ಅಹಮದಾಬಾದ್: ಕರೊನಾ ಸೋಂಕು ಸಾಮಾನ್ಯ ಜನರ ಮೇಲೆ ಒಂದು ರೀತಿಯ ಪರಿಣಾಮ ಬೀರಿದ್ದರೆ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಇನ್ನೂ ಭಯಾನಕ ಪರಿಣಾಮ ಬೀರಿದೆ. ರಜೆ, ವಿಶ್ರಾಂತಿ ಏನೂ ಇಲ್ಲದೆ ಸಿಬ್ಬಂದಿ ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ. ಹಸೆಮಣೆ ಏರಿದ್ದ ವೈದ್ಯೆಯೊಬ್ಬರು ಒಂದಿಷ್ಟು ದಿನ ಗಂಡನೊಂದಿಗೆ ನೆಮ್ಮದಿಯಾಗಿ ಇರದೆ ಕೆಲಸಕ್ಕೆ ಹಾಜರಾಗಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ಡಾ. ಆರತಿಗೆ ಇತ್ತೀಚೆಗಷ್ಟೇ ಮದುವೆಯಾಗಿತ್ತು. ಮದುವೆಯಾಗಿ ಮೂರು ದಿನಗಳು ಕಳೆಯುವುದರೊಳೆಗೆ ಆಕೆಗೆ ಕರೆ ಬಂದಿದೆ. ಆಸ್ಪತ್ರೆಯಲ್ಲಿ ನಿಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಆರು ವೈದ್ಯರಿಗೆ ಕರೊನಾ ಸೋಂಕು ದೃಢವಾಗಿದೆ. ಹಾಗಾಗಿ ನೀವು ಕೆಲಸಕ್ಕೆ ಹಾಜರಾಗಬೇಕು ಎಂದು ಹೇಳಲಾಗಿದೆ. ಅದನ್ನು ಕೇಳಿದ ಆರತಿ, ಬೇರೇನು ಯೋಚಿಸದೆ ಕೆಲಸಕ್ಕೆ ತೆರಳಿದ್ದಾರೆ. ಮದುವೆಗಾಗಿ ಹಚ್ಚಿದ್ದ ಮದರಂಗಿ ಕೈನಲ್ಲಿ ಮಾಸುವ ಮುನ್ನವೇ ಕರೊನಾ ರೋಗಿಗಳ ಚಿಕಿತ್ಸೆ ಆರಂಭಿಸಿದ್ದಾರೆ.
ಗಂಡನೊಂದಿಗೆ ಜೀವನಪೂರ್ತಿ ಇರುತ್ತೇನೆ. ಆದರೆ ಈಗ ಉಳಿಸಬೇಕಾದ ಪ್ರಾಣ ಒಮ್ಮೆ ಹೋದರೆ ಮತ್ತೆ ಬರುವುದಿಲ್ಲವಲ್ಲವೇ ಎಂದು ಆರತಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವೈದ್ಯೆ ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳು ಅತ್ಯಂತ ಪ್ರಿಯ ವೈದ್ಯೆ ಎನ್ನಿಸಿಕೊಂಡಿದ್ದಾರೆ. (ಏಜೆನ್ಸೀಸ್)