ಬಾಗಲಕೋಟೆ: ರಾಜ್ಯದಲ್ಲಿ ಈಗಾಗಲೆ ಇರುವ ಪಂಚಮಸಾಲಿ ಸಮಾಜದ ಎರಡು ಪೀಠಗಳಿಗೆ ಪರ್ಯಾಯವಾಗಿ 3ನೇ ಪೀಠ ಸ್ಥಾಪಿಸುವ ಬಗ್ಗೆ ಪ್ರತ್ಯೇಕ ಒಕ್ಕೂಟದ ಸ್ವಾಮೀಜಿಗಳು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಚಾರಿಟಬಲ್ ಟ್ರಸ್ಟ್ ಜಮಖಂಡಿ (ರಿ) ಎಂದು ಜಿಲ್ಲೆಯ ಜಮಖಂಡಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಶನಿವಾರ ನೋಂದಣಿ ಮಾಡಿಸಿದ್ದಾರೆ.
ಒಕ್ಕೂಟದ ಅಧ್ಯಕ್ಷರಾಗಿ ಬಬಲೇಶ್ವರ ಗುರುಪಾದೇಶ್ವರ ಮಠದ ಮಹಾದೇವ ಶಿವಾಚಾರ್ಯರು, ಉಪಾಧ್ಯಕ್ಷರಾಗಿ ಬೆಂಡವಾಡಿ ಮಠದ ಸ್ವಾಮೀಜಿ ಹಾಗೂ ಕಾರ್ಯದರ್ಶಿಯಾಗಿ ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ. ಟ್ರಸ್ಟ್ ನೋಂದಣಿ ವೇಳೆ 15ರಿಂದ 18 ಮಠಗಳ ಪಂಚಮಸಾಲಿ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಈಗಾಗಲೆ ಹರಿಹರ ಹಾಗೂ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಪಂಚಮಸಾಲಿ ಸಮಾಜದ ಎರಡು ಪ್ರತ್ಯೇಕ ಪೀಠಗಳಿವೆ. ಇವುಗಳ ಹೊರತಾಗಿ ಮತ್ತೊಂದು ಪೀಠ ರಚಿಸುವ ಬಗ್ಗೆ ವಿವಿಧ ಮಠಗಳಿಗೆ ಪೀಠಾಧೀಶರು ಆಗಿರುವ ಪಂಚಮಸಾಲಿ ಸಮಾಜದ ಸ್ವಾಮೀಜಿಗಳು ಮುಂದಾಗಿದ್ದಾರೆ. ಈ ಬಗ್ಗೆ ಕೆಲವು ಸಭೆಗಳನ್ನು ಸಹ ನಡೆಸಿದ್ದು, ಪಂಚಮಸಾಲಿ ಮಠಾಧೀಶರ ಒಕ್ಕೂಟ ರಚಿಸಿಕೊಂಡಿದ್ದರು. ಒಕ್ಕೂಟದ ಹೆಸರಿನಲ್ಲಿ ಟ್ರಸ್ಟ್ ರಚಿಸಿ, ಇದೀಗ ಅದನ್ನು ನೋಂದಣಿ ಸಹ ಮಾಡಿಸಿದ್ದಾರೆ.
3ನೇ ಪೀಠಕ್ಕೆ ಮುನ್ನುಡಿ?: ಒಕ್ಕೂಟದಲ್ಲಿ ಗುರು ಪರಂಪರೆ, ವಿರಕ್ತ ಪರಂಪರೆ, ಆರೂಢ, ಶಿವಾನಂದ ಪರಂಪರೆ ಇರುವ ಮಠಗಳಿಗೆ ಪಂಚಮಸಾಲಿ ಸಮಾಜದ ಮಠಾಧೀಶರು ಇದ್ದು, ರಾಜ್ಯದಲ್ಲಿ ಅಂದಾಜು 70ರಿಂದ 80 ಸ್ವಾಮೀಜಿಗಳಿದ್ದಾರೆ. ಅವರೆಲ್ಲರೂ 3ನೇ ಪೀಠ ರಚಿಸುವ ಬಗ್ಗೆ ಮಾನಸಿಕವಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಈ ಪೀಠ ಜಮಖಂಡಿ ತಾಲೂಕಿನಲ್ಲೇ ತಲೆ ಎತ್ತುವ ಲಕ್ಷಣಗಳು ಕಂಡುಬರುತ್ತಿವೆ. ತಾಲೂಕಿನ ಆಲಗೂರ ಸುತ್ತಮುತ್ತ ಜಾಗ ಹಿಡಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮತ್ತೊಂದು ಪೀಠವಾದರೆ ತಪ್ಪೇನು?: ರಾಜ್ಯದಲ್ಲಿ 1.10 ಕೋಟಿ ಜನ ಪಂಚಮಸಾಲಿ ಸಮಾಜದವರು ಇದ್ದಾರೆ. ಜನರು ಬಯಸಿದರೆ 3ನೇ ಪೀಠ ರಚನೆ ಆಗಬಹುದು ಎಂದು ಈ ಹಿಂದೆಯೇ ಹೇಳಿದ್ದು, ಅದಕ್ಕೆ ಈಗಲೂ ಬದ್ಧರಿದ್ದೇವೆ. ಈಗ ಎರಡು ಪೀಠಗಳು ಇವೆ. 3ನೇ ಪೀಠ ಆದರೆ ತಪ್ಪೇನು ಎಂದು ಟ್ರಸ್ಟ್ ನೋಂದಣಿ ಬಳಿಕ ಮಾತನಾಡಿರುವ ಟ್ರಸ್ಟ್ ಕಾರ್ಯದರ್ಶಿ ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿ ಪ್ರಶ್ನಿಸಿದರು. ಸದ್ಯ ಟ್ರಸ್ಟ್ ರಚನೆ ಉದ್ದೇಶ ಸಮಾಜದ ಜನರಿಗೆ ಲಿಂಗದೀಕ್ಷೆ ಕೊಡುವುದು, ಒಳ್ಳೆಯ ಆಚಾರ ವಿಚಾರ, ಯುವಕರನ್ನು ಸದೃಢಗೊಳಿಸುವ ಕೆಲಸ ಮಾಡಲಾಗುವುದು ಎಂದರು. ಇನ್ನೊಂದು ಪೀಠ ರಚನೆ ಆಗುವುದಾದಲ್ಲಿ ಅದು ಎಲ್ಲಿ? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಸ್ವಾಮೀಜಿ, ಮಠಾಧೀಶರ ಒಕ್ಕೂಟಕ್ಕೆ ಹೆಚ್ಚು ಪ್ರೋತ್ಸಾಹ ಕೊಡುವ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಕಲಬುರಗಿ ಜಿಲ್ಲೆಗಳು ಇವೆ. ಅತಿ ಹೆಚ್ಚು ಕಾಳಜಿಯಿಂದ ನೋಡುವ ಜನರು ಬಾಗಲಕೋಟೆ ಜಿಲ್ಲೆಯಲ್ಲಿ ಇದ್ದಾರೆ. ಹೀಗಾಗಿ 3ನೇ ಪೀಠ ಬಾಗಲಕೋಟೆ ಜಿಲ್ಲೆಯಲ್ಲೂ ಆಗಬಹುದು ಅಥವಾ ಉಳಿದ ಮೂರು ಜಿಲ್ಲೆಗಳಲ್ಲಾದರೂ ಆಗಬಹುದು. ಜನರು ಎಲ್ಲಿ ನಿರ್ಣಯ ತೆಗೆದುಕೊಳ್ಳುತ್ತಾರೋ ಅಲ್ಲಿ ಆಗಬಹುದು ಎಂದು ತಿಳಿಸಿದರು.
ಪಂಚಮಸಾಲಿ ಸಮಾಜದ ಬೆಳವಣಿಗೆ ದೃಷ್ಟಿಯಿಂದ 3ನೇ ಪೀಠ ಆಗುವುದರಲ್ಲಿ ಯಾವುದೇ ತಪ್ಪಿಲ್ಲ. ಈಗ ಇರುವ ಎರಡು ಪೀಠಗಳು ಬೇರೆ ಬೇರೆ ಕೆಲಸ ಮಾಡುತ್ತೀವೆ. ನಾವು ಒಕ್ಕೂಟದಿಂದ ಸಮಾಜದ ಮಕ್ಕಳಲ್ಲಿ ಧಾರ್ವಿುಕತೆ, ಅಧ್ಯಾತ್ಮವನ್ನು ಬೆಳೆಸುವ ಕೆಲಸ ಮಾಡಲಿದ್ದೇವೆ. ಒಕ್ಕೂಟದ ಎಲ್ಲ ಸ್ವಾಮೀಜಿಗಳು ಸಮಾಜದ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇವೆ.
| ಮಹಾದೇವ ಶಿವಾಚಾರ್ಯರು ಬಬಲೇಶ್ವರ ಗುರುಪಾದೇಶ್ವರ ಮಠ, ನೂತನ ಟ್ರಸ್ಟ್ ಅಧ್ಯಕ್ಷರು