ನ್ಯೂಸ್

ಅ.2ಕ್ಕೆ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ

ಶಿವಮೊಗ್ಗ: ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್‌ನಿಂದ ಪ್ರಸಕ್ತ ಸಾಲಿನ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಮತ್ತು ಶ್ರೀ ಲಲಿತಾ ಪುರಸ್ಕಾರ ಪ್ರದಾನ ಸಮಾರಂಭವನ್ನು ಅ.2ರಂದು ಕೆಎಚ್‌ಬಿ ಪ್ರೆಸ್ ಕಾಲನಿಯಲ್ಲಿರುವ ಟ್ರಸ್ಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಸಂಚಾಲಕ ಎಂ.ಎನ್.ಸುಂದರರಾಜ್ ಹೇಳಿದರು.

ಸಮಾಜ ಸೇವೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ಪ್ರಶಸ್ತಿ, ಶ್ರೀ ಲಲಿತ ಪುರಸ್ಕಾರ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ವರ್ಷ ಮಧ್ಯಪ್ರದೇಶದಲ್ಲಿ 22 ಎಕರೆ ಬಂಜರು ಭೂಮಿಯಲ್ಲಿ ದಟ್ಟ ಕಾಡು ಬೆಳೆಸಿದ್ದ 67 ವರ್ಷದ ಡಾ. ಶಂಕರ್ ಲಾಲ್‌ಗಾರ್ಗ್ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಪುರಸ್ಕಾರ ಹೊಂದಿದೆ. ಸೌಂದರ್ಯ ಲಹರಿ ಉಪಾಸಕಿ, ಬೆಂಗಳೂರಿನ ಆಶಾ ಆರ್.ಕುಮಾರ್ ಅವರಿಗೆ ಲಲಿತ ಪುರಸ್ಕಾರ ಜತೆ 10 ಸಾವಿರ ರೂ. ನಗದು ನೀಡಿ ಗೌರವಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಗ್ಗೆ 11.15ಕ್ಕೆ ಹಿರಿಯೂರಿನ ಶ್ರೀ ಶಾರದಾ ಆಶ್ರಮದ ಅಧ್ಯಕ್ಷೆ ಮಾತಾ ಚೈತನ್ಯಮಯಿ ಸಮಾರಂಭ ಉದ್ಘಾಟಿಸುವರು. ಶ್ರೀ ದೊಡ್ಡಮ್ಮ ದೇವಿ ಉಪಾಸಕ, ಟ್ರಸ್ಟಿನ ಅಧ್ಯಕ್ಷ ಶ್ರೀ ಸಿದ್ದಪ್ಪಾಜಿ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ವಿಶೇಷ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಗುವುದು. ಅದಕ್ಕೂ ಮುನ್ನ ಬೆಳಗ್ಗೆ 8.30ಕ್ಕೆ ಮುಕ್ತಾಭಟ್ ನೇತೃತ್ವದಲ್ಲಿ ಸಾಮೂಹಿಕ ದುರ್ಗಾಕವಚ ಪಠಣ, ಅನ್ನಪೂರ್ಣ ಕಾಳಾಚಾರ್ ನೇತೃತ್ವದಲ್ಲಿ ಭಜನೆ, ಶ್ರೀ ದೊಡ್ಡಮ್ಮದೇವಿ ಮತ್ತು ತೊಟ್ಟಿಲುಶಾಸ್ತ್ರ ನಡೆಯಲಿದೆ ಎಂದರು.

ಪ್ರಮುಖರಾದ ನರಸಿಂಹ, ಗಜೇಂದ್ರ ಕುಡಾಲ್ಕರ್, ಸತೀಶ್, ರವಿಕುಮಾರ್, ಸಚಿನ್, ಪುರುಷೋತ್ತಮ್, ವಿಜಯ್ ಸುದ್ದಿಗೋಷ್ಠಿಯಲ್ಲಿದ್ದರು.