ನ್ಯೂಸ್

ಆಸ್ಪತ್ರೆಗೆ ಹೊಕ್ಕು 2 ದಿನದ ಹಸುಳೆಯನ್ನು ಕಚ್ಚಿಕೊಂಡು ಹೋದ ಬೀದಿನಾಯಿ, ಮಗು ಸಾವು..

ಚಂಡೀಗಢ: ಈ ಗಂಡು ಮಗು ಹುಟ್ಟಿ ಬರೀ ಎರಡು ದಿನಗಳಾಗಿದ್ದಷ್ಟೇ, ಆದರೆ ಅಷ್ಟರಲ್ಲೇ ಸಾವು ಕಾಣುವಂತಾಗಿದೆ. ದುರಂತ ಎಂದರೆ ಏನೂ ಅರಿಯದ ಈ ನವಜಾತ ಶಿಶುವಿಗೆ ಕಾರಣವಾಗಿದ್ದು ಒಂದು ಬೀದಿನಾಯಿ. ಖಾಸಗಿ ಆಸ್ಪತ್ರೆಯೊಂದರ ಒಳಗೇ ಬೀದಿನಾಯಿ ಹೊಕ್ಕು ಇಂಥದ್ದೊಂದು ದುರಂತ ಸಾವು ಸಂಭವಿಸಿದೆ.

ಉತ್ತರಪ್ರದೇಶ ಮೂಲದ ಮಹಿಳೆಯೊಬ್ಬರು ಹೆರಿಗೆಯಾದ ಎರಡೇ ದಿನದಲ್ಲೇ ಇಂಥದ್ದೊಂದು ಭಾರಿ ಆಘಾತಕ್ಕೆ ಒಳಗಾಗುವಂತಾಗಿದೆ. ಹರಿಯಾಣದ ಪಾಣಿಪತ್ ಎಂಬಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಪ್ರಕರಣ ನಡೆದಿದೆ. ಹುಟ್ಟಿ ಬರೀ ಎರಡು ದಿನಗಳಾಗಿದ್ದ ಈ ಗಂಡು ಮಗುವನ್ನು ಸೋಮವಾರ ರಾತ್ರಿ ಮಲಗಿಸಿದ್ದು, ಪಕ್ಕದಲ್ಲೇ ಅಜ್ಜಿ ಕೂಡ ಮಲಗಿದ್ದರು. ಮಧ್ಯರಾತ್ರಿಯ ಸುಮಾರಿಗೆ ಆಸ್ಪತ್ರೆಯೊಳಗೆ ಹೊಕ್ಕ ಬೀದಿನಾಯಿ ಕಚ್ಚಿಕೊಂಡು ಹೋಗಿದೆ.

ಮಗು ಇಲ್ಲದಿರುವುದು ಸ್ವಲ್ಪಹೊತ್ತಿನಲ್ಲಿ ಗಮನಕ್ಕೆ ಬಂದಿದೆ. ಆಗ ಸಂಬಂಧಿಕರು ಹುಡುಕಾಡಲು ಆರಂಭಿಸಿದಾಗ ಮಗುವನ್ನು ನಾಯಿ ಕಚ್ಚಿಕೊಂಡು ಹೋಗಿದ್ದು ಸಿಸಿಟಿವಿ ದೃಶ್ಯಾವಳಿಯಿಂದಾಗಿ ಗೊತ್ತಾಗಿದೆ. ಬಳಿಕ ಹೊರಗೆ ಸಿಕ್ಕ ಮಗುವನ್ನು ಡಾಕ್ಟರ್ ಬಳಿಗೆ ಕರೆದೊಯ್ದಾಗ ಅವರು, ಅದಾಗಲೇ ಮೃತಪಟ್ಟಿದ್ದನ್ನು ದೃಢಪಡಿಸಿದ್ದಾರೆ.