ಬೆಂಗಳೂರು: "ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವ ವೇಳೆ ಪಕ್ಷ ನಿಷ್ಠನಾಗಿ ಜೈಲುವಾಸ ಆಯ್ಕೆ ಮಾಡಿಕೊಂಡೆ" ಎಂದು DCM ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ನಗರದ ಎಫ್ ಕೆಸಿಸಿಐ ಸಭಾಂಗಣದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಿಸಿಎಂ ಮಾತನಾಡಿದರು. "ಸಮ್ಮಿಶ್ರ ಸರ್ಕಾರದಲ್ಲಿ ಹತ್ತು ಜನ ಶಾಸಕರು ರಾಜಿನಾಮೆ ನೀಡಲು ಹೊರಟಿದ್ದರು. ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ವಾಪಸ್ ಕ್ವಾಟ್ರಸ್ ಗೆ ಕರೆದುಕೊಂಡು ಬಂದೆ. ಆಗ ನನಗೆ ಒಬ್ಬ ಆದಾಯ ತೆರಿಗೆ ಆಡಿಟರ್ ಫೋನ್ ನಿಂದ ಕರೆ ಬಂದಿತ್ತು. ನನ್ನ ಜೊತೆ ಡಿಜಿಯೂ ಇದ್ದರು. ಅವರು ದೂರವಾಣಿ ಕರೆಯಲ್ಲಿ ಮಾತನಾಡಿದರು. ನನ್ನ ಜೊತೆ ಡಿ.ಕೆ. ಸುರೇಶ್ ಅವರೂ ಇದ್ದರು. ಕರೆ ಮಾಡಿದವರು ನೀವು ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ ಎಂದು ಕೇಳಿದರು. ಎಲ್ಲಾ ಶಾಸಕರನ್ನು ವಾಪಸ್ಸು ಕರೆದುಕೊಂಡು ಬನ್ನಿ ಎಂದು ಆಯ್ಕೆ ನೀಡಿದರು" ಎಂದು ತಿಳಿಸಿದರು.
"ಆಗ ನಾನು ನನಗೆ ಇಷ್ಟೆಲ್ಲಾ ಸ್ಥಾನ ನೀಡಿರುವ ಪಕ್ಷವನ್ನು ಬಿಡುವುದಿಲ್ಲ. ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾಜೀವ್ ಗಾಂಧಿ ಅವರು ನನಗೆ ಟಿಕೆಟ್ ನೀಡಿ, ಮಂತ್ರಿ ಮಾಡಿದ್ದರು. ಬಂಗಾರಪ್ಪ ಅವರು ನನಗೆ ಸಹಕಾರ ನೀಡಿದ್ದರು. ಈ ಪಕ್ಷದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಜೈಲು ಆಯ್ಕೆ ಮಾಡಿಕೊಂಡೆ. ಅಂದು ನಾನು ಬೇರೆ ಆಯ್ಕೆ ಮಾಡಿದ್ದರೆ ಏನೇನು ಆಗುತ್ತಾ ಇತ್ತೋ ಗೊತ್ತಿಲ್ಲ" ಎಂದರು.