ಬೆಂಗಳೂರು ಇಸ್ರೋ ಶನಿವಾರ ಉಡಾವಣೆ ಮಾಡಲಿರುವ ಆದಿತ್ಯ ಎಲ್-1 ನಲ್ಲಿರುವ ಪ್ರಮುಖ ಸಾಧನವಾದ ವಿಸಿಬಲ್ ಎಮಿಷನ್ ಲೈನ್ ಕೊರೊನಾಗ್ರಾಫ್ (ವಿಎಲ್‌ಇಸಿ)ಯಿಂದ ಮುಂದಿನ ವರ್ಷದ ಫೆಬ್ರವರಿಯಲ್ಲಿ ಸೂರ್ಯನ ಹೊರ ಪದರಲ್ಲಿರುವ ಕೊರೊನಾದ ಚಿತ್ರಗಳನ್ನು ಸೆರೆ ಹಿಡಿದು ಕಳುಹಿಸಲಿದೆ ಎಂದು ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ.
ಕೋರಮಂಗಲದಲ್ಲಿರುವ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ (ಐಐಎ) ಪ್ರಧಾನ ಕಚೇರಿಯಲ್ಲಿ ಶುಕ್ರವಾರ ತಮ್ಮ ನಿರ್ಮಾಣದ ವಿಎಲ್‌ಇಸಿಯ ವಿಶೇಷತೆಯ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಸ್ಥೆಯ ಪ್ರಧಾನ ತನಿಖಾಧಿಕಾರಿ ಪ್ರೊ. ಜಗ್ದೇವ್ ಸಿಂಗ್ ಮಾತನಾಡಿ, ವಿಇಎಲ್‌ಸಿ ಭೂಮಿಯಿಂದ 15 ಲಕ್ಷ ಕಿಮೀ ದೂರ ಕ್ರಮಿಸಿ ಎಲ್-1 ಜಾಗ ತಲುಪಲು 109 ದಿನ ತೆಗೆದುಕೊಳ್ಳಲಿದೆ. ಆ ಬಳಿಕ ಇನ್ನಿತರ ಆರು ಉಪಕರಣಗಳು ಹಂತ ಹಂತವಾಗಿ ತಮ್ಮ ಕಾರ್ಯಾಚರಣೆ ಆರಂಭಿಸಲಿವೆ. ಕೊನೆಯದಾಗಿ ವಿಇಎಲ್‌ಸಿ ತನ್ನ ಚಟುವಟಿಕೆ ಆರಂಭಿಸಲಿದ್ದು ಫೆಬ್ರವರಿ ಮಧ್ಯ ಭಾಗದ ಹೊತ್ತಿಗೆ ಮೊದಲ ಚಿತ್ರ ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.
ವಿಇಎಲ್‌ಸಿಯು ತನ್ನ ಚಟುವಟಿಕೆ ಆರಂಭಿಸಿದ ಬಳಿಕ ಐದು ವರ್ಷಗಳ ಕಾಲ ಪ್ರತಿ ನಿಮಿಷಕ್ಕೆ ಒಂದು ಚಿತ್ರದಂತೆ (ದಿನಕ್ಕೆ 1,440 ಚಿತ್ರ) ವನ್ನು ಕಳುಹಿಸಿಕೊಡಲಿದೆ. ಈ ಚಿತ್ರದ ಅಧ್ಯಯನ, ವಿಶ್ಲೇಷಣೆಗೆ ಇಸ್ರೋ ಮತ್ತು ಐಐಎ ಸಕಲ ಸಿದ್ದತೆ ಮಾಡಿಕೊಂಡಿದೆ. ಸಾಫ್ಟ್‌ವೇರ್ ಈಗಾಗಲೇ ಸಿದ್ದವಾಗಿದ್ದು ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟರ್‌ಗಳನ್ನು ಅಳವಡಿಸಿಕೊಂಡಿದ್ದೇವೆ. ಐಐಎಯು ವಿಇಎಲ್‌ಸಿ ಕಳುಹಿಸಿಕೊಡುವ ಚಿತ್ರಗಳ ಮಾಪನಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಿದರು.
