| ಯಂಕಣ್ಣ ಸಾಗರ್ ಬೆಂಗಳೂರು
ರಸ್ತೆ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖ ಲಾಗಿದ್ದ ಯುವತಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ಬಟ್ಟೆಯ ತುಂಡನ್ನು ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಿ ಎಡವಟ್ಟು ಮಾಡಿರುವ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಯುವತಿಗೆ, ಕೆಲ ದಿನಗಳ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿದ ಸಂದರ್ಭ ಹೊಟ್ಟೆಯಲ್ಲಿ ಬಟ್ಟೆಯ ತುಂಡು ಇರುವುದು ಗೊತ್ತಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಬಟ್ಟೆ ತುಂಡನ್ನು ಹೊರತೆಗೆದಿರುವ ವೈದ್ಯರು ಯುವತಿಗೆ ಮರುಜೀವ ಒದಗಿಸಿದ್ದಾರೆ. ಪುತ್ರಿಯ ಜೀವಕ್ಕೆ ಕುತ್ತು ತಂದಿರುವ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ.
ಆಗಿದ್ದೇನು?: ಆರ್.ಟಿ. ನಗರದ 25 ವರ್ಷದ ಯುವತಿ, ಐಎಎಸ್ಗೆ ಕೋಚಿಂಗ್ ಪಡೆಯುತ್ತಿದ್ದರು. ಮಾ.17ರಂದು ಪರೀಕ್ಷೆಯೊಂದನ್ನು ಬರೆಯಲು ಬನ್ನೇರುಘಟ್ಟ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಸ್ಕೂಟರ್ನಲ್ಲಿ ತೆರಳುವಾಗ ಅಪಘಾತವಾಗಿದ್ದು ಗಾಯಗೊಂಡಿದ್ದ ಆಕೆಯನ್ನು ಬನಶಂಕರಿ 3ನೇ ಹಂತದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ವೇಳೆ ಎಡಗೈ ಮೂಳೆ ಮುರಿದಿರುವುದನ್ನು ವೈದ್ಯರು ದೃಢಪಡಿಸಿದ್ದರು.
ಇದೇ ವೇಳೆ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಸ್ಕ್ಯಾನಿಂಗ್ ಪರೀಕ್ಷೆ ನಡೆಸಿದಾಗ ಹೊಟ್ಟೆಯ ಒಳಭಾಗದಲ್ಲಿ ಗಾಯ ಆಗಿರುವುದು ಕಂಡು ಬಂದಿತ್ತು. ಆಗ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದ ವೈದ್ಯರು ಮಾ.23ರವರೆಗೆ ಆಸ್ಪತ್ರೆಯಲ್ಲೆ ಚಿಕಿತ್ಸೆ ಮುಂದುವರಿಸಿದ್ದರು. ಇದಾದ 2-3 ದಿನದಲ್ಲಿ ಯುವತಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಆರೋಗ್ಯದಲ್ಲಿ ಏರುಪೇರಾಗಿತ್ತು. ಆಗ ತಪಾಸಣೆ ನಡೆಸಿದ್ದ ವೈದ್ಯರು, ‘ಶ್ವಾಸಕೋಶದಲ್ಲಿ ಇನ್ಪೆಕ್ಷನ್’ನಿಂದ ‘ನ್ಯುಮೋನಿಯಾ’ ರೀತಿ ಆಗಿದೆ. ಬನ್ನೇರುಘಟ್ಟದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಮತ್ತೊಂದು ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸಿದ್ದ ವೈದ್ಯರು, ಏ.4ರಂದು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದರು. 2-3 ದಿನದಲ್ಲಿ ಮತ್ತೇ ಆರೋಗ್ಯ ಸಮಸ್ಯೆಯಾಗಿತ್ತು. ಏ.16ರಂದು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿ ಎಂಡೋಸ್ಕೋಪಿ, ಸಿಟಿ ಸ್ಕಾ್ಯನ್ ಮತ್ತಿತರ ಪರೀಕ್ಷೆ ನಡೆಸಿದ ವೈದ್ಯರಿಗೆ, ಹೊಟ್ಟೆಯಲ್ಲಿ ವಸ್ತು ಇರುವುದು ಕಂಡು ಬಂದಿತ್ತು.
ಪುತ್ರಿಯ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಬನಶಂಕರಿ 3ನೇ ಹಂತದಲ್ಲಿರುವ ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಹೊಟ್ಟೆಯಲ್ಲಿ ಬಟ್ಟೆಯ ತುಂಡನ್ನು ಬಿಟ್ಟು ಪುತ್ರಿಯ ಪ್ರಾಣಕ್ಕೆ ಕುತ್ತು ತಂದಿದ್ದಾರೆ. ಆಸ್ಪತ್ರೆಯ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿ ತಂದೆ ದೂರು ನೀಡಿದ್ದಾರೆ. ದೂರಿನ ಅನ್ವಯ ವೈದ್ಯರಾದ ರಾಜೇಶ್ ಮೂರ್ತಿ, ಗೋಪಿಕಾ ರಾಜೇಶ್, ಸಂಗಮೇಶ್, ಮನೋಜಿತ್ ಹಾಗೂ ಮಂಜುನಾಥ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಗಿರಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.