ನೈ) ಸಂಚಾರ ಪುನಾರಂಭಕ್ಕೆ ಒಲವು ವ್ಯಕ್ತಪಡಿಸಿಲ್ಲ.

ಈ ಹಿಂದಿನ ಆದೇಶ ವಿಶೇಷ ವಿಮಾನಗಳ ಹಾರಾಟಕ್ಕೆ ಮಾತ್ರ ಅನುಮತಿ ಕಲ್ಪಿಸಿತ್ತು. ಇದೀಗ ದೇಶೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿದರೆ ಹೆಚ್ಚು ಜನರು ರಾಜ್ಯಕ್ಕೆ ಬರುತ್ತಾರೆ. ಇದರಿಂದ ಸಮಸ್ಯೆಯಾಗಲಿದೆ. ವಿಮಾನ ಸಂಚಾರವನ್ನು ಇನ್ನಷ್ಟು ದಿನ ಮುಂದೂಡಬೇಕು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರ ಇಡೀ ದೇಶದಲ್ಲಿ ಹೆಚ್ಚು ಕರೊನಾ ಸೋಂಕಿತರಿರುವ ರಾಜ್ಯವಾಗಿದ್ದು ಕೆಂಪು ವಲಯದಲ್ಲಿದೆ. ಎರಡನೇ ಅತಿ ಹೆಚ್ಚು ಸೋಂಕಿತರಿರುವ ತಮಿಳುನಾಡು ಕೂಡ ಇದೇ ಅಭಿಪ್ರಾಯ ಹೊಂದಿದೆ. ವಿಮಾನ ಸಂಚಾರ ಪುನಾರಂಭ ನಿರ್ಧಾರವನ್ನು ಮೇ 31ರ ವರೆಗೆ ತಡೆಹಿಡಿಯುವಂತೆ ಅದು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದೆ. ಅಂಫಾನ್ ಚಂಡಮಾರುತದಿಂದ ಆಗಿರುವ ಅಪಾರ ಹಾನಿ ಹಿನ್ನೆಲೆಯಲ್ಲಿ ಕನಿಷ್ಠ ಮೇ 30ರ ವರೆಗೆ ಕೋಲ್ಕತಾಗೆ ವಿಮಾನ ಹಾರಾಟ ತಡೆ ಹಿಡಿಯುವಂತೆ ಪಶ್ಚಿಮ ಬಂಗಾಳ ಕೋರಿದೆ.

ಕೇಂದ್ರ, ರಾಜ್ಯಗಳ ಅಧಿಕಾರ: ವಿಮಾನ ಸಂಚಾರ ಪುನಾರಂಭದ ಅಧಿಕಾರ ಕೇಂದ್ರ ಸರ್ಕಾರಕ್ಕೆ ಸೇರಿದ್ದು. ಆದರೆ ವಿಮಾನ ಇಳಿದರೂ ಅದರಲ್ಲಿರುವ ಪ್ರಯಾಣಿಕರನ್ನು ತಡೆಯುವ ಮತ್ತು ನಿಲ್ದಾಣದಿಂದ ಹೊರಹೋಗದಂತೆ ತಡೆಯುವ ಅಧಿಕಾರ ರಾಜ್ಯಗಳಿಗಿದೆ.

ದೆಹಲಿ ಸಜ್ಜು: ಸುಮಾರು 380 ವಿಮಾನಗಳನ್ನು ನಿರ್ವಹಿಸಲು ದೆಹಲಿ ವಿಮಾನ ನಿಲ್ದಾಣ ಸಜ್ಜಾಗಿದೆ. 190 ವಿಮಾನಗಳು ಹೊರ ಹೋಗಲಿವೆ ಹಾಗೂ 190 ವಿಮಾನಗಳು ನಿಲ್ದಾಣಕ್ಕೆ ಬರಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಮಾರ್ಗಸೂಚಿ: ವಿದೇಶಗಳಿಂದ ವಾಪಸ್ ಕರೆ ತರಲಾಗುವ ಪ್ರಯಾಣಿಕರನ್ನು ಅವರದೇ ವೆಚ್ಚದಲ್ಲಿ 14 ದಿನ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮತ್ತು ಏಳು ದಿನಗಳ ಹೋಂ ಕ್ವಾರಂಟೈನ್​ಗೆ ಒಳಪಡಿಸುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾರ್ಗಸೂಚಿ ಹೊರಡಿಸಿದೆ.

ನಿಯಮಗಳಿಗೆ ಬದ್ಧವಾಗಿರುವ ಬಗ್ಗೆ ಪ್ರಯಾಣಿಕರು ವಿಮಾನದಿಂದ ಇಳಿಯುವ ಸಂದರ್ಭದಲ್ಲಿ ಮುಚ್ಚಳಿಕೆ ಬರೆದುಕೊಡಬೇಕು. ಬಾಣಂತಿಯರು, ಕುಟುಂಬದಲ್ಲಿ ಸಾವು, ಗಂಭೀರ ಅನಾರೋಗ್ಯ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಬಂದ ಪಾಲಕರಿಗೆ ವಿನಾಯಿತಿ ನೀಡಲಾಗುವುದೆಂದು ಮಾರ್ಗಸೂಚಿ ತಿಳಿಸಿದೆ. ಆರೋಗ್ಯ ಸೇತು ಆಪ್ ಡೌನ್​ಲೋಡ್ ಮಾಡುಕೊಳ್ಳುವಂತೆಯೂ ಸೂಚಿಸಲಾಗುತ್ತದೆ. ದೇಶೀಯ ಸಂಚಾರಗಳಿಗೂ ನಿಯಮಗಳನ್ನು ಪ್ರಕಟಿಸಲಾಗಿದೆ. ಆಯಾ ರಾಜ್ಯಗಳಿಗೆ ಆಗಮಿಸುವ ಪ್ರಯಾಣಿಕರನ್ನು ಕ್ವಾರಂಟೈನ್ ಮತ್ತು ಐಸೊಲೇಷನ್​ಗೆ ಒಳಪಡಿಸುವ ಶಿಷ್ಟಾಚಾರಗಳನ್ನು ರಾಜ್ಯಗಳೇ ರೂಪಿಸಬಹುದು ಎಂದು ಅದು ಸ್ಪಷ್ಟಪಡಿಸಿದೆ.

ಜೂನ್ ಒಂದರಿಂದ ಕೆಲವು ರೈಲುಗಳ ಸಂಚಾರ ಆರಂಭಿಸುವುದಾಗಿ ಭಾರತೀಯ ರೈಲ್ವೆ ಹೇಳಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್ ಟರ್ವಿುನಲ್​ಗಳಿಂದ ಹೊರ ಹೋಗುವ ಪ್ರಯಾಣಿಕರ ಥರ್ಮಲ್ ಸ್ಕಿ›ೕನಿಂಗ್ ಕಡ್ಡಾಯವಾಗಿ ನಡೆಸಬೇಕು. ಪ್ರಯಾಣಿಕರು ಅನುಸರಿಸಬೇಕಾದ ಕ್ರಮಗಳನ್ನು ಟಿಕೆಟ್ ಮೇಲೆ ಮುದ್ರಿಸುವಂತೆಯೂ ಅದು ಸೂಚಿಸಿದೆ.