ದಾವಣಗೆರೆ ಜಿಲ್ಲೆ ನ್ಯಾಮತಿಯಲ್ಲಿ ಮಂಗಳವಾರ ಮಾಜಿ ಸಿಎಂ ಯಡಿಯೂರಪ್ಪರಿಗೆ ಕರೊನಾ ಸೂಪರ್ ವಾರಿಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. 5500 ಕರೊನಾ ವಾರಿಯರ್​ಗಳನ್ನು ಸನ್ಮಾನಿಸಲಾಯಿತು. ಸಚಿವ ಡಾ.ಕೆ. ಸುಧಾಕರ್, ಶಾಸಕ ಎಂ.ಪಿ. ರೇಣುಕಾಚಾರ್ಯ ಇತರರಿದ್ದರು. 
ನ್ಯೂಸ್

ಅಭ್ಯರ್ಥಿ ನಸೀಬು ಬದಲಿಸ್ತಾರಾ ಬಿಎಸ್​ವೈ?; ಉಪಸಮರ ಪ್ರಚಾರ ಅಖಾಡಕ್ಕೆ ಯಡಿಯೂರಪ್ಪ, ಸವಾಲಿನ ಪರಿಸ್ಥಿತಿ ಸಡಿಲವಾಗುವ ಲೆಕ್ಕಾಚಾರ

ಬೆಂಗಳೂರು: ಬದಲಾದ ನಾಯಕತ್ವಕ್ಕೆ ಜನಾಭಿಪ್ರಾಯದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಕಾರಣ ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪಸಮರ ಕುತೂಹಲದ ತಿರುವು ಪಡೆದಿದೆ. ಮೂರು ಪ್ರಮುಖ ಪಕ್ಷಗಳ ಜಿದ್ದಾಜಿದ್ದಿ, ಭರ್ಜರಿ ಪ್ರಚಾರದ ಮೂಲಕ ಜನರ ಮನಗೆಲ್ಲಲು ಕಸರತ್ತು ನಡೆಸಿರುವ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಚಾರದ ಅಖಾಡಕ್ಕೆ ಬುಧವಾರ ಧುಮುಕಲಿದ್ದಾರೆ.

ಬೆಳಗ್ಗೆ 10.30-ಸಂಜೆ 6.30ರವರೆಗೆ ಸಿಂದಗಿ ಕ್ಷೇತ್ರದಲ್ಲಿ ಪಕ್ಷದ ವಿಜಯಪುರ ಜಿಲ್ಲಾ ಘಟಕ ಗೊತ್ತು ಪಡಿಸಿದ ಪ್ರಚಾರ ಸಭೆ, ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ವಿಜಯಪುರದಲ್ಲಿ ತಂಗಲಿದ್ದಾರೆ. ಗುರುವಾರ ಬೆ.10ರಿಂದ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಜೆ 5ಕ್ಕೆ ಅಲ್ಲಿಂದ ಹೊರಟು, ಹುಬ್ಬಳ್ಳಿ ಯಲ್ಲಿ ತಂಗಲಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಶುಕ್ರವಾರ, ಶನಿವಾರ ಪ್ರಚಾರಸಭೆಗಳಲ್ಲಿ ಭಾಗಿಯಾಗಲಿದ್ದು, ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ವಿಸ್ತರಣೆ ಸಾಧ್ಯತೆ: ಪೂರ್ವನಿಗದಿತ ಪ್ರವಾಸ ಪಟ್ಟಿ ಇದಾಗಿದ್ದು, ಎರಡೂ ಕ್ಷೇತ್ರಗಳ ಅಭ್ಯರ್ಥಿಗಳು ಮತ್ತು ಮುಖಂಡರ ಅಭಿಲಾಷೆಗೆ ಮುಖಂಡರು ಓಗೊಟ್ಟು, ಬಿಎಸ್​ವೈ ವಿನಂತಿಸಿದರೆ ಇನ್ನೂ ಕೆಲವು ದಿನ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಜಾತಿ-ವರ್ಗಗಳ ಬೇಧವಿಲ್ಲದೆ ಬಿಎಸ್​ವೈ ಜನರ ಮೆಚ್ಚುಗೆ ಗಳಿಸಿದ್ದಾರೆ. ಹೀಗಾಗಿ ಸ್ಪರ್ಧಾ ಅಖಾಡಕ್ಕೆ ಇನ್ನುಮುಂದೆ ರೋಚಕ ತಿರುವು ಸಿಗಲಿದ್ದು, ಪ್ರಬಲ ಪೈಪೋಟಿ ಎದುರಿಸುತ್ತಿರುವ ಅಭ್ಯರ್ಥಿಗಳು ನಸೀಬು ಬದಲಾವಣೆ ನಿರೀಕ್ಷೆಯಲ್ಲಿದ್ದಾರೆ.

