ಎಐ, ಅಣ್ವಸ್ತ್ರಗಳಿಂದ ಮಾನವಕುಲಕ್ಕೆ ಕಂಟಕ?  
ನ್ಯೂಸ್

AI ದುರ್ಬಳಕೆ, ಅಣ್ವಸ್ತ್ರ ಯುದ್ಧದಿಂದ ಮಾನವಕುಲಕ್ಕೆ ಕುತ್ತು? 2100ರ ಬಗ್ಗೆ ತಜ್ಞರು ಹೇಳಿದ್ದೇನು? | AI Risk

ಎಐ ದುರ್ಬಳಕೆ, ಅಣ್ವಸ್ತ್ರ ಯುದ್ಧ ಮತ್ತು ಜೈವಿಕ ಅಸ್ತ್ರಗಳು ಮಾನವಕುಲಕ್ಕೆ ಅಪಾಯ ತಂದೊಡ್ಡಬಹುದು ಎಂದು ‘ದಿ ಲ್ಯಾನ್ಸೆಟ್’ ವರದಿ ಎಚ್ಚರಿಸಿದೆ.

Misuse of AI: ಕೃತಕ ಬುದ್ಧಿಮತ್ತೆಯ ದುರ್ಬಳಕೆ, ಅಣ್ವಸ್ತ್ರ ಯುದ್ಧ ಮತ್ತು ಜೈವಿಕ ಅಸ್ತ್ರಗಳಿಂದ 2100ರ ವೇಳೆಗೆ ಮಾನವಕುಲಕ್ಕೆ ಅಪಾಯ ಎದುರಾಗಬಹುದು ಎಂದು ‘ದಿ ಲ್ಯಾನ್ಸೆಟ್‌’ನಲ್ಲಿ ಪ್ರಕಟವಾದ ಹೊಸ ವರದಿ ಎಚ್ಚರಿಸಿದೆ. ಆದರೆ, ಇದರಿಂದ ಇಡೀ ಮಾನವಕುಲವೇ ನಾಶವಾಗುವ ಸಾಧ್ಯತೆ ಕಡಿಮೆ ಎಂದೂ ವರದಿ ಹೇಳಿದೆ.

21ನೇ ಶತಮಾನದ ಜಾಗತಿಕ ಆರೋಗ್ಯ ಬೆದರಿಕೆಗಳ ಕುರಿತ ಲ್ಯಾನ್ಸೆಟ್ ಆಯೋಗ (Lancet Commission on 21st Century Global Threats to Health)ದ ವರದಿಯಲ್ಲಿ, ಮುಂದಿನ 75 ವರ್ಷಗಳಲ್ಲಿ ಮಾನವರ ಆರೋಗ್ಯಕ್ಕೆ ಹಾನಿ ಮಾಡಬಹುದಾದ 17 ಪ್ರಮುಖ ಅಪಾಯಗಳನ್ನು ಗುರುತಿಸಲಾಗಿದೆ. ಎಐ ದುರ್ಬಳಕೆ, ಅಣ್ವಸ್ತ್ರ ಯುದ್ಧ, ಹವಾಮಾನ ಬದಲಾವಣೆ, ವಾಯುಮಾಲಿನ್ಯ, ಮಕ್ಕಳ ಅಪೌಷ್ಟಿಕತೆ, ಬೊಜ್ಜು ಮತ್ತು ಅಂತರರಾಷ್ಟ್ರೀಯ ನೆರವು ಕಡಿಮೆಯಾಗುವ ಅಪಾಯವೂ ಇದರಲ್ಲಿ ಸೇರಿದೆ.

ಎಐ ದುರ್ಬಳಕೆ, ಅಣ್ವಸ್ತ್ರ ಯುದ್ಧದ ಆತಂಕ

ಎಐ ತಂತ್ರಜ್ಞಾನ ಬಳಸಿ ಅಪಾಯಕಾರಿ ಜೈವಿಕ ಅಸ್ತ್ರಗಳನ್ನು ತಯಾರಿಸುವ ಸಾಧ್ಯತೆ ಬಗ್ಗೆ ವರದಿ ಎಚ್ಚರಿಸಿದೆ. ಇಂತಹ ಅಸ್ತ್ರಗಳು ಲಕ್ಷಾಂತರ ಜನರ ಜೀವಕ್ಕೆ ಅಪಾಯ ತಂದೊಡ್ಡಬಹುದು.

2100ರ ಬಗ್ಗೆ ತಜ್ಞರ ಎಚ್ಚರಿಕೆ

ಅಣ್ವಸ್ತ್ರ ಯುದ್ಧ ನಡೆದರೆ ವಾತಾವರಣದಲ್ಲಿ ದೊಡ್ಡ ಪ್ರಮಾಣದ ಕಣಗಳು ಹರಡಿ, ಸೂರ್ಯನ ಬೆಳಕು ಭೂಮಿಗೆ ತಲುಪುವುದಕ್ಕೆ ಅಡ್ಡಿಯಾಗಬಹುದು. ಇದರಿಂದ ಬೆಳೆಗಳ ಉತ್ಪಾದನೆ ಕುಸಿದು, ಆಹಾರದ ಕೊರತೆ ಉಂಟಾಗಿ ಭೀಕರ ಕ್ಷಾಮ ಎದುರಾಗುವ ಸಾಧ್ಯತೆಯೂ ಇದೆ. 35 ತಜ್ಞರು ಸೇರಿ ಸಿದ್ಧಪಡಿಸಿರುವ ಈ ವರದಿಯನ್ನು ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಲಿರುವ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ಮಂಡಿಸಲು ಉದ್ದೇಶಿಸಲಾಗಿದೆ.

