ಉಪ್ಪಾರನಂದಿಹಾಳ ಗ್ರಾಪಂ ವ್ಯಾಪ್ತಿಯ ಚಿಕ್ಕ ಲೆಕ್ಕಿಹಾಳದಲ್ಲಿ ವಸತಿ ಯೋಜನೆಯಡಿ ಆಯ್ಕೆಯಾದವರ ಮನೆಗೆ ತೆರಳಿದ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಬಸನಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ ಮಾಹಿತಿ ಪಡೆದರು. 
ನ್ಯೂಸ್

ದಾಖಲೆ ಪರಿಶೀಲಿಸಿದ ಅಧಿಕಾರಿಗಳು

ಗಾಯತ್ರಿ ಮಾಲಿಪಾಟೀಲ್

ಮುದಗಲ್: ಗ್ರಾಮಸಭೆ ನಡೆಸದೆ ಬಸವ ವಸತಿ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಉಪ್ಪಾರನಂದಿಹಾಳ ಗ್ರಾಪಂಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ದಾಖಲೆ ಪರಿಶೀಲಿಸಿತು.

ಉಪ್ಪಾರನಂದಿಹಾಳ ಗ್ರಾಪಂ ವ್ಯಾಪ್ತಿ 2021-22ನೇ ಸಾಲಿನ ಬಸವ ವಸತಿ ಯೋಜನೆಯಡಿ 150 ಮನೆಗಳ ಮಂಜೂರಾಗಿತ್ತು. ಆದರೆ, ವ್ಯಾಪ್ತಿಯ ಚಿಕ್ಕ ಲೆಕ್ಕಿಹಾಳ ಹಾಗೂ ದೊಡ್ಡ ಲೆಕ್ಕಿಹಾಳದಲ್ಲಿ ಗ್ರಾಮಸಭೆ ನಡೆಸದೆ ಮನೆ ಹಂಚಿಕೆ ಮಾಡಲಾಗಿದೆ ಎಂದು ಸ್ಥಳೀಯರು ದೂರು ನೀಡಿದ್ದರು. ಹೀಗಾಗಿ ಮಂಗಳವಾರ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಸನಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ ಅವರು ವಸತಿ ಯೋಜನೆ ಕಡತಗಳನ್ನು ಪರಿಶೀಲಿಸಿದರು. ಕಡತಗಳು ಸಮರ್ಪಕವಾಗಿಲ್ಲ. ಆದ್ದರಿಂದ ಗ್ರಾಮ ಸಭೆ ನಡೆಸಿದ ವಿಡಿಯೋ, ದಾಖಲೆಗಳನ್ನು ಕೇಳಿದಾಗ ಜಿಪಂಗೆ ಕಳಿಸಲಾಗಿದೆ ಎಂದು ಗ್ರಾಪಂ ಅಧಿಕಾರಿಗಳು ಹೇಳಿದರು ಎನ್ನಲಾಗಿದೆ.

ನಂತರ ಎರಡೂ ಗ್ರಾಮಗಳಿಗೆ ತೆರಳಿ ಮಾಹಿತಿ ಪಡೆಯಲಾಯಿತು. ಈ ವೇಳೆ ಗ್ರಾಮದಲ್ಲಿ ಮನೆಗಳಿದ್ದವರನ್ನೇ ಬಸವ ವಸತಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಮನೆಗಳ ವಿತರಿಸುವಲ್ಲಿ ಜನಪ್ರತಿನಿಧಿಗಳು, ಗ್ರಾಪಂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕ ಲೆಕ್ಕಿಹಾಳದ ರೇಣುಕಮ್ಮ ಹಾಗೂ ಇತರರು ಒತ್ತಾಯಿಸಿದರು.