ನ್ಯೂಸ್

ಎರಡು ನಾಯಿಗಳಿಗೆ ಆತ್ಮೀಯ ಬೀಳ್ಕೊಡುಗೆ, ಜತೆಗೆ ಮೆಚ್ಚುಗೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯ ಕಚೇರಿಯ ಆವರಣದಲ್ಲಿ ಎರಡು ನಾಯಿಗಳಿಗೆ ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಡಲಾಯಿತು. ಜತೆಗೆ 10 ವರ್ಷಗಳಿಂದಲೂ ಉತ್ತಮ ಸೇವೆ ಸಲ್ಲಿಸಿದ ಮೂಕಜೀವಿಗಳ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಯಿತು.

ಪೊಲೀಸರಿಂದ ಗೌರವವನ್ನು ಸ್ವೀಕರಿಸಿದ್ದು ಇಲ್ಲಿನ ಅಪರಾಧ ಪತ್ತೆ ಶ್ವಾನ ಡೈನಾ ಮತ್ತು ಸ್ಫೋಟಕ ಪತ್ತೆ ಶ್ವಾನ ಡಾಲಿ. ಕಳೆದ 2011 ನೇ ಸಾಲಿನಿoದ ಇಲ್ಲಿನ ಪೊಲೀಸ್ ಕಚೇರಿಯ ಶ್ವಾನದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ 10 ವರ್ಷಗಳ ಸುಧೀರ್ಘ ಸೇವೆಯ ಮೂಲಕ ಸೇವೆಯಿಂದ ಬಿಡುಗಡೆಯನ್ನು ಪಡೆದಿವೆ. ಶಾಲು ಹೊದಿಸಿದ ಬಳಿ ಹೂವಿನ ಹಾರವನ್ನು ಹಾಕಿ ಸನ್ಮಾನಿಸಲಾಯಿತು. ಶ್ವಾನಗಳ ಪರವಾಗಿ ತರಬೇತುದಾರರು ಪದಕವನ್ನು ಸ್ವೀಕರಿಸಿದರು. ಇಲಾಖೆಯ ಸಿಬ್ಬಂದಿ ಮಾದರಿಯಲ್ಲಿ ಶ್ವಾನಗಳಿಗೂ ಆತ್ಮೀಯ ಬೀಳ್ಕೊಡುಗೆ ನೀಡುವ ಕಾರ್ಯಕ್ರಮವು ವಿಶೇಷವಾಗಿ ನೆರೆದಿದ್ದವರ ಗಮನ ಸೆಳೆಯಿತು.

ಜಿಲ್ಲೆಯಲ್ಲಿ ಕೊಲೆ, ಕಳ್ಳತನ, ಬಾಂಬ್ ಪತ್ತೆ ಸೇರಿ ಹಲವು ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸುತ್ತಿದ್ದ ಈ ಶ್ವಾನಗಳು, ಸಾಕ್ಷ್ಯಗಳನ್ನು ತ್ವರಿತವಾಗಿ ಸಂಗ್ರಹಿಸಿ ಮತ್ತು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ಉತ್ತಮ ಸಹಕಾರ ನೀಡಿವೆ. ಅದರಲ್ಲೂ ಚುರುಕಿನ ಕಾರ್ಯ ನಿರ್ವಹಣೆಯ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದವು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.