ಐಐಎಯ ಹಿರಿಯ ವಿಜ್ಞಾನಿ ಪ್ರೊ. ಬಿ. ರವೀಂದ್ರ ಮಾತನಾಡಿ, ಭೂಮಿಯಿಂದ ಸೂರ್ಯನನ್ನು ಅಧ್ಯಯನ ಮಾಡಲು ಗ್ರಹಣವಿದ್ದಾಗ ಮಾತ್ರ ಸೂಕ್ತ ವಾತಾವರಣ ಇರುತ್ತದೆ. ಆದರೆ, ಗ್ರಹಣ ಭೂಮಿಯ ಕೆಲವು ಭಾಗದಲ್ಲಿ ಮಾತ್ರ ಗೋಚರವಾಗುವುದು, ಹಾಗೆಯೇ ಅಲ್ಪ ಕಾಲ ಮಾತ್ರ ಇರುವುದರಿಂದ ಪೂರ್ಣ ಸ್ವರೂಪದಲ್ಲಿ ಅಧ್ಯಯನ ನಡೆಸಲು ಸಾಧ್ಯವಾಗುವುದಿಲ್ಲ. ಆದರೆ ನಾವು 15 ಲಕ್ಷ ಕಿಮೀ ಕ್ರಮಿಸಿ ಪ್ರತಿ ದಿನ ಗ್ರಹಣವನ್ನು ಹೋಲುವ ಸ್ಥಿತಿ ಸೃಷ್ಟಿಸಿ ನಿರಂತರವಾಗಿ ಪ್ರಯೋಗ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದರು.
ಸಂಸ್ಥೆಯ ಸಿಸ್ಟಂ ಇಂಜಿನಿಯರಿಂಗ್ ಗ್ರೂಪ್ ಮುಖ್ಯಸ್ಥ ಪ್ರೊ. ನಾಗಭೂಷಣ ಮಾತನಾಡಿ, ಇಸ್ರೋದ ಲಿಯೋಸ್ ತಯಾರಿಸಿರುವ ಅತಿ ಸ್ವಚ್ಛವಾದ ಕನ್ನಡಿಯು ಕೊರೊನಾದ ಬೆಳಕನ್ನು ಸೆರೆ ಹಿಡಿಯಲು ನೆರವಾಗಲಿದೆ. ಇದು ಅತಿ ಉತ್ಕೃಷ್ಟ ದರ್ಜೆಯ ಚಿತ್ರವನ್ನು ಅತ್ಯಂತ ವೇಗವಾಗಿ ಸೆರೆ ಹಿಡಿದು ಭೂಮಿಗೆ ರವಾನಿಸಲಿದೆ ಎಂದು ಮಾಹಿತಿ ಹಂಚಿಕೊಂಡರು.
ಆದಿತ್ಯ ಎಲ್-1 ಮೂಲಕ ನಾವು ಸೂರ್ಯನ ಮೇಲ್ಮೈಗೆ ಹೋಗುತ್ತಿಲ್ಲ. ಭೂಮಿಯಿಂದ 15 ಲಕ್ಷ ಕಿಮೀ ದೂರ ಹೋಗಿ ಅಲ್ಲಿಂದ ಸೂರ್ಯನ ವೀಕ್ಷಣೆ ಮಾಡುತ್ತೇವೆ. ಸೂರ್ಯನ ಮೇಲ್ಮೈ ತಲುಪಲು ಅಲ್ಲಿಂದ ಮತ್ತೆ 14.80 ಕೋಟಿ ಕಿಮೀ ದೂರವಿದೆ. - ಪ್ರೊ. ಬಿ. ರವೀಂದ್ರ, ಐಐಎ ಹಿರಿಯ ವಿಜ್ಞಾನಿ