ನ್ಯೂಸ್

ಕೌಟುಂಬಿಕ ಆರೋಗ್ಯದ ಆಪ್ತಮಿತ್ರ

theerthaswamy
ಆರೋಗ್ಯಭಾಗ್ಯದಲ್ಲಿ ವೈದ್ಯರ ಪಾತ್ರ ಎಷ್ಟು ಮುಖ್ಯವಾದುದು ಎಂಬುದಕ್ಕೆ ವಿವರಣೆ ಅನಗತ್ಯ. ಇವತ್ತಿನ ಕಾಲದಲ್ಲಿ ವೈದ್ಯಕೀಯ ರಂಗ ಕಮರ್ಷಿಯಲ್ ಆಗಿದೆ ಎಂಬ ಆಕ್ಷೇಪಗಳ ನಡುವೆಯೂ ವೈದ್ಯರಿಗೆ ಗೌರವ, ಮನ್ನಣೆ ಇದ್ದೇ ಇದೆ. ‘ಮುಂಚೂಣಿಯಲ್ಲಿ ಕುಟುಂಬ ವೈದ್ಯರು’ ಎಂಬುದು ಈ ಸಲದ ವೈದ್ಯರ ದಿನದ ಘೋಷವಾಕ್ಯ. ಕುಟುಂಬವೊಂದರ ಎಲ್ಲ ಸದಸ್ಯರ ಆರೋಗ್ಯ ರಕ್ಷಣೆ ಜವಾಬ್ದಾರಿ ಈ ವೈದ್ಯರದ್ದು. ಫ್ಯಾಮಿಲಿ ಡಾಕ್ಟರ್​ಗಳ ಮಹತ್ವ, ಅವರ ಆಪ್ತ ಆರೈಕೆಯ ಬಗ್ಗೆ ಬೇರೆ ಬೇರೆ ರಂಗದ ಹಲವರು ಇಲ್ಲಿ ಮೆಲುಕು ಹಾಕಿದ್ದಾರೆ.
ಅರ್ಧರಾತ್ರಿಯಲ್ಲಿ ಮಗುವನ್ನು ಕಾಪಾಡಿದವರು...

ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿದ ವೈದ್ಯ ಮಹಾನುಭಾವ ಡಾ. ಪಾರ್ಥಸಾರಥಿ. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಅವರ ಕ್ಲಿನಿಕ್ ಇತ್ತು. ನನ್ನ ಮಗನಿಗೆ ಆಗ ಮೂರ್ನಾಲ್ಕು ತಿಂಗಳಷ್ಟೇ. ಒಂದು ದಿನ ತುಂಬಾ ಅತಿಸಾರವಾಗಿ ಭೇದಿ ನಿಲ್ಲದೇ ವಿಪರೀತ ಬಸವಳಿದಿದ್ದ. ಮನೆಯವರಿಗೆಲ್ಲ ಗಾಬರಿ, ಆತಂಕ. ಅಕ್ಕಪಕ್ಕದವರಂತೂ ‘ಮಗು ಉಳಿಯಲ್ಲ’ ಎಂದು ಹೇಳಲು ಶುರುಮಾಡಿದ್ದರು. ತಕ್ಷಣ ಆ ಕ್ಲಿನಿಕ್​ನ ಬೋರ್ಡ್ ನೋಡಿದ್ದು ನೆನಪಾಯಿತು. ಅಲ್ಲಿಗೆ ಕರೆದೊಯ್ದೆವು. ವೈದ್ಯರು ಇಂಜೆಕ್ಷನ್ ಕೊಟ್ಟರು. ಮಗುವಿಗೆ ಎಚ್ಚರವಾಯಿತು. ಸಿರಪ್ ಕೊಟ್ಟ ಮೇಲೆ ಚೇತರಿಸಿಕೊಂಡಿತು. ಇನ್ನೊಮ್ಮೆ ಮಗುವಿಗೆ ವಿಪರೀತ ಜ್ವರ ಬಂದಿತ್ತು. ನಮಗೆ ಗೊತ್ತಿದ್ದ ಔಷಧಿ, ಮನೆಮದ್ದು ಎಲ್ಲ ಮಾಡಿದೆವು. ಪ್ರಯೋಜನವಾಗಲಿಲ್ಲ. ಅರ್ಧರಾತ್ರಿಯಲ್ಲಿ ಮಗನಿಗೆ ಪ್ರಜ್ಞೆ ತಪ್ಪಿತು. ಆಗ ಡಾ. ಪಾರ್ಥಸಾರಥಿ ಅವರ ಮನೆಗೇ ಕರೆದುಕೊಂಡು ಹೋದೆವು. ಅವರು ಇಂಜೆಕ್ಷನ್, ಸಿರಪ್ ಕೊಟ್ಟರು. ಮನೆಗೆ ಕರೆದುಕೊಂಡು ಬಂದರೆ ಮನೆಯಲ್ಲಿ ಹಾಲಿರಲಿಲ್ಲ. ಪಕ್ಕದ ಮನೆಯವರು ತಂದು ಕೊಟ್ಟರು. ಕಷ್ಟಪಟ್ಟು 8-10 ಚಮಚ ಹಾಲು ಕುಡಿಸಿದ ನಂತರ ಮಗು ಕಣ್ತೆರೆಯಿತು. ಅರ್ಧರಾತ್ರಿಯಲ್ಲಿ ಹೋದಾಗಲೂ ಕಾಳಜಿಯಿಂದ ಮಗುವನ್ನು ಕಾಪಾಡಿದ ಆ ವೈದ್ಯರು ನಮ್ಮ ಪಾಲಿಗೆ ಅಕ್ಷರಶಃ ವೈದ್ಯೋ ನಾರಾಯಣೋ ಹರಿಃ ಆದರು. ಮುಂದೆ ನಮ್ಮ ಕುಟುಂಬ ವೈದ್ಯರೇ ಆದರು. ಮಗ ಮೂರನೆಯ ತರಗತಿ ಓದುತ್ತಿರುವಾಗ ಒಮ್ಮೆ ತುತ್ತೂರಿ ಹಿಡಿದು ಆಟವಾಡುವಾಗ ಅದು ಆತನ ಬಾಯಿಗೆ ಚುಚ್ಚಿಕೊಂಡು ರಕ್ತ ಬರತೊಡಗಿತ್ತು. ಗಾಬರಿಯಲ್ಲಿದ್ದ ನಾವು ಪಾರ್ಥಸಾರಥಿ ಬಳಿಗೆ ಕರೆದೊಯ್ದೆವು. ಅವರು ಜೆಲ್ ಹಚ್ಚಿ, ದ್ರವಾಹಾರ ಕೊಡುವಂತೆ ಸೂಚಿಸಿದರು. ಮಗ ಗುಣವಾದ. ನನ್ನ ಮಗನಿಗೆ ಈಗ 59 ವರ್ಷ. ಪಾರ್ಥಸಾರಥಿಯವರೂ, ಅವರ ಚಿಕಿತ್ಸಾಲಯವೂ ಈಗಿಲ್ಲ. ಆದರೆ ಈಗಲೂ ನಾವು ಭಗವಂತ ಸ್ವರೂಪಿಯಾದ ಅವರನ್ನು ನೆನಪಿಸಿಕೊಳ್ಳುತ್ತಿರುತ್ತೇವೆ. ಅವರು ಡಾ. ರಾಜ್-ಲೀಲಾವತಿ ಅಭಿನಯದ ‘ತುಂಬಿದ ಕೊಡ’ ಸಿನಿಮಾದಲ್ಲೂ ಅಭಿನಯಿಸಿದ್ದರು.

