ನ್ಯೂಸ್

ರಾಹುಲ್ ಗಾಂಧಿ ಪ್ರದರ್ಶಿಸುವ ಸಂವಿಧಾನದಲ್ಲಿ ವಿಪಕ್ಷಗಳಿಗೆ ಹೋರಾಟದ ಹಕ್ಕಿಲ್ಲವೆ ?: ಆರ್.ಅಶೋಕ್ ಪ್ರಶ್ನೆ

ಬೆಂಗಳೂರು: ಮುಡಾ ಅಕ್ರಮದ ವಿರುದ್ಧ ಹೋರಾಟಕ್ಕೆ ಬಿಜೆಪಿ ನಾಯಕರು, ಕಾರ್ಯಕರ್ತರು ಮೈಸೂರಿಗೆ ತೆರಳುವ ಮುನ್ನವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕ್ರಮದ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸರಣಿ ಪ್ರಶ್ನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಳುವ ಮೂಲಕ ಚುಚ್ಚಿದ್ದಾರೆ. ಪ್ರಜಾಸತ್ತಾತ್ಮಕ ಚಳವಳಿ ಹತ್ತಿಕ್ಕುವ ಪ್ರಯತ್ನ ಖಂಡಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರದರ್ಶಿಸುವ ಸಂವಿಧಾನದಲ್ಲಿ ವಿಪಕ್ಷಗಳಿಗೆ ಹೋರಾಟ ಮಾಡುವ ಹಕ್ಕಿಲ್ಲವೆ ? ಎಂದು ಕೇಳಿದ್ದಾರೆ.

ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿಎಂ ಸಿದ್ದರಾಮಯ್ಯ ಅವರೇ, ತಮ್ಮ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ರಾಜ್ಯ ಬಿಜೆಪಿ ನಾಯಕರು ಮೈಸೂರಿಗೆ ಹೊರಟಿದ್ದರೆ, ಪೊಲೀಸರನ್ನು ಬಳಸಿಕೊಂಡು ನಮ್ಮನ್ನು ಮಾರ್ಗ ಮಧ್ಯದಲ್ಲೇ ತಡೆಯುವ ಮೂಲಕ ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡುತ್ತಿದ್ದೀರಲ್ಲ,

ತಮ್ಮ ನಾಯಕ ರಾಹುಲ್ ಗಾಂಧಿಯವರು ಪ್ರದರ್ಶನ ಮಾಡುವ ಸಂವಿಧಾನದಲ್ಲಿ, ವಿಪಕ್ಷಗಳಿಗೆ ಹೋರಾಟ ಮಾಡುವ ಹಕ್ಕಿಲ್ಲವೇ? ತಮ್ಮ  ಪಕ್ಷ ಪ್ರತಿಪಾದಿಸುವ ಪ್ರಜಾಪ್ರಭತ್ವದಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನು ಪ್ರಶ್ನಿಸುವುದು ಅಪರಾಧವೇ? ಎಂದು ಆರ್.ಅಶೋಕ್ ಕೇಳಿದ್ದಾರೆ.

ಪೊಲೀಸರನ್ನು ಬಳಸಿಕೊಂಡು ವಿಪಕ್ಷ ನಾಯಕರು ಪ್ರತಿಭಟನೆ ಮಾಡಲು ಮೈಸೂರಿಗೆ ಹೋಗುವುದನ್ನು ತಡೆಯುತ್ತಿದ್ದೀರಲ್ಲ, ಕರ್ನಾಟಕದಲ್ಲಿ ಏನು ಅಘೋಷಿತ ತುರ್ತು ಪರಿಸ್ಥಿತಿ ಇದೆಯೇ?. ತಮ್ಮ ಆತ್ಮಸಾಕ್ಷಿ ಶುದ್ಧವಾಗಿದ್ದರೆ, ತಾವು ಹೇಳಿಕೊಳ್ಳುವಂತೆ ತಾವು ಪ್ರಾಮಾಣಿಕರಾದರೆ, ಮುಡಾ ಹಗರಣವನ್ನು ಸಿಬಿಐಗೆ ಒಪ್ಪಿಸಿ. ನಿಮ್ಮ ತಪ್ಪಿಲ್ಲವಾದರೆ ಸಿಬಿಐಗೆ ಕೊಡಲು ಭಯವೇಕೆ ಸಿಎಂ ಸಿದ್ದರಾಮಯ್ಯಗೆ ಆರ್.ಅಶೋಕ್ ಪ್ರಶ್ನಿಸಿ ಕೆಣಕಿದ್ದಾರೆ.