ಚಿಕ್ಕಮಗಳೂರು: ದಸರಾ ಹಬ್ಬದ ಅಂಗವಾಗಿ ನಗರದ ಕೋಟೆಯ ಅಗ್ರಹಾರ ವೃತ್ತದ ಬಳಿ ಇರುವ ಪುರೋಹಿತ ಅಶ್ವಥ್ಥನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ಅವರ ಮನೆಯಲ್ಲಿ ಕೂರಿಸಿರುವ ಪಟ್ಟದ ಗೊಂಬೆಗಳು ಮೈಸೂರು ರಾಜ ಪರಂಪರೆಯ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿವೆ.
ಯದುವಂಶಸ್ಥರ ಪರಂಪರೆಯನ್ನು ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಪಟ್ಟದ ಗೊಂಬೆಗಳು, ಮೈಸೂರು ಮಹಾರಾಜರ ದಸರಾ ದರ್ಬಾರ್, ಜಂಬೂಸವಾರಿ, ಅರಮನೆ, ಸಾಂಪ್ರದಾಯಿಕ ಆಚರಣೆಗಳ ವೈಭವವನ್ನು ಸಾರುತ್ತಿವೆ. ವಿವಿಧ ದೇವತೆಗಳನ್ನು ಕೆತ್ತಲಾಗಿದೆ.
ಕಲಿಯುಗದ ಹೆದ್ದೈವ ಪದ್ಮಾವತಿ ಹಾಗೂ ಶ್ರೀನಿವಾಸ ಕಲ್ಯಾಣದ ವೈಭವವನ್ನು ಸಾರುವ ಗೊಂಬೆಗಳು ಗಮನ ಸೆಳೆಯುತ್ತಿವೆ. ವರನ ದಿಬ್ಬಣವನ್ನು ಎದುರುಗೊಳ್ಳುವುದು, ವರಪೂಜೆ, ಮಾಂಗಲ್ಯಧಾರಣೆ, ಲಾಜಾ ಹೋಮ, ಸಪ್ತಪದಿ ಸೇರಿ ಮದುವೆಯ ವಿಧಿವಿಧಾನಗಳನ್ನು ಪರಿಚಯಿಸುತ್ತಿವೆ.
ತಿರುಪತಿಯ ಸಪ್ತಗಿರಿ ಬೆಟ್ಟ, ಅಲ್ಲಿನ ಪ್ರಕೃತಿ ಸೌಂದರ್ಯ, ಶ್ರೀ ವೆಂಕಟೇಶ್ವರ ದೇಗುಲದ ಸ್ತಬ್ಧಚಿತ್ರ, ದೇವತೆಗಳು ಮತ್ತು ರಾಕ್ಷಸರ ನಡುವಿನ ಅಮೃತ ಮಥನದ ದೃಶ್ಯಗಳು, ಪ್ರಾಚೀನ ಕಾಲದ ಗುರುಕುಲ ಪದ್ಧತಿ ಗೊಂಬೆಗಳ ಮೂಲಕ ಅನಾವರಣಗೊಂಡಿದೆ.
ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಬೆರಳಿನಲ್ಲಿ ಎತ್ತಿ ಹಿಡಿದು ಗೋಪಾಲಕರು ಮತ್ತು ಗೋವುಗಳನ್ನು ರಕ್ಷಿಸುವ ದೃಶ್ಯ, ಕೈಲಾಸ ಪರ್ವತದಲ್ಲಿ ಬ್ರಹ್ಮ, ವಿಷ್ಣು, ನಂದಿ, ಭೃಂಗಿ, ಶಿವಗಣಗಳ ಋಷಿಮುನಿಗಳ ನಡುವೆ ಶಿವ ಪಾರ್ವತಿಯರ ಒಡ್ಡೋಲಗದ ದೃಶ್ಯವನ್ನು ಸಾಕ್ಷೀಕರಿಸುತ್ತಿವೆ ಗೊಂಬೆಗಳು.
ಭಗವಾನ್ ಶ್ರೀಕೃಷ್ಣನ ಗೀತೋಪದೇಶ, ಮಹಾವಿಷ್ಣುವಿನ ದಶವತಾರ, ಕೃಷಿ ಚಟುವಟಿಕೆ, ಸಂತೆ ದೃಶ್ಯ, ಭಾರತೀಯ ಹಬ್ಬಗಳಾಚರಣೆ, ಸಂಪ್ರದಾಯಗಳನ್ನು ತೆರೆದಿಡುವ ನೂರಾರು ಗೊಂಬೆಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತಿವೆ.
ಆಧುನಿಕತೆಯ ಭರದಲ್ಲಿ ನಮ್ಮ ಮಕ್ಕಳು ಮತ್ತು ಯುವಜನತೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಆಚರಣೆಗಳನ್ನು ಮರೆಯುತ್ತಿದ್ದಾರೆ. ಹಾಗಾಗಿ ಅವುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪಟ್ಟದ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ ಎನ್ನುತ್ತಾರೆ ಪುರೋಹಿತ ಅಶ್ವಥ್ಥನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ.