ನ್ಯೂಸ್

ಜನಾರ್ಧನ್ ಅವರಿಗೆ ಬ್ಯಾಂಕ್ ಜನಾರ್ಧನ್ ಎಂದು ಹೆಸರು ಬರಲು ಕಾರಣವೇನು ಗೊತ್ತಾ?...Bank Janardhan

ಬೆಂಗಳೂರು:  ಸ್ಯಾಂಡಲ್​ವುಡ್​​ನ ಹಿರಿಯ ನಟ ಬ್ಯಾಂಕ್ ಜನಾರ್ಧನ್ (Bank Janardhan) ನಿಧನ ಹೊಂದಿದ್ದಾರೆ. ಇವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಭಾರೀ ನಷ್ಟವಾಗಿದೆ. ಜನಾರ್ಧನ್ ಅವರಿಗೆ ಬ್ಯಾಂಕ್ ಜನಾರ್ಧನ್ ಎಂದು ಹೆಸರು ಬರಲೂ ಕೂಡ ಕಾರಣವಿದೆ. ಈ ಕುರಿತಾಗಿ ತಿಳಿದುಕೊಳ್ಳೋಣ...

ಬ್ಯಾಂಕ್ ಜನಾರ್ಧನ್ ಎಂದು ಹೆಸರು ಬರಲು  ಕಾರಣ:

ಜನಾರ್ಧನ್  ಚಿತ್ರದುರ್ಗದ  ಹೊಳಲ್​ಕೆರೆ ಬಳಿಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ  ಸಿನಿಮಾ ಹಾಗೂ ನಾಟಕದ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ, ನಾಟಕಗಳನ್ನು ಮಾಡಿಕೊಂಡಿದ್ದರು. ಅವರ ನಾಟಕವನ್ನು ನೋಡಿ ಧೀರೇಂದ್ರ ಗೋಪಾಲ್ ಅವರು ಇಂಪ್ರೆಸ್ ಆಗಿ ಬೆಂಗಳೂರಿಗೆ ಬರುವಂತೆ ಹೇಳಿದ್ದರು.

ಜನಾರ್ಧನ್  ಬೆಂಗಳೂರಿಗೆ ಬಂದು ‘ಊರಿಗೆ ಉಪಕಾರಿ’ ಸಿನಿಮಾದಲ್ಲಿ ವಜ್ರಮುನಿ ಬಾಡಿಗಾರ್ಡ್ ಪಾತ್ರ ಮಾಡಿದರು. ನಾಟಕ ಹಾಗೂ ಬ್ಯಾಂಕ್​ ಉದ್ಯೋಗದಲ್ಲಿ ತೊಡಗಿಕೊಂಡಿದ್ದ ಜನಾರ್ಧನ್ ​ ಅವರ ಬದುಕು ಸಿನಿಮಾಗಳತ್ತ ಒಲವು ಶುರುವಾಯ್ತು.  ವಿಜಯಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರಿಗೆ ಬ್ಯಾಂಕ್ ಜನಾರ್ಧನ್ ಎಂಬ ಹೆಸರು ಬಂದಿತು.

ನಾಟಕಗಳಿಂದ ಆರಂಭ ಆದ ಅವರ ಬದುಕು ನಂತರ ಸಿನಿಮಾಗಳತ್ತ ಹೊರಳಿತು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡೇ ಅವರು ಆರಂಭದಲ್ಲಿ ಚಿತ್ರರಂಗದಲ್ಲಿ ಸಮಯ ಕಳೆದರು. ನಂತರದ ದಿನಗಳಲ್ಲಿ ಅವರಿಗೆ ದೊಡ್ಡ ದೊಡ್ಡ ಆಫರ್​ಗಳು ಬರೋಕೆ ಆರಂಭ ಆದವು. ಅವರು ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ನಂತರ ಜನಾರ್ಧನ್ ಅವರು ಸುಮಾರು 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬ್ಯಾಂಕ್ ಕೆಲಸ ಬಿಟ್ಟಿರಲಿಲ್ಲ. ನಟನೆಯ ಕಾರಣಕ್ಕೆ ಅವರು ಬ್ಯಾಂಕ್​ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೆಲ್ಲ ರಜಗಳೂ ಇಲ್ಲದ ಕಾರಣ ಸಂಬಳ ಕಟ್ ಮಾಡಿಕೊಳ್ಳುತ್ತಿದ್ದರು. ಇತ್ತ ಸಿನಿಮಾಗಳಲ್ಲಿ ನಟಿಸುವಾಗ ಹೆಚ್ಚಿನ ಸಂಭಾವನೆ ನೀಡುತ್ತಿರಲಿಲ್ಲ. ಇದರಿಂದ ಅವರಿಗೆ ಜೀವನ ನಡೆಸೋದೇ ಕಷ್ಟ ಆಗಿತ್ತು.

‘ಇವತ್ತಿನವರೆಗೆ 860 ಸಿನಿಮಾ ಮಾಡಿದ್ದೇನೆ. ಇದರಲ್ಲಿ ಮೂರು ತೆಲುಗು, ಮೂರು ತಮಿಳು, ನಾಲ್ಕು ತುಳು ಮಾಡಿದ್ದೇನೆ. ಆದರೆ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲ. ಯಾಕೆಂದರೆ ಡಿಮ್ಯಾಂಡ್ ಮಾಡೋಕೆ ಹೋಗಿಲ್ಲ. ಎಷ್ಟು ಕೊಟ್ಟರೋ ಅಷ್ಟೇ ತೆಗೆದುಕೊಳ್ಳುತ್ತಿದ್ದೆ. ಪಾತ್ರದ ಬಗ್ಗೆ ವ್ಯಾಮೋಹ ಇತ್ತು. ಹೀಗಾಗಿ, ಎಷ್ಟು ಕೊಡಲಿ ಎಂದು ಕೇಳಿದಾಗ ಇಷ್ಟೇ ಕೊಡಿ ಎಂದು ಕೇಳಲಿಲ್ಲ’ ಎಂದು ಸಂದರ್ಶನವೊಂದಲ್ಲಿ ಬ್ಯಾಂಕ್ ಜನಾರ್ಧನ್ ಹೇಳಿದ್ದರು.