ಆರೋಗ್ಯದ ಇತಿಹಾಸ ಬಲ್ಲರು

ಬದುಕು ಸರಿಯಾಗಿ ನಡೆಯಬೇಕು ಅಂದರೆ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡೂ ಚೆನ್ನಾಗಿರಬೇಕು. ನಮ್ಮ ದೇಹಪ್ರಕೃತಿ ತಿಳಿದುಕೊಂಡಿರುವ ವೈದ್ಯರ ಅಗತ್ಯವಿದೆ. ಯಾಕೆಂದರೆ ಆರೋಗ್ಯ ಸಮಸ್ಯೆ ಉಂಟಾದಾಗಲೆಲ್ಲ ಬೇರೆ ಬೇರೆ ವೈದ್ಯರ ಬಳಿ ಹೋಗುತ್ತಿದ್ದರೆ, ಪ್ರತಿ ಬಾರಿ ನಮ್ಮ ಆರೋಗ್ಯದ ಹಿನ್ನೆಲೆಯನ್ನು ಮೊದಲಿನಿಂದ ತಿಳಿದುಕೊಂಡು ಚಿಕಿತ್ಸೆ ನೀಡುತ್ತಾರೆ. ಭಾರತದಲ್ಲಿ ಪುರಾತನ ಕಾಲದಿಂದಲೂ ಕುಟುಂಬ ವೈದ್ಯ ಪರಿಕಲ್ಪನೆ ಇದೆ. ಹಳ್ಳಿಗಳಲ್ಲಿ ವೈದ್ಯರಿಗೆ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ಇತಿಹಾಸ ತಿಳಿದಿರುತ್ತದೆ. ತಾಯಿಯ ಆರೋಗ್ಯಕ್ಕೆ ಸಂಬಂಧಪಟ್ಟಂತೆ ನನಗೆ ಐದಾರು ವರ್ಷಗಳ ಕಾಲ ವೈದ್ಯರೊಂದಿಗೆ ಒಡನಾಡಿದಾಗ ಅನೇಕ ಅನುಭವಗಳಾದವು. ರೋಗಿಯೊಬ್ಬರ ಹಿಸ್ಟರಿ ಎಷ್ಟು ಮುಖ್ಯ ಎಂಬುದು ತಿಳಿಯಿತು. ಬಿಪಿಗೆ ಆರು ಬಗೆಯ ಮಾತ್ರೆ ತೆಗೆದುಕೊಳ್ಳಬೇಕು ಎಂಬುದು ಫ್ಯಾಮಿಲಿ ಡಾಕ್ಟರ್​ಗೆ ತಿಳಿದಿರುತ್ತೆ. ನಾನೇ ಮನೆಯಲ್ಲಿದ್ದು ಅಮ್ಮನನ್ನು ನೋಡಿಕೊಳ್ಳುತ್ತಿದ್ದೆ. ಅವರಿಗೆ ನಿಯಮಿತವಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಎಮರ್ಜೆನ್ಸಿಯಲ್ಲಿದ್ದ ಅಮ್ಮನಿಗೆ ಕೆಲವೇ ನಿಮಿಷಗಳಲ್ಲಿ ಚೇತರಿಸಿಕೊಳ್ಳುವಂತೆ ಔಷಧ ನೀಡಿದರು. ಮಲ್ಲಿಗೆ ನರ್ಸಿಂಗ್ ಹೋಮ್ಲ್ಲಿದ್ದ ಫಿಸಿಶಿಯನ್ ಡಾ. ನಾಗರಾಜ್ ಹಲವು ವರ್ಷಗಳ ಕಾಲ ನಮ್ಮ ಫ್ಯಾಮಿಲಿ ಡಾಕ್ಟರ್ ಆಗಿದ್ದರು. ಕಳೆದ 15 ವರ್ಷಗಳಿಂದ ಯಂಗ್ ಅಂಡ್ ಎನರ್ಜಿಟಿಕ್ ಡಾ. ಮಧುಸೂದನ್ ಫ್ಯಾಮಿಲಿ ಡಾಕ್ಟರ್ ಆಗಿದ್ದಾರೆ. ಈಗಿನ ಕಾಲದಲ್ಲಿ ಕುಟುಂಬ ವೈದ್ಯ ಪರಿಕಲ್ಪನೆ ಕಡಿಮೆಯಾಗುತ್ತಿದೆ. ಅವರಿಗೆ ಕುಟುಂಬದವರ ಆರೋಗ್ಯ ಹಿಸ್ಟರಿ ಬಗ್ಗೆ ಸಂಪೂರ್ಣ ತಿಳಿವಳಿಕೆ ಇರುತ್ತದೆ. ಅದನ್ನು ನೋಡಿಕೊಂಡೇ ಚಿಕಿತ್ಸೆ ನೀಡುತ್ತಾರೆ. ತಪು್ಪ ಚಿಕಿತ್ಸೆ ನೀಡಿ ತಿದ್ದುಕೊಳ್ಳಲಾಗದಂತಹ ಪರಿಸ್ಥಿತಿ ಉಂಟಾಗಬಾರದು.

ವೈದ್ಯಕೀಯ ಜ್ಞಾನ ಕರಗತ

ವೈದ್ಯರೆಂದರೆ ದೇವರಿಗೆ ಸಮ. ಡಾ. ಆನಂದ ಕಬ್ಬೂರ ನನಗೆ ಅಚ್ಚುಮೆಚ್ಚಿನ ವೈದ್ಯರು. 30 ವರ್ಷಗಳಿಂದ ಅವರೇ ನಮ್ಮ ಕುಟುಂಬದ ವೈದ್ಯರು. ಧಾರವಾಡ ಜನತೆಯ ಪಾಲಿಗೆ ಅವರದು ಚಿರಪರಿಚಿತ ಹೆಸರು ಮತ್ತು ಎಲ್ಲರಿಗೂ ಬೇಕಾದವರು. ವೈದ್ಯಕೀಯ ಕ್ಷೇತ್ರದ ಜ್ಞಾನವನ್ನು ಕರಗತ ಮಾಡಿಕೊಂಡ ಹಿರಿಯ ವೈದ್ಯರ ಸಾಲಿನಲ್ಲಿ ಒಬ್ಬರು. ವೃತ್ತಿ ಗೌರವ ಕಾಪಾಡಿಕೊಂಡ ಅವರು, ಒಳ್ಳೆಯ ಹಸ್ತಗುಣದಿಂದ ಹೆಸರುವಾಸಿಯಾಗಿದ್ದಾರೆ.

