ಕೋಲ್ಕತ: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ(ಐಸಿಸ್) ಉಗ್ರ ಸಂಘನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಹಾಗೂ ಒಸಾಮ ಬಿನ್ ಲಾಡೆನ್ ಹೊಡೆದುರುಳಿಸಲು ಅಮೆರಿಕ ಸೇನೆಗೆ ನೆರವಾದ ದಿಟ್ಟ ಶ್ವಾನದ ತಳಿಯನ್ನು ಕೋಲ್ಕತ ಪೊಲೀಸರು ತಮ್ಮ ಕೊಂಬ್ಯಾಟ್ ಫೋರ್ಸ್ಗೆ ನೇಮಕ ಮಾಡಿಕೊಳ್ಳಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗುರುವಾರ ತಿಳಿಸಿದ್ದಾರೆ.
ಶ್ವಾನದ ತಳಿಯನ್ನು ಬೆಲ್ಜಿಯನ್ ಮಾಲಿನೋಯ್ಸ್ ಎಂದು ಹೆಸರಿಸಲಾಗಿದ್ದು, ಕೋಲ್ಕತ ಪೊಲೀಸರು ತಮ್ಮ ವಿಶೇಷ ಶ್ವಾನ ಪಡೆಗೆ ಇದನ್ನು ನೇಮಿಸಿಕೊಳ್ಳಲಿದ್ದಾರೆ. ನಗರದಲ್ಲಿನ ಉಗ್ರ ಚಟುವಟಿಕೆ ವಿರುದ್ಧದ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಉಗ್ರ ಚಟುವಟಿಕೆಯಂತಹ ಪರಿಸ್ಥಿತಿಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಈ ತಳಿಯ ಶ್ವಾನವು ಹೊಂದಿದೆ. ಅಲ್ಲದೆ, ಈಗಾಗಲೇ ಸಾಕಷ್ಟು ಪ್ರಕರಣಗಳಲ್ಲಿ ಅದು ಸಾಬೀತಾಗಿರುವುದು ಶ್ವಾನ ನೇಮಕಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಶ್ವಾನ ಪಡೆಯ ನೂತನ ಕಚೇರಿಯನ್ನು ರಾಜ್ಯ ಸಚಿವಾಲಯ ಇರುವ ನಬಾನ್ನಾ ಬಳಿ ನಿರ್ಮಿಸಲಾಗಿದೆ. ಈಗಾಗಲೇ ರಾಜ್ಯದಿಂದ ಹೊರಭಾಗದಲ್ಲಿ ತರಬೇತಿ ಹೊಂದಿದ ಶ್ವಾನವನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದರು.
ಈಗಾಗಲೇ ಕೇಂದ್ರೀಯ ಶಸಸ್ತ್ರ ಮೀಸಲು ಪೊಲೀಸ್ ಪಡೆ ಈಗಾಗಲೇ ಬೆಲ್ಜಿಯನ್ ಮಾಲಿನೋಯ್ಸ್ ತಳಿಯ ನಾಯಿಗಳನ್ನು ನೇಮಕ ಮಾಡಿಕೊಂಡಿದೆ. ಮಹಾರಾಷ್ಟ್ರ ಪೊಲೀಸ್ ಕೂಡ ಇದೇ ಹಾದಿಯನ್ನು ಆಯ್ದುಕೊಂಡಿದ್ದು, ನಕ್ಸಲ್ ಮತ್ತು ಉಗ್ರರ ವಿರುದ್ಧದ ಹೋರಾಟಕ್ಕೆ ನರವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಅನುಮತಿ ಕೋರಿ ಪತ್ರ ಬರೆದಿದೆ.
ಶ್ವಾನ ಪಡೆಯು 35 ರೀತಿಯ ಶ್ವಾನ ತಳಿಗಳನ್ನು ಹೊಂದಿರುತ್ತದೆ. ಅದರಲ್ಲಿ ಲ್ಯಾಬ್ರಡರ್, ಡಾಬರ್ಮ್ಯಾನ್, ಜರ್ಮನ್ ಶೆಪರ್ಡ್, ಬೀಗಲ್ ರೊಟ್ವೈಲರ್ ಮತ್ತು ಗೋಲ್ಡನ್ ರೆಟ್ರೈವರ್ ಪ್ರಮುಖವಾಗಿವೆ. (ಏಜೆನ್ಸೀಸ್)