ಬೆಂಗಳೂರು: ಉಡುಪಿ ಜಿಲ್ಲೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಸೆ ತೋರಿಸಿ 5 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 3ನೇ ಆರೋಪಿ ಹಾಲಶ್ರೀ ಸ್ವಾಮೀಜಿಯನ್ನು ಒಡಿಶಾ ಪೊಲೀಸರು ಬಂಧಿಸಿ ಬೆಂಗಳೂರು ಸಿಸಿಬಿಗೆ ಒಪ್ಪಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಸದ್ಗುರು ಶಿವಯೋಗಿ ಹಾಲಶ್ರೀ ಸ್ವಾಮೀಜಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಬಂಧಿತರು. ಚೈತ್ರಾ ಕುಂದಾಪುರ ಗ್ಯಾಂಗ್ ಸಿಸಿಬಿ ಬಲೆಗೆ ಸಿಲುಕಿಕೊಂಡ ಬೆನ್ನಲ್ಲೆ ಬಂಧನ ಭೀತಿಯಿಂದ ಹಾಲಶ್ರೀ, ಖಾವಿ ಬಿಟ್ಟು ಟೀ ಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಭುವನೇಶ್ವರ ಮಾರ್ಗವಾಗಿ ವಾರಣಾಸಿಗೆ ತೆರಳಲು ಒಡಿಶಾದ ಕಟಕ್ ರೈಲಿನಲ್ಲಿ ಕುಳಿತುಕೊಂಡಿದ್ದರು.
ಬೆಂಗಳೂರಿನ ಸಿಸಿಬಿ ಅಧಿಕಾರಿಗಳ ಮಾಹಿತಿ ಮೇರೆಗೆ ಕಟಕ್ ಪೊಲೀಸರು, ಸೋಮವಾರ (ಸೆ.18) ರಾತ್ರಿ 9:30ರಲ್ಲಿ ಹಾಲಶ್ರೀಯನ್ನು ವಶಕ್ಕೆ ಪಡೆದಿದ್ದರು. ಈ ಮಾಹಿತಿ ತಿಳಿದ ಸಿಸಿಬಿ ಅಧಿಕಾರಿಗಳು, ಕಟಕ್‌ಗೆ ತೆರಳಿ ಸ್ಥಳೀಯ ಕೋರ್ಟ್‌ನಿಂದ ಟ್ರಾನ್ಸಿಟ್ ವಾರಂಟ್ ಪಡೆದು ಮಂಗಳವಾರ ಸಂಜೆ ವಿಮಾನದಲ್ಲಿ ಬೆಂಗಳೂರಿಗೆ ಕರೆ ತಂದಿದ್ದಾರೆ.
ಚೈತ್ರಾ ಕುಂದಾಪುರ ಬಂಧನಕ್ಕೆ ಒಳಗಾಗುತ್ತಿದಂತೆ ಮಠದಿಂದ ಚಾಲಕ ನಿಂಗರಾಜು ಜೊತೆ ಎಸ್ಕೇಪ್ ಆಗಿದ್ದ ಸ್ವಾಮೀಜಿ ಸೆ.11ರ ರಾತ್ರಿ ಮೈಸೂರಿಗೆ ತೆರಳಿದ್ದರು. ಸೆ.12ರಂದು ಮೈಸೂರಿನ ವೀರಸ್ವಾಮಿ ಮಠದಲ್ಲಿ ಒಂದು ದಿನ ವಾಸ್ತವ್ಯ ಹೂಡಿಸಿದ್ದರು. ಸೆ.13ರ ಬೆಳಗ್ಗೆ ಮೈಸೂರಿನ ಬಸ್ ನಿಲ್ದಾಣ ಬಳಿಯ ಮೊಬೈಲ್ ಅಂಗಡಿಗೆ ತೆರಳಿದ್ದ ಸ್ವಾಮೀಜಿ, 4 ಮೊಬೈಲ್ ಮತ್ತು 4 ಸಿಮ್ ಕಾರ್ಡ್ ಖರೀದಿಸಿದ್ದರು.