| ಪಂ.ಎಂ. ವೆಂಕಟೇಶಕುಮಾರ ಪದ್ಮಶ್ರೀ ಪುರಸ್ಕೃತ ಹಿಂದುಸ್ತಾನಿ ಗಾಯಕ

ನನ್ನ ಆರೋಗ್ಯದ ಭರವಸೆ

1994ರಲ್ಲಿ ನಾನು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿದ್ದಾಗ ನನ್ನ ಪತ್ನಿಯ ಸಹೋದರ ಜಗದೀಶ್​ಗೆ ತೀವ್ರ ಅನಾರೋಗ್ಯ ಆಗಿತ್ತು. ಆಗ ನನ್ನ ಆಪ್ತ ಕಾರ್ಯದರ್ಶಿಯಾಗಿದ್ದ ಪ್ರಭಾಕರ್ ತಮಗೆ ಪರಿಚಯದ ಡಾ. ರವಿಕುಮಾರ್ ಅವರನ್ನು ಕರೆದು ಚಿಕಿತ್ಸೆ ಕೊಡಿಸಿದರು. ಆಗ ಅವರು ಕೆಸಿ ಜನರಲ್ ಆಸ್ಪತ್ರೆಯಲ್ಲಿದ್ದರು. ಜಗದೀಶ್ ಚೇತರಿಸಿಕೊಂಡರು. ಅಂದಿನಿಂದ ಡಾ. ರವಿಕುಮಾರ್ ನನ್ನ ಆಪ್ತ ವೈದ್ಯರಾಗಿದ್ದಾರೆ. ನನ್ನ ಮಗ ಯತೀಂದ್ರ ವೈದ್ಯನಾಗಿದ್ದರೂ ರವಿಕುಮಾರ್ ಅವರೇ ನಮ್ಮ ಕುಟುಂಬದ ವೈದ್ಯರು. 2000ರಲ್ಲಿ ನಾನು ಬೆಂಗಳೂರಿನ ಆರ್​ಎಂವಿ ಬಡಾವಣೆಯಲ್ಲಿದ್ದೆ, ಆಗ ಬೆಳಗಿನ ವಾಕಿಂಗ್ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿತು. ರವಿಕುಮಾರ್ ತಕ್ಷಣ ಬಂದವರೇ ಬೆಂಗಳೂರಿನ ಮೊದಲ ಹೃದ್ರೋಗ ತಜ್ಞ ಡಾ.ಎಸ್.ಎಸ್. ರಮೇಶ್ ಬಳಿಗೆ ಕರೆದುಕೊಂಡು ಹೋದರು. ಆ ನಂತರ ಅವರ ಸಲಹೆಯ ಮೇರೆಗೆ ದೆಹಲಿಯಲ್ಲಿ ಆಂಜಿಯೋಪ್ಲಾಸ್ಟ್ ಮಾಡಿಸಲಾಯಿತು. ನನ್ನೊಂದಿಗೆ ದೆಹಲಿಗೂ ಬಂದಿದ್ದರು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಡುತ್ತಿದ್ದ ನಿದ್ರೆರೋಗ ಕುರಿತು ಪರೀಕ್ಷೆಗೆ ಎರಡು ತಿಂಗಳು ಕಷ್ಟಪಟ್ಟು ನನ್ನನ್ನು ಒಪ್ಪಿಸಿ ತಜ್ಞರಿಂದ ಸಲಹೆ ಕೊಡಿಸಿದರು. ಈಗ ನಾನು ಆ ಸಮಸ್ಯೆಯಿಂದ ಮುಕ್ತನಾಗಿದ್ದೇನೆ. ಪ್ರತಿ ಎರಡು ದಿನಕ್ಕೊಮ್ಮೆ ಬಂದು ನನ್ನನ್ನು ನೋಡಿಕೊಂಡು ಹೋಗುತ್ತಾರೆ. ನಮ್ಮ ಕುಟುಂಬದಲ್ಲಿ ಏನೇ ಸಮಸ್ಯೆಯಾದರೂ ಇವರ ಸಲಹೆ ತೆಗೆದುಕೊಳ್ಳುತ್ತೇವೆ. ಅವರೇ ಚಿಕಿತ್ಸೆ ನೀಡುವುದು ಹೆಚ್ಚು, ಕೆಲವೊಮ್ಮೆ ಬೇರೆ ತಜ್ಞರ ಬಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಾರೆ. ಪ್ರಾಣಾಯಾಮ, ಯೋಗಾಸನ, ಪ್ರತಿನಿತ್ಯ ವಾಕಿಂಗ್ ಇವುಗಳನ್ನು ಬಿಡದಂತೆ ಸಲಹೆ ನೀಡಿದ್ದಾರೆ. ನಾನು ಪಾಲಿಸಿಕೊಂಡು ಬಂದಿದ್ದೇನೆ. ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಎಲ್ಲವೂ ನಿಯಂತ್ರಣದಲ್ಲಿದೆ. ಹೃದಯದಲ್ಲಿಯೂ ಯಾವುದೇ ಸಮಸ್ಯೆ ಇಲ್ಲ ಎಂಬುದು ಇತ್ತೀಚಿನ ಪರೀಕ್ಷೆಗಳಿಂದ ತಿಳಿದುಬಂದಿದೆ. ನನ್ನ ಆರೋಗ್ಯ ಇಷ್ಟು ಫಿಟ್ ಇರಲು ರವಿಕುಮಾರ್ ಅವರೇ ಕಾರಣವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರು ಈಗ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರೂ ಆಗಿದ್ದಾರೆ.

| ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ

ಡಾಕ್ಟರ್ಸ್ ಫ್ಯಾಮಿಲಿ

ಶೀತ, ನೆಗಡಿ, ಕಾಲುನೋವಿನಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ಹಿಂದೆಯೂ ಫಿಸಿಶಿಯನ್​ಗಳನ್ನು ಭೇಟಿ ಮಾಡುತ್ತಿದ್ದರು. ಅವರು ಎಕ್ಸ್​ರೇ ಮಾಡಿಸಬೇಕಾ ಅಥವಾ ಹೆಚ್ಚಿನ ಚಿಕಿತ್ಸೆ ಪಡೆಯಲು ಬೇರೆ ವೈದ್ಯರನ್ನು ಸಂರ್ಪಸಬೇಕಾ ಅಂತ ತಿಳಿಸುತ್ತಿದ್ದರು. ಈಗ ಫ್ಯಾಮಿಲಿ ಡಾಕ್ಟರ್​ಗಳು ಹಾಗೆ ಮಾಡುತ್ತಾರೆ. ನನ್ನ ಅತ್ತೆ ಹಲವು ವರ್ಷಗಳಿಂದ ಒಬ್ಬರೇ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಅವರಿಗೆ ಅತ್ತೆಯ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಏನಾದರೂ ಆರೋಗ್ಯ ಸಮಸ್ಯೆಯಾದರೆ ತಕ್ಷಣ ಅದೇ ವೈದ್ಯರನ್ನು ಸಂರ್ಪಸುತ್ತೇವೆ. ಅವರು ಮಾತ್ರೆ, ಔಷಧಗಳನ್ನು ಹೇಳುತ್ತಾರೆ. ನನ್ನ ಅಪ್ಪ ಕೂಡ ಬನಶಂಕರಿ ಸುತ್ತಮುತ್ತಲ ಹಲವು ಕಲಾವಿದರಿಗೆ, ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಫ್ಯಾಮಿಲಿ ಡಾಕ್ಟರ್. ಮನೆಯಲ್ಲೇ ಡಾಕ್ಟರ್ ಇರುವ ಕಾರಣ ನನಗಂತೂ ತುಂಬ ಸುಲಭ. ಬೇರೆಯವರಾದರೆ ಅಪಾಯಿಂಟ್​ವೆುಂಟ್ ತಗೋಬೇಕು, ಕನ್ಸಲ್ಟ್ ಮಾಡಬೇಕು. ಅಮ್ಮ ಗೈನಕಾಲಜಿಸ್ಟ್. ನಾನು ಗರ್ಭಾವಸ್ಥೆಯ ಸಮಯದಲ್ಲಿ ತಲೆಸುತ್ತುತ್ತಿದೆ, ಸುಸ್ತಾಗುತ್ತಿದೆ, ಅದು ಇದು ಅಂತ ಅಮ್ಮನಿಗೆ ಪ್ರತಿದಿನ ಕರೆ ಮಾಡಿ ತಲೆ ತಿನ್ನುತ್ತಿದ್ದೆ. ಇನ್ನು ಶೂಟಿಂಗ್ ಸಮಯದಲ್ಲೂ ನನಗೆ ಮಾತ್ರವಲ್ಲ ಸೆಟ್​ನಲ್ಲಿರುವ ಸಹ ಕಲಾವಿದರಿಗೆ ಅಥವಾ ತಂಡದವರಿಗೆ ಏನಾದರೂ ಆರೋಗ್ಯ ಸಮಸ್ಯೆಯಾದರೆ ತಕ್ಷಣ ಅಪ್ಪನಿಗೆ ಕರೆ ಮಾಡುತ್ತಿದ್ದೆ.

