ನವದೆಹಲಿ: ಈಗಾಗಲೇ ಈ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಇದೇ ಆಸ್ಪತ್ರೆಯಲ್ಲಿ ಮತ್ತೊಬ್ಬ ವೈದ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ಗೊತ್ತಾಗದ್ದರಿಂದ ಪ್ರಕರಣದ ಕುರಿತ ಕುತೂಹಲ ಹೆಚ್ಚಾಗಿದೆ. ವೃತ್ತಿಯಲ್ಲಿ ಅರಿವಳಿಕೆ ತಜ್ಞ ಆಗಿರುವ ಈ ವೈದ್ಯ ಇದೀಗ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ಅನಸ್ತೇಷಿಯಾಲಜಿಯ ಪ್ರಥಮ ವರ್ಷದ ವಿದ್ಯಾರ್ಥಿ, ವೈದ್ಯ ಭೀಮ್ಸಂದೇಶ್ ತುಪೆ ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಂಡ ದುರ್ದೈವಿ. ಅರಿವಳಿಕೆ ಚುಚ್ಚುಮದ್ದನ್ನು ಮಂಗಳವಾರ ಹೈಡೋಸ್ನಲ್ಲಿ ಸ್ವತಃ ಚುಚ್ಚಿಕೊಂಡು ಅಸ್ವಸ್ಥಗೊಂಡಿರುವ ಈ ವೈದ್ಯರನ್ನು ತಕ್ಷಣ ಚಿಕಿತ್ಸೆಗೆ ಒಳಪಡಿಸಲಾಯಿತಾದರೂ ಬದುಕುಳಿಯಲಿಲ್ಲ.
ಮುಂಬೈಯಲ್ಲಿನ ನಾಯರ್ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದ್ದು, 26 ವರ್ಷದ ಈ ವೈದ್ಯರ ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಈ ಆಸ್ಪತ್ರೆಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿರುವ ತುಪೆ ಅನಸ್ತೇಷಿಯಾ ವಿಭಾಗದಲ್ಲಿ ಸ್ವಾತಕೋತ್ತರ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿ ಕೂಡ ಆಗಿದ್ದರು. ಔರಂಗಾಬಾದ್ನಲ್ಲಿರುವ ತಂದೆ ಅಸ್ವಸ್ಥಗೊಂಡಿದ್ದರಿಂದ ಅವರನ್ನು ನೋಡಲು ಹೋಗಿದ್ದ ತುಪೆ, ಅಲ್ಲಿಂದ ಮರಳಿದ ಮರುದಿನವೇ ಈ ಕೃತ್ಯ ಎಸಗಿದ್ದಾರೆ. ಸಾಯಲು ಒಂದು ನಿಗದಿತ ಔಷಧವನ್ನು ಅವರು ಚುಚ್ಚುಮದ್ದಿನ ರೂಪದಲ್ಲಿ ಚುಚ್ಚಿಕೊಂಡಿದ್ದರು ಎಂದು ಮುಂಬೈನ ಅಗ್ರಿಪದ ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಕೆಲವು ಸರ್ಜರಿಗಳನ್ನು ನಡೆಸಿದ ಬಳಿಕ ಹಾಸ್ಟೆಲ್ಗೆ ಹೋಗುವುದಾಗಿ ಹೇಳಿದ್ದ ತುಪೆ, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕಾರ್ಯನಿಮಿತ್ತ ಹಾಸ್ಟೆಲ್ ರೂಮ್ಗೆ ಬಂದಾಗ ಡಾ.ತುಪೆ ಮೂರ್ಛೆ ಹೋಗಿ ಬಿದ್ದಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಕೊನೆಗೂ ಜೀವ ಕಳೆದುಕೊಂಡರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಅಂದಹಾಗೆ ಈ ಆಸ್ಪತ್ರೆಯಲ್ಲಿ ಇಂಥ ಪ್ರಕರಣ ಇದೇ ಮೊದಲೇನಲ್ಲ. ಎರಡು ವರ್ಷಗಳ ಹಿಂದೆ ಡಾ.ಪಾಯಲ್ ತಡ್ವಿ ಎಂಬವರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಸಂಬಂಧಿಕರು ಆಸ್ಪತ್ರೆಯಲ್ಲಿನ ಹಾಗೂ ಜಾತೀಯತೆಯಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಆರೋಪಿಸಿದ್ದರು. (ಏಜೆನ್ಸೀಸ್)