ಲಂಡನ್: ಶೇಕಡ 90ರಷ್ಟು ಕೋವಿಡ್ ಕೇಸ್ಗಳನ್ನು ಪತ್ತೆ ಹಚ್ಚಲು ನಾಯಿಗಳಿಗೆ ತರಬೇತಿ ನೀಡಬಹುದಾಗಿದೆ. ಸೋಂಕಿನ ಲಕ್ಷಣ ಇಲ್ಲದವರ ಪತ್ತೆಯೂ ನಾಯಿಗಳಿಂದ ಸಾಧ್ಯವಿದೆ ಎಂದು ಸೋಮವಾರ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ.
ಲಂಡನ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ನ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಕೋವಿಡ್ ಪಾಸಿಟಿವ್ ಇರುವ ಆದರೆ ಸೋಂಕಿನ ಲಕ್ಷಣವಿಲ್ಲದ ವ್ಯಕ್ತಿಗಳಿಗೆ ಸಂಬಂಧಿತ ವಿಶಿಷ್ಟ ವಾಸನೆಯ ರಾಸಾಯನಿಕ ಸಂಯುಕ್ತವನ್ನು ನಾಯಿಗಳು ಪತ್ತೆ ಹಚ್ಚಬಲ್ಲವು ಎಂಬುದನ್ನು ಪರೀಕ್ಷೆಗಳ ಮೂಲಕ ಖಚಿತ ಪಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ, ಶ್ವಾನಗಳು ಸಾರ್ಸ್ ಸಿಒವಿ2ರ ಶೇಕಡ 82ರಿಂದ ಶೇ. 94 ಸ್ಯಾಂಪಲ್ನ್ನು ಗುರುತಿಸುತ್ತದೆ. ಈ ಯಶಸ್ಸಿನ ಪ್ರಮಾಣವು ಎಷ್ಟು ಪರಿಣಾಮಕಾರಿ ಎನ್ನುವುದನ್ನು ತಿಳಿಯಲು ಸಾಂಪ್ರದಾಯಿಕ ಪಿಸಿಆರ್ ಟೆಸ್ಟ್ ಫಲಿತಾಂಶದೊಂದಿಗೆ ಸಂಶೋಧಕರು ತಾಳೆ ನೋಡಿದ್ದಾರೆ. ಒಲಿಂಪಿಕ್ ಮಾದರಿಯ ಈಜು ಕೊಳದಲ್ಲಿ ಅರ್ಧ ಟೀ ಸ್ಪೂನ್ ಸಕ್ಕರೆಗೆ ಸಮಾನವಾದ ವಾಸನೆಯನ್ನು ಆಘ್ರಾಣಿಸುವ ಸಾಮರ್ಥ್ಯವುಳ್ಳ ನಾಯಿಗಳು ಕ್ಯಾನ್ಸರ್, ಮಲೇರಿಯಾ ಮತ್ತು ಅಪಸ್ಮಾರ (ಎಪಿಲೆಪ್ಸಿ) ಮುಂತಾದ ಕಾಯಿಲೆಗಳನ್ನು ಪತ್ತೆಹಚ್ಚಬಲ್ಲವು ಎಂದು ಈಗಾಗಲೇ ಸಾಬೀತಾಗಿದೆ. ಸಾರ್ಸ್-ಸಿಒವಿ-2 ವ್ಯಾಧಿಯನ್ನು ಶ್ವಾನಗಳು ಪತ್ತೆ ಹಚ್ಚ ಬಲ್ಲವು ಎಂಬುದನ್ನು ಹಿಂದಿನ ಅಧ್ಯಯನಗಳು ಸಾಬೀತುಪಡಿಸಿದ್ದವು.
ಸಾಕ್ಸ್ ಸಂಗ್ರಹ: 200 ಕರೊನಾ ಪೀಡಿತರ ಕಾಲು ಚೀಲಗಳನ್ನು ಕೂಡ ಸಂಗ್ರಹಿಸಲಾಗಿದೆ. ಇವೆಲ್ಲವನ್ನು ಪ್ರಯೋಗಾಲಯದಲ್ಲಿ ಆರು ನಾಯಿಗಳಿಗೆ ತರಬೇತಿ ನೀಡಲು ಬಳಸಲಾಗಿದೆ. ಈ ನಾಯಿಗಳನ್ನು ರಾಸಾಯನಿಕ ಸಂಯುಕ್ತಗಳ ಅಸ್ತಿತ್ವ ಅಥವಾ ಗೈರನ್ನು ತಿಳಿಯಲು ತರಬೇತು ಗೊಳಿಸಲಾಗಿದೆ. ‘ಹುಸಿ ಪಾಸಿಟಿವ್’ಗಳನ್ನು ಗುರುತಿಸಲು ನಾಯಿಗೆ ತರಬೇತಿ ನೀಡಲಾಗುವುದಿಲ್ಲ. ನಿಖರ ಪಾಸಿಟಿವ್ ಮತ್ತು ನೆಗೆಟಿವ್ ಅಂಶವನ್ನು ಅರ್ಥ ಮಾಡಿಕೊಳ್ಳುವ ನಾಯಿಗೆ ರಿವಾರ್ಡ್ ಪಾಯಿಂಟ್ ಸಿಗುತ್ತದೆ ಎಂದು ಲಂಡನ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ನ ಕ್ಲೇರ್ ಗೆಸ್ಟ್ ಹೇಳಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ..: ವಿಮಾನ ನಿಲ್ದಾಣ ಮುಂತಾದ ಕಡೆ ಬರುವ ಪ್ರಯಾಣಿಕರಲ್ಲಿ ಕರೊನಾ ಇರುವುದನ್ನು ಸ್ಕ್ರೀನ್ ಮಾಡಲು ನಾಯಿಗಳನ್ನು ಬಳಸಿದರೆ ಶೇಕಡ 91ರಷ್ಟು ಕೇಸ್ಗಳನ್ನು ಪತ್ತೆ ಹಚ್ಚುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.