| ಪ್ರಣೀತಾ ನಟಿಸಾಮಾಜಿಕ ಹಿತಚಿಂತಕ

ವ್ಯಕ್ತಿಯ ಬದುಕಿನಲ್ಲಿ ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಸೌಭಾಗ್ಯ ಇನ್ನೊಂದಿಲ್ಲ. ಈ ನಿಟ್ಟಿನಲ್ಲಿ ಕುಟುಂಬ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದು. ದುಡ್ಡೇ ದೊಡ್ಡಪ್ಪ ಎನ್ನುವ ದುಷ್ಟ ಪರಿಪಾಠವೊಂದು ತಲೆಎತ್ತಿ, ಮಾನವೀಯ ಮಧುರ ಸಂಬಂಧ ಕುಸಿಯುತ್ತಿರುವ ಈ ಹೊತ್ತಿನಲ್ಲಿ ಆರೋಗ್ಯ ಕುರಿತ ಸಾಮಾಜಿಕ ನಿರ್ವಹಣೆ ಇನ್ನಷ್ಟು ಜಟಿಲವಾಗುತ್ತಿದೆ. ಜಾಗತಿಕ ಮಟ್ಟದ ಅತಿ ಪ್ರಬಲ ಔಷಧ ಕಂಪನಿಗಳ ಹಣ ಗಳಿಕೆಯ ಪೈಪೋಟಿ ನಾಡಿನ ಆರೋಗ್ಯ ಚಿಂತನೆಗೆ ಮಾರಕವಾಗುತ್ತಿದೆ. ‘ವೈದ್ಯೋ ನಾರಾಯಣೊ ಹರಿಃ’ ಎಂಬ ಪೂಜ್ಯ ಭಾವನೆ ಅಂದು ನಮ್ಮಲ್ಲಿ ಮನೆಮಾಡಿತ್ತು. ವೈದ್ಯ ಮನೆತನದ ಹಿರಿಯ ಸದಸ್ಯನೆಂಬ ಅನಿಸಿಕೆ ಬೇರೂರಿತ್ತು. ಆದರೆ, ಪರಿಸ್ಥಿತಿ ಇಂದು ಹಾಗಿಲ್ಲ. ಈ ಕೊರತೆಯನ್ನು ಕುಟುಂಬ ವೈದ್ಯ ಪರಂಪರೆ ಮಾತ್ರ ಸರಿದೂಗಿಸಬಲ್ಲದು. ನಗುಮೊಗದ ವೈದ್ಯ ಎಷ್ಟೋ ಶಾರೀರಿಕ ಸಮಸ್ಯೆಗಳಿಗೆ ಸುಲಭ ಪರಿಹಾರ ನೀಡಬಲ್ಲ. ರೋಗಿಯ ಮನೋಸ್ಥೈರ್ಯವನ್ನು ಗಟ್ಟಿಗೊಳಿಸುತ್ತಾ, ಭರವಸೆಯ ಚೈತನ್ಯವನ್ನು ತುಂಬಬಲ್ಲ, ಮನೆಮಂದಿಯ ಆರೋಗ್ಯ ಕುರಿತ ಚಾರಿತ್ರಿಕ ದಾಖಲೆಗಳ ಸಂಪೂರ್ಣ ಮಾಹಿತಿಯ ಅರಿವಿರುವಂಥ ಕುಟುಂಬ ವೈದ್ಯ ಆತ್ಮೀಯತೆಯ, ಮಧುರ ಬಾಂಧವ್ಯದ ನಾಂದಿ ಹಾಡಬಲ್ಲ. ನಮ್ಮ ಈವೊತ್ತಿನ ಆರೋಗ್ಯ ಕೇಂದ್ರಿತ ವಿಲಕ್ಷಣ ಗೊಂದಲಗಳಿಗೆ ಸೂಕ್ತ ಪರಿಹಾರವೆಂದರೆ ಕುಟುಂಬ ವೈದ್ಯ ಪದ್ಧತಿ. ಕುಟುಂಬ ವೈದ್ಯ ಮನೆಮದ್ದಷ್ಟೇ ಅಲ್ಲ; ಸಾಮಾಜಿಕ ಹಿತಚಿಂತಕ!

