Pareidolia: ನೀಲಿ ಮತ್ತು ಬಿಳಿ ಬಣ್ಣದಲ್ಲಿ ಕೂಡಿರುವ ತಿಳಿ ನೀರಿನಂತ ಆಕಾಶದಲ್ಲಿ ತೇಲುವ ಮೋಡಗಳನ್ನು ನೀವು ನೋಡಿದಾಗ, ಕೆಲವೊಮ್ಮೆ ಮನುಷ್ಯರ ಮುಖ, ಪ್ರಾಣಿಗಳ ಆಕೃತಿ ಅಥವಾ ಯಾವುದೋ ವಸ್ತುವಿನ ರೂಪಗಳನ್ನು ನೋಡಿದ ಅನುಭವವಾಗುತ್ತದೆ. ಒಂದು ನಿಮಿಷ ಇದೇನೂ ಕಾಲ್ಪನಿಕವೋ ಎಂದು ಅನಿಸಿಬಿಡುತ್ತೆ. ಆದರೆ, ಅಸಲಿಗೆ ಇದು ನಿಜವೇ.
ಮೋಡಗಳಲ್ಲಿ ಮಾತ್ರವಲ್ಲ, ಗೋಡೆಗಳ ಮೇಲಿನ ಕಲೆಗಳು, ಮರಗಳ ಆಕಾರಗಳು ಮತ್ತು ನೆರಳಿನಲ್ಲಿ ಅರಳುವ ಚಿತ್ರಗಳು ಸೇರಿದಂತೆ ಮಾನವರು ಸಾಮಾನ್ಯವಾಗಿ ಇಂತಹ ಪರಿಚಿತ ಆಕಾರಗಳನ್ನು ಆಗಾಗ್ಗೆ ನೋಡುತ್ತಾರೆ. ಮೋಡಗಳಲ್ಲಿ ಅರಳುವ ಆಕಾರಗಳು ನಮಗೆ ಯಾರೋ ಮನುಷ್ಯನ ಮುಖ ಅಥವಾ ಇನ್ನಿತರ ವಸ್ತುಗಳ ಗುರುತಿನಂತೆ ಕಾಣಿಸುವ ಮೂಲಕ ಭಾರಿ ಅಚ್ಚರಿಯನ್ನು ಉಂಟುಮಾಡುತ್ತದೆ. ಅಸಲಿಗೆ, ಈ ವಿದ್ಯಮಾನವನ್ನು ವಿಜ್ಞಾನದಲ್ಲಿ 'ಪ್ಯಾರೆಡೋಲಿಯಾ' ಎಂದು ಕರೆಯುತ್ತಾರೆ.
ಇದು ಕೇವಲ ಕಲ್ಪನೆಯಲ್ಲ. ಸುತ್ತಮುತ್ತಲಿನ ದೃಶ್ಯಗಳಲ್ಲಿ ಅರ್ಥ ಮತ್ತು ರೂಪವನ್ನು ಕಂಡುಕೊಳ್ಳುವುದು ಮಾನವ ಮಿದುಳಿನ ನೈಸರ್ಗಿಕ ಪ್ರವೃತ್ತಿ ಎನ್ನಲಾಗಿದೆ. ನಾವು ಮೋಡಗಳಲ್ಲಿ ಮೇಕೆ, ನಾಯಿ ಅಥವಾ ಮುಖವನ್ನು ನೋಡುವಂತೆಯೇ, ನಾವು ಕೆಲವೊಮ್ಮೆ ಶಬ್ದಗಳಲ್ಲಿ ಪರಿಚಿತ ಪದಗಳು ಅಥವಾ ಶಬ್ದಗಳನ್ನು ಆಲಿಸುತ್ತೇವೆ. ಅಂದರೆ, ಕಣ್ಣುಗಳು ನೋಡುವ ರೂಪವೇ ಇಲ್ಲದ ಆಕಾರಗಳಿಗೆ ನಮ್ಮ ಮಿದುಳು ತನ್ನದೇ ಅರ್ಥವನ್ನು ನೀಡುತ್ತದೆ.