ಬಿಎಸ್​ವೈ ಎರಡು ವರ್ಷಗಳ ಬಳಿಕ ಅಧಿಕಾರ ತ್ಯಜಿಸಿರುವ ಕಾರಣ ಅನೇಕ ವ್ಯಾಖ್ಯಾನ, ವಿಶ್ಲೇಷಣೆಗೆ ಎಡೆಮಾಡಿಕೊಟ್ಟಿದೆ. ಇದೀಗ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಅಂತಹದ್ದೇನಿಲ್ಲವೆಂಬ ಸ್ಪಷ್ಟ ಸಂದೇಶ ರವಾನಿಸಲಿದ್ದು, ವೀರಶೈವ-ಲಿಂಗಾಯತ ಸಮುದಾಯದ ಅಪನಂಬಿಕೆ ದೂರವಾಗಲಿದೆ ಎಂಬ ವಿಶ್ವಾಸವನ್ನು ಪಕ್ಷದ ಮೂಲಗಳು ವ್ಯಕ್ತಪಡಿಸಿವೆ.

ಮುಂಚೂಣಿ ನಾಯಕ: ಪಕ್ಷದ ಕೋರ್ ಕಮಿಟಿ ಅಂತಿಮಗೊಳಿಸಿದ ವಿವಿಧ ಹಂತದ ಪ್ರಚಾರ ಕರ ಪಟ್ಟಿಯಲ್ಲಿ ಬಿಎಸ್​ವೈ ಮುಂಚೂಣಿ ನಾಯಕ. ಪ್ರಚಾರದ ಅಖಾಡಕ್ಕೆ ಇಳಿಯುವುದರಿಂದ ತಪು್ಪ ತಿಳಿವಳಿಕೆ ದೂರ ವಾಗಿ ಒಗ್ಗಟ್ಟಿನ ಸಂದೇಶ ತಲುಪಲಿದೆ ಎನ್ನಲಾಗುತ್ತಿದೆ.

ಸವಾಲು ಸಡಿಲ: ಅಧಿಕಾರದಲ್ಲಿರುವ ಪಕ್ಷ ಉಪ ಚುನಾವಣೆಯಲ್ಲಿ ಗೆದ್ದದ್ದೇ ಜಾಸ್ತಿ. ಅದರಲ್ಲೂ ಕಮಲಪಡೆ ಸರಣಿ ಉಪ ಚುನಾವಣೆಯಲ್ಲಿ ಮೇಲುಗೈ ಸಾಧಿಸಿ ಬೀಗಿದೆ. ಆದರೂ ಬದಲಾದ ನಾಯಕತ್ವ, ಪಕ್ಷದ ಆಂತರಿಕ ಬೆಳವಣಿಗೆ, ಕರೊನಾ ಬೀರಿದ ಅಡ್ಡ ಪರಿಣಾಮ ಇತ್ಯಾದಿ ಕಾರಣಗಳಿಂದಾಗಿ ಕಠಿಣ ಸವಾಲು ಎದುರಿಸುತ್ತಿದೆ. ಆಂತರಿಕ ವರದಿ ಮಾಹಿತಿಯು ಬಿಎಸ್​ವೈಗೆ ಗೊತ್ತಿರುತ್ತದೆ. ಹೀಗಾಗಿ ಪಕ್ಷ ಗೊತ್ತುಪಡಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜತೆಗೆ ತಮ್ಮದೇ ಆದ ರಣತಂತ್ರ ಬಳಸಿ, ಸವಾಲಿನ ಪರಿಸ್ಥಿತಿ ಸಡಿಲಗೊಳಿಸಲಿದ್ದಾರೆ ಎಂಬ ಲೆಕ್ಕಾಚಾರವಿದೆ.