ಸೇವಾಭಾವದ ಗುಜರಾತಿ ಡಾಕ್ಟರ್

ನನ್ನ ತಂದೆ ಡಾ.ಕೆ.ಆರ್.ಯತಿರಾಜ್ ಅಯ್ಯಂಗಾರ್ ಸರ್ಕಾರಿ ಆಯುರ್ವೆದ ವೈದ್ಯರಾಗಿದ್ದರು. ಅವರೇ ನನ್ನ ಪಾಲಿಗೆ ಅದರ್ಶ ಹಾಗೂ ಸ್ಪೂರ್ತಿದಾಯಕ ವ್ಯಕ್ತಿ. ಮನೆಯಲ್ಲಿ ಮಕ್ಕಳ ಪಾಲಿಗೆ ತಂದೆಯ ಸ್ಥಾನದ ಜತೆಗೆ ವೈದ್ಯರು ಕೂಡ ಅವರೇ ಆಗಿದ್ದರು. ಮೈಸೂರು, ಬೆಂಗಳೂರು, ವಿಜಯಪುರ (ಬಿಜಾಪುರ) ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರ ಕೈಗುಣದಿಂದ ಸಾವಿರಾರು ರೋಗಿಗಳು ಗುಣಮುಖರಾಗಿದ್ದನ್ನು ನೋಡಿದ್ದೇವೆ. ಅವರು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ 70ರ ದಶಕದಲ್ಲಿ ಮೆಜೆಸ್ಟಿಕ್​ನ ಗುಜರಾತ್ ಔಷಧಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ‘ಗುಜರಾತಿ ಡಾಕ್ಟರ್’ ಎಂದೇ ಪ್ರಸಿದ್ಧಿ ಪಡೆದಿದ್ದರು. ಚಿಕಿತ್ಸೆ ಪಡೆಯಲು ರಾಜ್ಯದ ವಿವಿಧೆಡೆಯಿಂದ ಜನರು ಬರುತ್ತಿದ್ದರು. ಮಧ್ಯರಾತ್ರಿಯಾದರೂ ಸರಿ ರೋಗಿಗಳಿಗೆ ಚಿಕಿತ್ಸೆ ನೀಡಿಯೇ ಮನೆಗೆ ಬರುತ್ತಿದ್ದರು. 6 ಮಂದಿ ಮಕ್ಕಳ ಪೈಕಿ ನಾನು ಕಿರಿಯವ. 2010ರಲ್ಲಿ 90ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ನನ್ನ ತಂದೆ ಪ್ರಾಮಾಣಿಕ ವೈದ್ಯ, ಎಂದೂ ಹಣದ ಆಸೆಗೆ ಬಿದ್ದವರಲ್ಲ. ‘ದುಡ್ಡಿನ ಹಿಂದೆ ಬೀಳಬೇಡಿ, ಇದೊಂದು ಸೇವೆ ಎಂದು ಕಾರ್ಯನಿರ್ವಹಿಸಿ’ ಎಂದು ಯುವ ವೈದ್ಯರಿಗೆ ತಿಳಿಹೇಳುತ್ತಿದ್ದರು. ಅವರ ಮಾತುಗಳೇ ನನ್ನ ಕ್ರೀಡಾಜೀವನಕ್ಕೆ ಸ್ಪೂರ್ತಿಯಾಯಿತು.

ಒಳ್ಳೆಯ ವೈದ್ಯರು, ವಕೀಲರನ್ನು ನಂಬಬೇಕು

ಜೀವನದಲ್ಲಿ ಒಳ್ಳೆಯ ವೈದ್ಯರು ಮತ್ತು ಒಳ್ಳೆಯ ವಕೀಲರನ್ನು ನಾವು ನಂಬಲೇಬೇಕು. ಸಣ್ಣಪುಟ್ಟ ನೋವಾದರೂ ಫ್ಯಾಮಿಲಿ ಡಾಕ್ಟರ್ ಬಳಿ ಹೇಳಿಕೊಂಡು ಪರಿಹಾರ ಪಡೆಯಬಹುದು. ಕಳೆದ 30 ವರ್ಷಗಳಿಂದ ನಾನು ಮತ್ತು ನಮ್ಮ ಕುಟುಂಬ ದವರು ಡಾ. ಶ್ರೀಮಂದಿರ್ ಕುಮಾರ್ ಅವರ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದೇವೆ. ಅವರೇ ನಮ್ಮ ಫ್ಯಾಮಿಲಿ ಡಾಕ್ಟರ್. ನಾವು ಎಲ್ಲಾದರೂ ಹೊರಗೆ ಹೋಗಿದ್ದಾಗ ಆರೋಗ್ಯ ಸಮಸ್ಯೆ ಉಂಟಾದರೂ, ಅವರಿಗೇ ಕರೆ ಮಾಡುತ್ತೇವೆ. ಅವರು ತಕ್ಷಣ ಔಷಧಗಳನ್ನು ಹೇಳುತ್ತಾರೆ. ಏನೇ ಸಮಸ್ಯೆ ಹೇಳಿಕೊಂಡರೂ ಮೊದಲು ರಿಪೋರ್ಟ್ ನೋಡುತ್ತಾರೆ, ನಂತರ ಚಿಕಿತ್ಸೆ ನೀಡುತ್ತಾರೆ.