'ಪ್ಯಾರೈಡೋಲಿಯಾ' ಎಂಬುದು ಯಾವುದೇ ಕಾಯಿಲೆಯ ಲಕ್ಷಣವಲ್ಲ. ಮೋಡಗಳಲ್ಲಿ ಅಥವಾ ಗೋಡೆಗಳ ಮೇಲಿನ ಇಂತಹ ಚಿತ್ರಗಳು ನಮಗೆ ಪರಿಚಿತವಾಗಿರುವ ಮುಖ ಅಥವಾ ಆಕಾರಗಳನ್ನು ಕಾಣಿಸುವುದರ ಹಿಂದೆ ಮಾನಸಿಕ ಹಾಗೂ ಯಾವುದಾದರೂ ಸಮಸ್ಯೆ ಇರಬಹುದೇನೋ ಎಂಬ ಭಾವನೆಗೆ ಕಾರಣವಾಗಿತ್ತು. ಆದರೆ, ಸಾಮಾನ್ಯ ಸನ್ನಿವೇಶಗಳಲ್ಲಿ ನೈಸರ್ಗಿಕವಾಗಿ ಅನೇಕ ಆರೋಗ್ಯವಂತ ವ್ಯಕ್ತಿಗಳಲ್ಲೂ ಈ ರೀತಿಯ ಆಕಾರಗಳು ಕಾಣಿಸುವುದು ತೀರಾ ಸಾಮಾನ್ಯವಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
ಈ ವಿದ್ಯಮಾನಕ್ಕೂ ಸೃಜನಶೀಲತೆಗೂ ಏನಾದರೂ ಸಂಬಂಧವಿದೆಯೇ ಎಂಬ ಕುತೂಹಲದಿಂದ ಸ್ವಿಟ್ಜರ್‌ಲ್ಯಾಂಡ್‌ನ ಬರ್ನ್ ವಿಶ್ವವಿದ್ಯಾಲಯದ ಸಂಶೋಧಕರು, 50 ಜನ ಆರೋಗ್ಯವಂತ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಿದರು. ಇಲ್ಲಿ, ಅವರಿಗೆ ನೈಸರ್ಗಿಕ ಭೂದೃಶ್ಯಗಳ ಚಿತ್ರಗಳನ್ನು ತೋರಿಸಿ, ಅದರಲ್ಲಿ ಅವರಿಗೆ ಕಂಡ ಆಕಾರಗಳನ್ನು ಬಿಡಿಸಲು ತಿಳಿಸಲಾಯಿತು. ಈ ಪೈಕಿ ಒಟ್ಟು 1,641 ಪ್ಯಾರೈಡೋಲಿಯಾ ಚಿತ್ರಗಳನ್ನು ಬಿಡಿಸಿದರು. ಅದರಲ್ಲಿ ಶೇ.36ರಷ್ಟು ಪ್ರಾಣಿಗಳ ಆಕೃತಿಗಳಾಗಿದ್ದರೆ, ಶೇ.18.2 ಮಾನವ ನಿರ್ಮಿತ ವಸ್ತುಗಳು, ಶೇ.15.3 ಮನುಷ್ಯರು ಮತ್ತು ಮುಖಗಳು, ಶೇ.14.6 ನೈಸರ್ಗಿಕ ವಸ್ತುಗಳು, ಶೇ.6.6 ಕಾಲ್ಪನಿಕ ಆಕೃತಿಗಳು ಹಾಗೂ ಶೇ.4.8 ರಷ್ಟು ಆಹಾರಕ್ಕೆ ಸಂಬಂಧಿಸಿದ ಆಕಾರಗಳಾಗಿದ್ದವು.
ಮೋಡಕ್ಕೆ ವಾಸ್ತವವಾಗಿ ಮುಖ ಅಥವಾ ಒಂದು ಆಕಾರ ಅಂತಿಲ್ಲ. ಆದರೆ, ನಮ್ಮ ಮಿದುಳು ಅದರಲ್ಲಿ ಮುಖದ ನೋಟವನ್ನು ಪತ್ತೆ ಮಾಡುತ್ತದೆ. ಅಂದರೆ, ಹೊರಗಿನ ಪ್ರಪಂಚದಲ್ಲಿನ ನೈಜ ಆಕಾರಗಳು ನಮ್ಮ ನೆನಪುಗಳು, ಅನುಭವಗಳು ಮತ್ತು ಕಲ್ಪನೆಯೊಂದಿಗೆ ಬೆರೆತಿದ್ದಾಗ ಈ ಅನುಭವವು ಸಂಭವಿಸುತ್ತದೆ. ಮುಂದಿನ ಬಾರಿ ನೀವು ಆಕಾಶದತ್ತ ನೋಡಿದಾಗ ಮಾನವ ಮುಖ, ಆನೆ, ಪಕ್ಷಿ ಅಥವಾ ಮೋಡದಲ್ಲಿ ಹಡಗನ್ನು ನೋಡಿದಾಗ ಅದನ್ನು ಕಾಕತಾಳೀಯ ಎಂದು ತಳ್ಳಿಹಾಕಬೇಡಿ. ಅರ್ಥಹೀನ ಆಕಾರಗಳಲ್ಲಿಯೂ ಸಹ ಪರಿಚಿತ ಪ್ರಪಂಚಗಳನ್ನು ಹುಡುಕುವ ನಿಮ್ಮ ಮಿದುಳಿನ ಕ್ಷಿಪ್ರ ಸಾಮರ್ಥ್ಯವನ್ನು ನೀವು ನೋಡುತ್ತಿರುವಿರಿ ಅಷ್ಟೇ. ಬಹುಶಃ ಆ ಕಿರು ಕಲ್ಪನೆಯು ನಿಮ್ಮ ಸೃಜನಶೀಲತೆಯ ಸಂಕೇತ ಎನ್ನಬಹುದು,(ಏಜೆನ್ಸೀಸ್).