Snakes and Dogs : ಹಾವುಗಳು ಮತ್ತು ನಾಯಿಗಳು ಮನುಷ್ಯರ ನಡುವೆ ವಾಸಿಸುವ ಸಾಮಾನ್ಯ ಜೀವಿಗಳಾಗಿವೆ. ಅದರಲ್ಲೂ ನಾಯಿಗಳು ಮನುಷ್ಯ ಬೆಸ್ಟ್ ಫ್ರೆಂಡ್ ಎಂದು ಹೇಳಿದರೆ ತಪ್ಪಾಗಲಾರದು. ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನಗಳು. ಒಂದು ಹೊತ್ತು ಊಟ ಹಾಕಿದರೆ ಸಾಯುವವರೆಗೂ ಆತನನ್ನು ಶ್ವಾನಗಳು ಮರೆಯುವುದಿಲ್ಲ. ಇನ್ನು ಹಾವುಗಳನ್ನು ನಮ್ಮ ದೇಶದಲ್ಲಿ ಪೂಜನೀಯ ಭಾವನೆಯಿಂದ ನೋಡಲಾಗುತ್ತದೆ.
ಅಷ್ಟಕ್ಕೂ ಹೀಗೇಕೆ ನಾಯಿ ಮತ್ತು ಹಾವಿನ ವಿಚಾರ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೂ ಒಂದು ಕಾರಣವಿದೆ. ಅದೇನೆಂದರೆ, ನಮ್ಮ ಭಾರತದಲ್ಲಿ ನಾಯಿ ಮತ್ತು ಹಾವುಗಳಿರದ ಒಂದು ಪ್ರದೇಶವಿದೆ ಅಂದರೆ, ನೀವು ನಂಬುತ್ತೀರಾ? ನಂಬಲು ಕಷ್ಟವಾಗಬಹುದು. ಆದರೆ, ಇದೇ ವಾಸ್ತವ. ಹಾವುಗಳು ಮತ್ತು ನಾಯಿಗಳಿಂದ ಮುಕ್ತವಾಗಿರುವ ಭಾರತದ ಪ್ರದೇಶ ಯಾವುದು ಎಂಬುದರ ಕುರಿತು ನಾವೀಗ ತಿಳಿದುಕೊಳ್ಳೋಣ.
ಆಗ್ನೇಯ ಏಷ್ಯಾದಲ್ಲಿ 3,600 ಜಾತಿಯ ಹಾವುಗಳಿವೆ. ಇವುಗಳಲ್ಲಿ ಸುಮಾರು 600 ಜಾತಿಗಳು ವಿಷಪೂರಿತವಾಗಿವೆ. ಭಾರತವೊಂದರಲ್ಲೇ 230 ಜಾತಿಯ ಹಾವುಗಳಿವೆ. ಅವುಗಳಲ್ಲಿ, ಕಾಳಿಂಗ ಸರ್ಪ, ವೈಪರ್ ಮತ್ತು ಬೋವಾ ಕನ್ಸ್ಟ್ರಿಕ್ಟರ್ ವಿಷಪೂರಿತ ಹಾವುಗಳಾಗಿವೆ.
ಇನ್ನು ಕೇರಳವು ಭಾರತದಲ್ಲಿ ಅತಿ ಹೆಚ್ಚು ಹಾವು ಪ್ರಭೇದಗಳನ್ನು ಹೊಂದಿರುವ ರಾಜ್ಯವಾಗಿದೆ. ಆದರೆ, ಪರಿಸರ ಹಾನಿ, ಅರಣ್ಯನಾಶ ಮುಂತಾದ ವಿವಿಧ ಕಾರಣಗಳಿಂದಾಗಿ ಹಾವು ಪ್ರಭೇದಗಳು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿವೆ ಎಂದು ವನ್ಯಜೀವಿ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ ಭಾರತದ ಒಂದು ಪ್ರದೇಶದಲ್ಲಿ ಹಾವುಗಳು ಅಥವಾ ನಾಯಿಗಳಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಇದು ನಿಜಕ್ಕೂ ಆಶ್ಚರ್ಯಕರವಾಗಿದೆ. ಅಂದಹಾಗೆ ಲಕ್ಷದ್ವೀಪವು ಭಾರತದ ಕೇಂದ್ರಾಡಳಿತ ಪ್ರದೇಶವಾಗಿದೆ. ಇದರ ವಿಸ್ತೀರ್ಣ 32 ಚದರ ಕಿಲೋಮೀಟರ್. ಲಕ್ಷದ್ವೀಪವು 36 ಸಣ್ಣ ದ್ವೀಪಗಳಿಂದ ಕೂಡಿದೆ. ಇಲ್ಲಿನ ಜನಸಂಖ್ಯೆ 64,000. ಲಕ್ಷದ್ವೀಪದಲ್ಲಿ ಶೇ.96 ರಷ್ಟು ಮುಸ್ಲಿಮರು ವಾಸವಿದ್ದಾರೆ. ಉಳಿದ ಶೇ.4 ರಷ್ಟು ಹಿಂದು, ಬೌದ್ಧರು ಮತ್ತು ಇತರ ಧರ್ಮದವರಿದ್ದಾರೆ.
ಭಾರತದಲ್ಲಿ ಹಾವುಗಳು ಮತ್ತು ನಾಯಿಗಳಿಂದ ಮುಕ್ತವಾಗಿರುವ ಏಕೈಕ ರಾಜ್ಯ ಲಕ್ಷದ್ವೀಪ. ಅಷ್ಟೇ ಅಲ್ಲ, ಲಕ್ಷದ್ವೀಪಕ್ಕೆ ಭೇಟಿ ನೀಡುವ ಪ್ರವಾಸಿಗರು ತಮ್ಮೊಂದಿಗೆ ನಾಯಿಗಳನ್ನು ತರುವುದನ್ನು ಸಹ ನಿಷೇಧಿಸಲಾಗಿದೆ ಎಂಬುದು ಗಮನಾರ್ಹ ಸಂಗತಿ. (ಏಜೆನ್ಸೀಸ್)