2 ಮೊಬೈಲ್ ಮತ್ತು 2 ಸಿಮ್ ಕೊಂಡೊಯ್ದಿದ್ದ ಸ್ವಾಮೀಜಿ, ಅದೇ ದಿನ ಮಧ್ಯಾಹ್ನ ಆಪ್ತ ಪ್ರಣವ್‌ಗೆ ತಿಳಿಸಿ ಚಾಲಕ ನಿಂಗರಾಜು ಮೂಲಕ 50 ಲಕ್ಷ ರೂಪಾಯಿ ತರಿಸಿದ್ದ.
ಅದೇ ಕಾರ್‌ನಲ್ಲಿ ನಂಬರ್ ಪ್ಲೇಟ್ ತೆಗೆದು ಮೈಸೂರುನಿಂದ ಹೈದರಾಬಾದ್(ಸಿಖಂದರಾಬಾದ್)ಗೆ ತೆರಳಿದ್ದರು.ಇತ್ತ ನಿಂಗರಾಜುನನ್ನು ಪೊಲೀಸರು ವಶಕ್ಕೆ ಪಡೆಯುತಿದ್ದಂತೆ ಶ್ರೀಶೈಲಗೆ ಪರಾರಿಯಾಗಿದ್ದ ಹಾಲಶ್ರೀ, ಅಲ್ಲಿಂದ ಪೂರಿ- ಗಂಜಾಂ- ಕಟಕ್‌ಗೆ ಟ್ರೈನ್‌ನಲ್ಲೇ ಸಂಚರಿಸಿದ್ದರು. ಕೊನೆಗೆ ಕಟಕ್‌ನಿಂದ
ಭುವನೇಶ್ವರ ಮಾರ್ಗವಾಗಿ ವಾರಣಾಸಿಗೆ ತೆರಳಲು ರೈಲು ಟಿಕೇಟ್ ಬುಕ್ ಮಾಡಿದ್ದರು. ಟಿಕೇಟ್ ಬುಕ್ ಮಾಡಿರುವುದನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದ್ದರು.
ಅಲ್ಲದೆ, ಕರ್ನಾಟಕಕ್ಕೆ ಕರೆ ಮಾಡುತ್ತಿದ್ದ ಸುಳಿವಿನ ಮೇರೆಗೆ ಸಿಸಿಬಿ ಅಧಿಕಾರಿಗಳು ಹಾಲಶ್ರೀ ಮೇಲೆ ನಿಗಾ ವಹಿಸಿದ್ದರು. ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಒಡಿಶಾ ಪೊಲೀಸರಿಗೆ ಅಲರ್ಟ್ ಮಾಡಿದ್ದರು.
ಖಾವಿಬಿಚ್ಚಿ ಟೀ ಶರ್ಟ್ ಮತ್ತು ಬರ್ಮಡ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ರೈಲಿನಲ್ಲಿ ಕುಳಿತಿದ್ದ ಸ್ವಾಮೀಜಿಯನ್ನು ಗಮನಿಸಿದ ಕಟಕ್ ಪೊಲೀಸರು ಅನುಮಾನ ಬಂದು ೆಟೋ ತೆಗೆದು ಸಿಸಿಬಿ ಅಧಿಕಾರಿಗೆ ಕಳುಹಿಸಿದ್ದರು. ಸಿಸಿಬಿಯಿಂದ ಖಚಿತ ಪಡಿಸಿಕೊಂಡು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದರು. ರಾತ್ರಿ ಮಡಿವಾಳದ ಟೆಕ್ನಿಕಲ್ ಸೆಲ್‌ನಲ್ಲಿ ಇರಿಸಿ ಬುಧವಾರ ಬೆಳಗ್ಗೆ ಹಾಲಶ್ರೀಯನ್ನು ಕೋರ್ಟ್‌ಗೆ ಹಾಜರುಪಡಿಸಲು ಸಿಸಿಬಿ ಅಧಿಕಾರಿಗಳು ಸಜ್ಜಾಗಿದ್ದಾರೆ.