ನವದೆಹಲಿ: ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಕೊಂಡಾಡಿದ್ದಾರೆ. ಅಲ್ಲದೆ, ಭಾರತವನ್ನು ನೋಡಿ ಕಲಿಯಿರಿ ಎಂದು ತಮ್ಮ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ರಷ್ಯಾದ ವ್ಲಾಡಿವೋಸ್ಟಾಕ್ನಲ್ಲಿ ನಡೆದ 8ನೇ ಪೂರ್ವ ಆರ್ಥಿಕ ವೇದಿಕೆಯಲ್ಲಿ ರಷ್ಯಾ ನಿರ್ಮಿತ ಕಾರುಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುವಾಗ ವ್ಲಾಡಿಮಿರ್ ಪುಟಿನ್ ಅವರು ಭಾರತದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಉದಾಹರಣೆ ನೀಡಿ ಪ್ರಧಾನಿ ಮೋದಿ ಅವರನ್ನು ಹೊಗಳಿದರು.
ದೇಶೀಯವಾಗಿ ತಯಾರಿಸಿದ ವಾಹನಗಳನ್ನು ಖಂಡಿತವಾಗಿ ಬಳಸಬೇಕು. ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಈಗಾಗಲೇ ಉದಾಹರಣೆ ಸ್ಥಾಪಿಸಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಅನೇಕ ಪಾಲುದಾರರಿಂದ, ಅದರಲ್ಲೂ ವಿಶೇಷವಾಗಿ ಭಾರತದಿಂದ ತುಂಬಾ ಕಲಿಯಬೇಕಿದೆ. ಅವರು ಹೆಚ್ಚಾಗಿ ಭಾರತದಲ್ಲೇ ಉತ್ಪಾದಿಸುವ ಕಾರುಗಳ ಬಳಕೆಯ ಮೇಲೆ ಕೇಂದ್ರೀಕರಿಸುತ್ತಿದ್ದಾರೆ. ಇದರಲ್ಲಿ ಪ್ರಧಾನಿ ಮೋದಿ ಅವರ ಪಾತ್ರ ಪ್ರಮುಖವಾಗಿದೆ. ಭಾರತದ ಉತ್ಪನ್ನಗಳನ್ನು ಬಳಸಲು ಜನರನ್ನು ಉತ್ತೇಜಿಸುವ ಮೂಲಕ ಸರಿಯಾದ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿಯೂ ಅಂತಹ ವಾಹನಗಳೂ ಲಭ್ಯವಿವೆ ಮತ್ತು ನಾವು ಅದನ್ನು ಬಳಸಿಕೊಳ್ಳಬೇಕು ಎಂದು ಪುಟಿನ್ ಹೇಳಿದರು.
ನಿಮಗೆ ಗೊತ್ತಾ ಆಗ ನಮ್ಮಲ್ಲಿ ಸ್ವದೇಶಿ ನಿರ್ಮಿತ ಕಾರುಗಳಿರಲಿಲ್ಲ. ಆದರೆ, ಈಗ ನಾವು ಹೊಂದಿದ್ದೇವೆ. ನಾವು 1990ರ ದಶಕದಲ್ಲಿ ಅಪಾರ ಪ್ರಮಾಣದಲ್ಲಿ ಖರೀದಿಸಿದ ಮರ್ಸಿಡಿಸ್ ಅಥವಾ ಆಡಿ ಕಾರುಗಳಿಗಿಂತ ಸ್ವದೇಶಿ ಕಾರುಗಳು ಹೆಚ್ಚು ಸಾಧಾರಣವಾಗಿ ಕಾಣುತ್ತವೆ ಎಂಬುದು ನಿಜ, ಆದರೆ ಇದು ಸಮಸ್ಯೆಯಲ್ಲ. ಈ ವಿಚಾರದಲ್ಲಿ ನಾವು ನಮ್ಮ ಅನೇಕ ಪಾಲುದಾರರನ್ನು ಅನುಕರಿಸಬೇಕು ಎಂದು ನಾನು ಭಾವಿಸುತ್ತೇನೆ, ಉದಾಹರಣೆಗೆ ಭಾರತ. ಅಲ್ಲಿ ದೇಶಿ ನಿರ್ಮಿತ ವಾಹನಗಳ ತಯಾರಿಕೆ ಮತ್ತು ಬಳಕೆಯ ಮೇಲೆ ಕೇಂದ್ರೀಕರಿಸಿದ್ದಾರೆ ಎಂದರು.
ನಾವು ನಮ್ಮದೇಯಾದ ಆಟೋಮೊಬೈಲ್ಸ್ ಹೊಂದಿದ್ದೇವೆ. ಅವುಗಳನ್ನು ಖಂಡಿತವಾಗಿ ಬಳಸಬೇಕು. ಸ್ವದೇಶಿ ಆಟೋ ಮೊಬೈಲ್ಸ್ ಬಳಸುವುದು ಸಂಪೂರ್ಣ ಉತ್ತಮವಾಗಿದೆ. ಇದು ನಮ್ಮ ವಿಶ್ವ ವ್ಯಾಪಾರ ನೀತಿಯ ಬಾಧ್ಯತೆಗಳ ಯಾವುದೇ ಉಲ್ಲಂಘನೆಗಳಿಗೆ ಕಾರಣವಾಗುವುದಿಲ್ಲ ಮತ್ತು ಇದು ರಾಜ್ಯದ ಖರೀದಿಗಳಿಗೆ ಸಂಬಂಧಿಸಿದೆ. ವಿವಿಧ ವರ್ಗದ ಅಧಿಕಾರಿಗಳು ಯಾವ ಕಾರುಗಳನ್ನು ಓಡಿಸಬಹುದು ಎಂಬುದರ ಕುರಿತು ನಾವು ನಿರ್ದಿಷ್ಟ ಸರಪಳಿಯನ್ನು ರಚಿಸಬೇಕು, ಇದರಿಂದ ಅವರು ದೇಶೀಯವಾಗಿ ತಯಾರಿಸಿದ ಕಾರುಗಳನ್ನು ಬಳಸುತ್ತಾರೆ ಎಂದು ಹೇಳುವ ಮೂಲಕ ಮೇಡ್ ಇನ್ ರಷ್ಯಾ ಪ್ರಾಮುಖ್ಯತೆಯನ್ನು ಪುಟಿನ್ ಒತ್ತಿ ಹೇಳಿದರು. (ಏಜೆನ್ಸೀಸ್)