ನ್ಯೂಸ್

ಹೆಣದ ಮೂಗಿಗೆ ಹತ್ತಿ ಇಡುವುದು ಏಕೆ ಗೊತ್ತಾ?

ಬ್ಯಾಕ್ಟೀರಿಯಾಗಳು ಕರಗಿಸುವ ಸ್ವಭಾವ ಹೊಂದಿರುವುದರಿಂದ ಮೃತದೇಹದಲ್ಲಿ ಅನಿಲಗಳು ಉತ್ಪತ್ತಿಯಾಗಿ, ಪ್ರತಿ ಹಂತದಲ್ಲಿಯೂ ದೇಹದ ಬಣ್ಣ ನೀಲಿ, ಹಸಿರು ಮತ್ತು ಕೊನೆಯದಾಗಿ ಕೆಂಪು ಬಣ್ಣಕ್ಕೆ ಬದಲಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಉತ್ಪತ್ತಿಯಾಗುವ ಅನಿಲಗಳು ಮೂಗು ಮತ್ತು ಬಾಯಿಯ ಮುಖಾಂತರ ಹೊರ ಬರುತ್ತವೆ. ಆದ್ದರಿಂದಲೇ ಹೆಣದ ಮೂಗಿಗೆ ಹತ್ತಿ ಮತ್ತು ಬಾಯಿಗೆ ಎಲೆ- ಅಡಿಕೆ, ಅಕ್ಕಿಯನ್ನು ಹಾಕುವುದು. ಮೊದಲ ಹತ್ತು ದಿವಸದೊಳಗೆ ಮೆದುವಾದ ಅಂಗಾಂಗಗಳು ಕರಗುತ್ತವೆ ನಂತರ ಗಟ್ಟಿಯಾಗಿರುವ ಮೂಳೆ ಮತ್ತು ಕೆರಾಟಿನ್ ಪೊ›ಟೀನ್​ನಿಂದ ಮಾಡಲ್ಪಟ್ಟ ಕೂದಲು, ಚರ್ಮ ಮತ್ತು ಉಗುರುಗಳು ಕರಗುವುದಕ್ಕೆ ಅಂದಾಜು ಆರು ತಿಂಗಳಿಂದ ಕೆಲವು ವರ್ಷಗಳವರೆಗೆ ಆಗುತ್ತದೆ. ನಾವು ಬದುಕಿರಬೇಕೆಂದರೂ ಬ್ಯಾಕ್ಟೀರಿಯಾ ಬೇಕು, ಸತ್ತ ನಂತರ ನಮ್ಮ ದೇಹ ಕರಗಬೇಕೆಂದರೂ ಬ್ಯಾಕ್ಟೀರಿಯಾ ಬೇಕು.

ಮೃತದೇಹವನ್ನು ಸುಡುವುದರಿಂದ ಸಾಕಷ್ಟು ತೊಂದರೆಗಳು ಇವೆ. ಮೊದಲನೆಯದಾಗಿ ವಾಯು ಮಾಲಿನ್ಯವಾಗುತ್ತದೆ. ಏಕೆಂದರೆ ಒಂದು ಹೆಣ ಸುಡುವುದಕ್ಕೆ ಅಂದಾಜು 500 ರಿಂದ 800 ಕೆ.ಜಿ. ಸೌದೆ ಬೇಕು. ನಮ್ಮ ದೇಶದಲ್ಲಿ ವರ್ಷಕ್ಕೆ ಅಂದಾಜು ಎಪ್ಪತ್ತು ಲಕ್ಷ ಜನ ಸಾಯುತ್ತಾರೆ, ಎಲ್ಲ ಹೆಣಗಳನ್ನು ಸುಡಲು ಅಂದಾಜು ಐವತ್ತು ಲಕ್ಷ ಟನ್ ಸೌದೆ ಬೇಕಾಗುತ್ತದೆ. ಲಕ್ಷಾಂತರ ಟನ್ ಇಂಗಾಲದ ಡೈಆಕ್ಸೈಡ್, ಇಂಗಾಲದ ಮೋನಾಕ್ಸೈಡ್ ಉತ್ಪತ್ತಿಯಾಗಿ ವಾತಾವರಣ ಸೇರುತ್ತದೆ. ಎರಡನೇ ಅಡ್ಡ ಪರಿಣಾಮ ಎಂದರೆ, ಮೃತದೇಹ ಸುಟ್ಟ ಜಾಗದಲ್ಲಿ ನೆಲ ಕಪ್ಪಾಗಿರುತ್ತದೆ. ಅಂದರೆ ಅಲ್ಲಿ ಭೂಮಿಯೂ ಸುಟ್ಟಿರುತ್ತದೆ. ಇದರಿಂದ ಮಣ್ಣಿನಲ್ಲಿರುವ ಜೀವಿಗಳನ್ನೂ ಸುಟ್ಟಂತೆ ಆಗುತ್ತದೆ. ಇದರಿಂದ ಮೃತದೇಹ ಸುಟ್ಟ ಸ್ಥಳದ ಸುತ್ತಲೂ ಜೀವಿಗಳ ಚಲನವಲನ ಇಲ್ಲದೇ ಅಲ್ಲಿನ ಜೀವವೈವಿಧ್ಯ ಏರು ಪೇರಾಗುತ್ತದೆ. ಇದರಿಂದ ಈ ಸ್ಥಳದಲ್ಲಿನ ಮರ-ಗಿಡಗಳಿಗೂ ಸ್ವಲ್ಪಮಟ್ಟದಲ್ಲಿ ತೊಂದರೆ ಆಗುತ್ತದೆ. ಸುಟ್ಟ ನೆಲದಲ್ಲಿ ಮತ್ತೆ ಜೀವಿಗಳು ಕಾರ್ಯಾರಂಭ ಮಾಡಬೇಕೆಂದರೆ 3-6 ತಿಂಗಳುಗಳೇ ಬೇಕಾಗುತ್ತದೆ.