ಪುನೀತ್ ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ದಾಸಕೊಪ್ಪದಲ್ಲಿ ಆಯೋಜಿಸಿದ್ದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಾವಿದರು.  
ನ್ಯೂಸ್

ಡೊಳ್ಳು ಕುಣಿತಕ್ಕೆ ಸಿಗಲಿ ಪ್ರಾಶಸ್ತ್ಯ

ಶಿವಕುಮಾರ ಎಸ್.ಪಿ.

ಆನಂದಪುರ: ಡೊಳ್ಳು ಕುಣಿತ ಕಲೆ ಬಗೆಗಿನ ಆಸಕ್ತಿ ಪ್ರಸ್ತುತ ಕ್ಷೀಣಿಸುತ್ತಿದೆ. ಯುವಕರು ಈ ಗಂಡುಕಲೆಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ತಿಳಿಸಿದರು.

ದಾಸಕೊಪ್ಪದಲ್ಲಿ ಪುನೀತ್ ರಾಜ್‌ಕುಮಾರ್ ಜನ್ಮದಿನ ನಿಮಿತ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಡೊಳ್ಳು ಕುಣಿತ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡೊಳ್ಳು ಕುಣಿತ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾದ ಕಲೆ. ಕಲಾವಿದರು ಇದರಲ್ಲಿ ತನ್ಮಯದಿಂದ ಬಾರಿಸುತ್ತ ನರ್ತಿಸುತ್ತಾರೆ. ವಿವಿಧ ಮಾಧ್ಯಮಗಳ ಪ್ರಭಾವ, ಕ್ರಿಕೆಟ್, ಮೊಬೈಲ್ ಗೇಮ್‌ಗಳ ಗೀಳಿನಿಂದ ಜಾನಪದ ಕಲೆಗಳಿಂದ ಯುವಕರು ವಿಮುಖರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಮಾತನಾಡಿ, ಬಳ್ಳಾರಿ, ಬೆಳಗಾವಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಹುಟ್ಟಿಕೊಂಡಿದ್ದ ಡೊಳ್ಳು ಕುಣಿತ ಕಲೆ ಮಲೆನಾಡಿನಲ್ಲಿ ಅತ್ಯಂತ ಜನಪ್ರಿಯವಾಯಿತು. ಮನಸ್ಸನ್ನು ಸೂರೆಗೊಳಿಸುವ ಅದ್ಭುತ ಕಲೆ ಇದು. ಭವಿಷ್ಯದಲ್ಲಿ ಇಂತಹ ಸ್ಪರ್ಧೆಗಳು ಇನ್ನಷ್ಟು ನಡೆಯುವ ಅಗತ್ಯವಿದೆ ಎಂದರು.

ಆನಂದಪುರ ಗ್ರಾಪಂ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ರೂಪಾ, ಹೊಸೂರು ಗ್ರಾಪಂ ಸದಸ್ಯರಾದ ಚೌಡಪ್ಪ, ಶರತ್ ನಾಗಪ್ಪ, ಸಾಗರದ ನವಚೇತನ ಟ್ರಸ್ಟ್ ಅಧ್ಯಕ್ಷ ಕೆ.ಪ್ರಶಾಂತ, ಬಗರ್‌ಹುಕುಂ ಸಮಿತಿ ಸದಸ್ಯ ರವಿಕುಮಾರ್, ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷ ಜಯಪ್ರಕಾಶ, ಪದಾಧಿಕಾರಿಗಳಾದ ನಾಗರಾಜ್, ವಿನಯ್, ರಾಜು, ಪ್ರಶಾಂತ ಕೋವಿ, ಸತೀಶ್, ರಾಘವೇಂದ್ರ ಇದ್ದರು.