ಅಧಿಕಾರದ ಆಸೆಗೆ ಕಾಂಗ್ರೆಸ್ ಜೆಡಿಎಸ್ ಅಪವಿತ್ರ ಮೈತ್ರಿ

ವಿಜಯಪುರ: ಕಾಂಗ್ರೆಸ್​ಗೆ ಅಧಿಕಾರದ ಲಾಲಸೆ. ಕೇವಲ ಅಧಿಕಾರವೊಂದೇ ಕಾಂಗ್ರೆಸ್ ಗುರಿ. ಅಧಿಕಾರಕ್ಕಾಗಿಯೇ ಜೆಡಿಎಸ್​ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು. ಆಲಮೇಲದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಆ ಭಾಗ್ಯ ಈ ಭಾಗ್ಯ ತಂದಿದ್ದೇನೆ. ರಾಜ್ಯದ ಜನ ಕಾಂಗ್ರೆಸ್ ಗೆಲ್ಲಿಸುತ್ತಾರೆಂದು ಸಿದ್ದರಾಮಯ್ಯ ಕನಸು ಕಂಡಿದ್ದರು. ಆದರೆ ಆ ಯಾವ ಭಾಗ್ಯವೂ ಜನರ ಮನೆ ಬಾಗಲಿಗೆ ತಲುಪಲಿಲ್ಲ. ಕಾಂಗ್ರೆಸ್ ಕರ್ನಾಟಕದ ದೌರ್ಭಾಗ್ಯ ಎಂದು ತಿಳಿದು ಕಡಿಮೆ ಸ್ಥಾನ ನೀಡಿದರು. ಹೀಗಾಗಿ ಅಧಿಕಾರ ಲಾಲಸೆಗಾಗಿ ಅಪವಿತ್ರ ಮೈತ್ರಿ ಮಾಡಿಕೊಂಡರು. ಜೆಡಿಎಸ್​ನವರು ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಲಿಲ್ಲ, ಅವರೇ ಜೆಡಿಎಸ್ ಮನೆ ಬಾಗಿಲಿಗೆ ಹೋಗಿ ನೀವೇ ಮುಖ್ಯಮಂತ್ರಿ ಆಗಿ, ನಮಗೆ ಪ್ರಮುಖ ಖಾತೆ ಕೊಡಿ ಎಂದರು. ಇದು ಜನತೆಯ ಸರ್ಕಾರ ಅಲ್ಲ ಎಂದು ಆ ಪಕ್ಷದ ಅನೇಕ ಶಾಸಕರು ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬಂದು ಗೆದ್ದರು ಎಂದು ಬೊಮ್ಮಾಯಿ ಹೇಳಿದರು.

ಬಿಜೆಪಿಯಲ್ಲಿ ನನ್ನ ಕಡೆಗಣಿಸುತ್ತಿಲ್ಲ

ಶಿವಮೊಗ್ಗ: ಬಿಜೆಪಿಯಲ್ಲಿ ನನ್ನನ್ನು ಯಾರೂ ಕಡೆಗಣಿಸುತ್ತಿಲ್ಲ. ಇದೆಲ್ಲ ಪ್ರತಿಪಕ್ಷಗಳ ಊಹಾಪೋಹ ಅಷ್ಟೇ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರದ ಯಾವುದೇ ನಾಯಕರು ನನ್ನನ್ನು ರಾಜಕೀಯವಾಗಿ ಉಪೇಕ್ಷಿಸುವ ಕೆಲಸ ಮಾಡಿಲ್ಲ. ರಾಜ್ಯದಲ್ಲೂ ಎಲ್ಲ ಮುಖಂಡರು ನನ್ನನ್ನು ವಿಶ್ವಾಸದಿಂದ ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ನನ್ನ ಹಾಗೂ ಪಕ್ಷದ ನಡುವೆ ಭಿನ್ನಾಭಿಪ್ರಾಯವಿದೆ ಎಂದು ರಾಜಕೀಯ ಕಾರಣಕ್ಕೆ ಕೆಲವರು ಮಾತನಾಡುತ್ತಾರೆ. ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಒತ್ತಡಕ್ಕೆ ಮಣಿದು ಆ ತೀರ್ಮಾನ ಕೈಗೊಂಡಿದ್ದೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಇಂತಹ ಮಾತುಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಇತ್ತೀಚೆಗೆ ಆರ್​ಎಸ್​ಎಸ್ ಹಾಗೂ ಪ್ರಧಾನಿ ಮೋದಿ ಬಗ್ಗೆ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಘನತೆಗೆ ತಕ್ಕಂತೆ, ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡುವುದು ಒಳಿತು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಜನರು ಸಿದ್ದರಾಮಯ್ಯರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕೇಂದ್ರ ಸರ್ಕಾರವಾಗಲಿ, ನಾನು ಆಡಳಿತ ನಡೆಸಿದ ಸಂದರ್ಭದಲ್ಲಾಗಲಿ, ಪ್ರಸ್ತುತ ಬಸವರಾಜ ನೇತೃತ್ವದ ಸರ್ಕಾರವಾಗಲಿ ಅಲ್ಪಸಂಖ್ಯಾತರು ಸೇರಿ ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿ ಅನುದಾನ ನೀಡಲಾಗಿದೆ. ರಾಜಕೀಯ ಕಾರಣಕ್ಕೆ ಕೆಲವರು ಟೀಕೆ ಮಾಡುತ್ತಿದ್ದಾರಷ್ಟೇ. | ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ
ಯಡಿಯೂರಪ್ಪ ರಾಜೀನಾಮೆ ನೀಡುವಾಗ ರಾಜ್ಯದ, ಕ್ಷೇತ್ರದ ಜನರನ್ನು ನೆನಪಿಸಿಕೊಂಡು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ ಹೊರತು, ಅಧಿಕಾರ ಹೋಯಿತು ಎಂಬ ನೋವಿನಿಂದಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ವಿಪಕ್ಷದವರು ಪ್ರಸ್ತಾಪಿಸುತ್ತಿದ್ದು, ಇದರಿಂದ ಅವರಿಗೆ ಯಾವುದೇ ರಾಜಕೀಯ ಲಾಭವಾಗದು. | ಬಿ.ವೈ. ರಾಘವೇಂದ್ರ ಸಂಸದ