ಹವಾಮಾನ ಬದಲಾವಣೆ, ಆರೋಗ್ಯಕ್ಕೂ ಅಪಾಯ

ಜಾಗತಿಕ ತಾಪಮಾನ ಏರಿಕೆಯನ್ನು 4.4 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲು ಬಿಡುವ ಬದಲು, ಸುಮಾರು 1.8 ಡಿಗ್ರಿಗೆ ನಿಯಂತ್ರಿಸಿದರೆ 189 ಕೋಟಿ ಆರೋಗ್ಯಕರ ಜೀವನ ವರ್ಷಗಳ ನಷ್ಟವನ್ನು ತಡೆಯಬಹುದು ಎಂದು ವರದಿ ಅಂದಾಜಿಸಿದೆ.

ಮಕ್ಕಳ ಅಪೌಷ್ಟಿಕತೆಯ ಸಮಸ್ಯೆ

ಅಂತರರಾಷ್ಟ್ರೀಯ ಆರೋಗ್ಯ ನೆರವು ಗಣನೀಯವಾಗಿ ಕಡಿಮೆಯಾದರೆ, 2100ರ ವೇಳೆಗೆ 150 ಕೋಟಿ ಆರೋಗ್ಯಕರ ಜೀವನ ವರ್ಷಗಳವರೆಗೆ ನಷ್ಟವಾಗಬಹುದು. ಈ ಪೈಕಿ ಸುಮಾರು ಶೇ.70ರಷ್ಟು ನಷ್ಟ ಉಪ-ಸಹಾರನ್ ಆಫ್ರಿಕಾ ಪ್ರದೇಶದಲ್ಲಿ ಸಂಭವಿಸುವ ಸಾಧ್ಯತೆ ಇದೆ. ಈ ಭಾಗದಲ್ಲಿ ಮಕ್ಕಳ ಅಪೌಷ್ಟಿಕತೆ ಈಗಾಗಲೇ ದೊಡ್ಡ ಸಮಸ್ಯೆಯಾಗಿದೆ.

ಜಾಗತಿಕ ತಾಪಮಾನ ಏರಿಕೆ

ಆರೋಗ್ಯಕ್ಕೆ ಅಪಾಯ ತರುವ 17 ಅಂಶಗಳು

ಎಐ ದುರ್ಬಳಕೆ ಮತ್ತು ಅಣ್ವಸ್ತ್ರ ಯುದ್ಧದ ಜೊತೆಗೆ ವಾಯುಮಾಲಿನ್ಯ, ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗಗಳು, ಸಾಂಪ್ರದಾಯಿಕ ಯುದ್ಧಗಳು, ಶಿಕ್ಷಣದ ಕೊರತೆ, ಆದಾಯ ಅಸಮಾನತೆ, ಅಧಿಕ ರಕ್ತದೊತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು, ಧೂಮಪಾನ, ಮಕ್ಕಳ ಅಪೌಷ್ಟಿಕತೆ ಸೇರಿದಂತೆ ಒಟ್ಟು 17 ಅಪಾಯಗಳನ್ನು ವರದಿ ಗುರುತಿಸಿದೆ.

ಇದನ್ನೂ ಓದಿ: ಹುಲಿ ಆವರಣಕ್ಕೆ ನುಗ್ಗಿದ ವ್ಯಕ್ತಿ ಸಾವು; ಇಂಗ್ಲೆಂಡ್‌ನ ವನ್ಯಜೀವಿ ಪಾರ್ಕ್‌ನಲ್ಲಿ ಆಘಾತಕಾರಿ ಘಟನೆ! | Man killed by tiger

ಆಯೋಗದ ಸಹ-ಅಧ್ಯಕ್ಷ ಪ್ರೊಫೆಸರ್ ಕ್ರಿಸ್ಟೋಫರ್ ಮರ್ರೆ ಅವರ ಪ್ರಕಾರ, ಇಂತಹ ಅಪಾಯಗಳನ್ನು ಮೊದಲೇ ಗುರುತಿಸಿ ತಡೆಯಲು ಸರ್ಕಾರಗಳು ಹಣ ಮತ್ತು ಸಿಬ್ಬಂದಿಯನ್ನು ಮೀಸಲಿಡಬೇಕು. ಮುಂದಿನ ದಿನಗಳಲ್ಲಿ ಹೊಸದಾಗಿ ಎದುರಾಗುವ ಬೆದರಿಕೆಗಳನ್ನು ಗುರುತಿಸುವುದರ ಜೊತೆಗೆ, ಈಗಿರುವ ಅಪಾಯಗಳ ಬಗ್ಗೆಯೂ ಪರಿಶೀಲನೆ ನಡೆಸಲು ಆಯೋಗ ಪ್ರತಿ ವರ್ಷ ವರದಿಯನ್ನು ನವೀಕರಿಸಲಿದೆ. (ಏಜೆನ್ಸೀಸ್)