ಮುಂಬೈ: ಟಾಲಿವುಡ್ನ ರೆಬಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ 'ಸಲಾರ್' ಬಿಡುಗಡೆಗೂ ಮುನ್ನವೇ ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್ ತೆರೆಯ ಮೇಲೆ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸದ್ಯ ಇದೀಗ ಪ್ಯಾನ್ ಇಂಡಿಯಾ ಸಲಾರ್ ಚಿತ್ರವು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಈ ಮಧ್ಯೆ ಸಿನಿಮಾ ಆಂಗ್ಲ ಭಾಷೆಯಲ್ಲೂ ಕೂಡ ರಿಲೀಸ್ ಆಗಲಿದೆ ಎಂಬ ವದಂತಿಗಳು ಕೇಳಿಬಂದಿದ್ದು, ಚಿತ್ರದ ನಿರ್ಮಾಪಕರು ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 28, 2023 ರಂದು ವಿಶ್ವದಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಸಲಾರ್ ಚಿತ್ರವನ್ನು ಬಿಡುಗಡೆಗೊಳಿಸಲಿರುವ ಚಿತ್ರತಂಡ, ಇಂಗ್ಲಿಷ್ ಆವೃತ್ತಿಯನ್ನು ಅಕ್ಟೋಬರ್ 13, 2023 ರಂದು ರಿಲೀಸ್ ಮಾಡಲಿದೆ ಎಂದು ಹೇಳಲಾಗಿದೆ. ಸದ್ಯ ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಚಿತ್ರದಲ್ಲಿ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).