ನನ್ನ ಕಂಡ್ರೆ ಭಯ ಸಿದ್ದು-ಎಚ್ಡಿಕೆ ಟಾಕ್​ವಾರ್

ವಿಜಯಪುರ: ಮಾಜಿ ಸಿಎಂ ಗಳಾದ ಸಿದ್ದರಾಮಯ್ಯ- ಎಚ್.ಡಿ. ಕುಮಾರಸ್ವಾಮಿ ಟಾಕ್​ವಾರ್ ಮಂಗಳವಾರ ಸಿಂದಗಿ ಕ್ಷೇತ್ರದಲ್ಲೂ ಮುಂದುವರಿದಿತ್ತು. ‘ಕುಮಾರಸ್ವಾಮಿಗೆ ನನ್ನ ಬಗ್ಗೆ ಭಯ... ಭಯ...! ಯಾರಲ್ಲಿ ಶಕ್ತಿ ಇರುತ್ತೋ ಅವರನ್ನು ಕಂಡ್ರೆ ಎಚ್ಡಿಕೆಗೆ ಭಯ ಇರುತ್ತೆ. ಅದಕ್ಕೆ ನನ್ನ ವಿರುದ್ಧ ಮಾತಾಡ್ತಾರೆ ಎಂದು ಸಿದ್ದರಾಮಯ್ಯ ಸಿಂದಗಿಯಲ್ಲಿ ವ್ಯಂಗ್ಯವಾಡಿದರು. ಸಿಂದಗಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿದ್ದ ಕುಮಾರಸ್ವಾಮಿ ಕೂಡ ಬಮ್ಮನಹಳ್ಳಿಯಲ್ಲಿ ಸಿದ್ದುಗೆ ತಿರುಗೇಟು ನೀಡುವುದನ್ನು ಮರೆಯಲಿಲ್ಲ. ಸಿದ್ದರಾಮಯ್ಯರನ್ನು ಕಂಡ್ರೆ ನನಗೇನು ಭಯ ಇಲ್ಲ. ಹಾಗೆ ನೋಡಿದ್ರೆ ನನ್ನ ಕಂಡ್ರೆ ಸಿದ್ದರಾಮಯ್ಯಗೆ ಭಯ ಇದೆ ಎಂದು ಚಾಟಿ ಬೀಸಿದರು. ಅವರನ್ನು ಕಂಡು ನಾನೇಕೆ ಭಯ ಬೀಳಲಿ? ಬೇರೆ ವಿಚಾರ ಮಾತನಾಡಿಕೊಂಡು ಹೋದ್ರೆ ನಾವು ನಮ್ಮ ಕಾರ್ಯಕ್ರಮಗಳ ಮೇಲೆ ಮಾತನಾಡುತ್ತೇವೆ. ಪದೇಪದೆ ನಮ್ಮ ಹೆಸರು ಕೆದಕೋದು ಅವರೇ (ಸಿದ್ದರಾಮಯ್ಯ). ಅವರು ಕಾಲ್ಕೆರೆದು ಜಗಳ ಮಾಡುವುದನ್ನು ನಿಲ್ಲಿಸಲಿ. ನನಗೂ ಮಾಡಲು ಸಾಕಷ್ಟು ಕೆಲಸಗಳು ಇವೆ ಎಂದು ಸಿದ್ದುಗೆ ತಿರುಗೇಟು ನೀಡಿದರು.