ನವದೆಹಲಿ: ಜಗತ್ತಿನೆಲ್ಲೆಡೆ ಕರೊನಾ ವೈರಸ್ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಈ ಮನುಕುಲದ ಮಹಾಮಾರಿ ನಿಯಂತ್ರಿಸಲು ಸರ್ಕಾರಗಳು ಹಾಗೂ ನಾಗರಿಕ ಸಮಾಜ ಹೆಣಗುತ್ತಿವೆ. ಅವರಲ್ಲಿ ಸೋಂಕಿತರ ತಪಾಸಣೆ ನಡೆಸುವ ಹಾಗೂ ಚಿಕಿತ್ಸೆ ನೀಡುವ ವೈದ್ಯರು, ದಾದಿಯರು ಮತ್ತಿತರ ವೈದ್ಯಕೀಯ ಸಿಬ್ಬಂದಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಜೀವದ ಹಂಗು ತೊರೆದು ಹಾಗೂ ಕೌಟುಂಬಿಕ ಸೌಖ್ಯವನ್ನೆಲ್ಲ ತ್ಯಾಗ ಮಾಡಿ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಜನರ ಪ್ರಾಣ ಉಳಿಸುವ ಆರೋಗ್ಯ ಕಾರ್ಯಕರ್ತರೇ ಸೋಂಕಿಗೆ ಬಲಿಯಾಗುತ್ತಿರುವುದು ದುರಂತ. ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದಲ್ಲಿನ ಈ ಕುರಿತ ಪರಿಸ್ಥಿತಿಯ ಒಂದು ಪಕ್ಷಿ ನೋಟ ಇಲ್ಲಿದೆ.
ವೈದ್ಯರೇ ಕ್ವಾರಂಟೈನ್ನಲ್ಲಿ!
ದೇಶದಾದ್ಯಂತ ಕ್ವಾರಂಟೈನ್ಗೆ ಒಳಗಾದ ವೈದ್ಯರಲ್ಲಿ ಕೂಡ ಮಹಾರಾಷ್ಟ್ರದವರೇ ಹೆಚ್ಚಿದ್ದಾರೆ. ಮಹಾರಾಷ್ಟ್ರದ ಪಾಲು ಶೇ. 83. ದೆಹಲಿಯದ್ದು ಶೇ. 11. ಕ್ವಾರಂಟೈನ್ಗೆ ಒಳಗಾದ ವೈದ್ಯರಲ್ಲಿ ಕರ್ನಾಟಕದ ಪಾಲು ಶೇ. 6 ಆಗಿದೆ.
96 ವೈದ್ಯರಿಗೆ ಸೋಂಕು
- ‘ಏಪ್ರಿಲ್ 22ರವರೆಗೆ ಲಭ್ಯವಾದ ಮಾಹಿತಿ ಪ್ರಕಾರ, ಭಾರತದ ವಿವಿಧ ಭಾಗಗಳಲ್ಲಿ ಕನಿಷ್ಠ 96 ವೈದ್ಯರು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಅವರಿಗೆ ನಡೆಸಿದ ತಪಾಸಣೆ ಪಾಸಿಟಿವ್ ಬಂದಿದೆ. ಸೋಂಕಿತ ನರ್ಸ್ಗಳ ಸಂಖ್ಯೆ 156.
- ‘ ಆಸ್ಪತ್ರೆ ವಾತಾವರಣ, ಕರೊನಾ ವೈರಸ್ ರೋಗಿಗಳಿಂದಾಗಿ ಇವರಿಗೆ ವೈರಾಣು ಸೋಂಕು ತಗಲಿದೆ.
- ಕರೊನಾ ಸೋಂಕಿತ ಸಿಬ್ಬಂದಿಯೊಂದಿಗೆ ಸಂಪರ್ಕವಿದ್ದ ಕನಿಷ್ಠ 826 ವೈದ್ಯಕೀಯ ಕಾರ್ಯಕರ್ತರು ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ.
- ಕನಿಷ್ಠ 20 ಆಸ್ಪತ್ರೆಗಳನ್ನು ಭಾಗಶಃ ಅಥವಾ ಪೂರ್ಣವಾಗಿ ಮುಚ್ಚಲಾಗಿದೆ.
ಸೋಂಕಿತ ವೈದ್ಯಕೀಯ ಸಿಬ್ಬಂದಿ
ವೈದ್ಯರು: 96. ನರ್ಸ್ಗಳು: 156.
ವೈದ್ಯಕೀಯ ಕಾರ್ಯಕರ್ತರು: 145.
ಮಹಾರಾಷ್ಟ್ರದಲ್ಲಿ ಅಧಿಕ
- ಭಾರತದಲ್ಲಿ ಸೋಂಕಿತ ವೈದ್ಯರ ಪೈಕಿ ಶೇ. 42 ಮಂದಿ ಮಹಾರಾಷ್ಟ್ರದವರು. ಶೇ. 70.5 ದಾದಿಯರು ಇದೇ ರಾಜ್ಯದವರು. ಶೇ. 84 ವೈದ್ಯಕೀಯ ಸಿಬ್ಬಂದಿ (ಆಡಳಿತಾತ್ಮಕ ಸಿಬ್ಬಂದಿ ಒಳಗೊಂಡಿಲ್ಲ) ಕೂಡ ಮಹಾರಾಷ್ಟ್ರಕ್ಕೆ ಸೇರಿದವರು.
- ರೋಗಿಗಳ ತಪಾಸಣೆ, ಚಿಕಿತ್ಸೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ವೈರಸ್ಗೆ ತುತ್ತಾಗಿ ಕ್ವಾರಂಟೈನ್ಗೆ ಒಳಪಟ್ಟ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸುಮಾರು ಹತ್ತು ಆಸ್ಪತ್ರೆಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮುಚ್ಚಲಾಗಿದೆ.
- ಕರ್ನಾಟಕ, ಪಶ್ಚಿಮ ಬಂಗಾಳ, ದೆಹಲಿ ಮತ್ತು ತಮಿಳುನಾಡಿನಲ್ಲಿ ಕೂಡ ಕೆಲವು ಆಸ್ಪತ್ರೆಗಳನ್ನು ಮುಚ್ಚಲಾಗಿದೆ.