ಜೀವನದಲ್ಲಿ ಪ್ರಮುಖ ಪಾತ್ರ

ಜರ್ನಿ ಮಾಡುವಾಗ ಎಲ್ಲ ಹುಡುಗಿಯರಿಗೂ ಸಾಮಾನ್ಯವಾಗಿ ಆಗುವಂತೆ ನನಗೂ ತಲೆನೋವು, ಯೂರಿನರಿ ಇನ್ಪೆಕ್ಷನ್ ಆಗುತ್ತಿತ್ತು. ಆಗ ನಮ್ಮ ಫ್ಯಾಮಿಲಿ ಡಾಕ್ಟರ್ ಡಾ.ದಿವ್ಯಾ ಅವರಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದೆ. ಡಾ. ಹರೀಶ್ ಅಂತ ಮತ್ತೊಬ್ಬ ವೈದ್ಯರಿದ್ದಾರೆ. ಚಿತ್ರೀಕರಣ ಇರುವಾಗ ನಾನು ಮೈಸೂರಿನಲ್ಲಿ ಇರುತ್ತಿರಲಿಲ್ಲ. ಅಮ್ಮ ಒಬ್ಬರೇ ಇರುತ್ತಿದ್ದರು. ಅಮ್ಮನಿಗೆ ಯಾವಾಗಾದರೂ ಶುಗರ್ ಲೆವಲ್ ಕಡಿಮೆಯಾದರೆ ನಾನು ಡಾ. ಹರೀಶ್​ಗೆ ತಕ್ಷಣ ಕರೆ ಮಾಡುತ್ತಿದ್ದೆ. ಅವರು ಪರಿಹಾರ ನೀಡುತ್ತಿದ್ದರು. ನಮ್ಮ ಕುಟುಂಬದಲ್ಲಿ ಯಾರಿಗೆ ಏನೇ ಆರೋಗ್ಯ ಸಮಸ್ಯೆಯಾದರೂ ತಕ್ಷಣ ಸ್ಪಂದಿಸಿ ಪರಿಹಾರ ನೀಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಫ್ಯಾಮಿಲಿ ಡಾಕ್ಟರನ್ನು ಹೊಂದಿರಬೇಕು. ಬೆಂಗಳೂರಿನಂತಹ ನಗರಗಳಲ್ಲಿ ತುರ್ತು ಪರಿಸ್ಥಿತಿ ಸಮಯದಲ್ಲಿ ಆಸ್ಪತ್ರೆಗಳಿಗೆ ಹೋಗುವುದೇ ತಡವಾಗಿಬಿಡುತ್ತದೆ. ಅಂತಹ ಸಮಯದಲ್ಲಿ ಏನು ಮಾಡಬೇಕು, ತಕ್ಷಣಕ್ಕೆ ಯಾವ ಔಷಧ ತೆಗೆದುಕೊಳ್ಳಬೇಕು ಎಂದು ಕುಟುಂಬ ವೈದ್ಯರಿಂದ ಸಹಾಯವಾಗುತ್ತದೆ. ಅದರಲ್ಲೂ ನಮ್ಮಂತಹ ಕಲಾವಿದರು ಶೂಟಿಂಗ್, ಪ್ರಮೋಷನ್ ಅಂತ ತುಂಬ ಓಡಾಡುತ್ತಿರುತ್ತೇವೆ. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಆಗುವುದಿಲ್ಲ. ಅಸಿಡಿಟಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಾಗುತ್ತವೆ. ಡಾ. ದಿವ್ಯಾ ಮತ್ತು ಡಾ. ಹರೀಶ್ ಇಬ್ಬರೂ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

| ಅಮೃತಾ ಅಯ್ಯಂಗಾರ್ ನಟಿ