ನ್ಯೂಸ್

'ಮೊಸಳೆ ಕಣ್ಣೀರು ಹಾಕ್ತಾರೆ' ಎನ್ನುವುದರ ಹಿಂದಿನ ಕಥೆಯೇನು ಗೊತ್ತಾ?

ಇಂದಿನಿಂದ ಕೆಲವು ದಿವಸ ಮೊಸಳೆ ಮತ್ತು ನೀರಾನೆಯ ಪ್ರಪಂಚಕ್ಕೆ ಹೋಗಿ ಬರೋಣ. ಮೊದಲು ಇವೆರಡರ ಜೀವನ ಶೈಲಿಯನ್ನು ಪ್ರತ್ಯೇಕವಾಗಿ ನೋಡಿ ನಂತರ ಇವುಗಳ ಸಹಬಾಳ್ವೆ, ಸ್ನೇಹ, ದ್ವೇಷ, ಪ್ರತಿರೋಧ ಮುಂತಾದ ವಿಷಯಗಳನ್ನು ಗಮನಿಸೋಣ.

ಮೊಸಳೆ ಕಣ್ಣೀರು ಹಾಕ್ತಾರೆ ಅಂತ ಸಾಮಾನ್ಯವಾಗಿ ಹೇಳುವ ನಾಣ್ಣುಡಿ ಇದೆ. ಅದಕ್ಕೆ ಕಾರಣ ಏನು ಅಂತ ಯಾವಾಗಲಾದರೂ ಯೋಚಿಸಿದ್ದೀರಾ? ಒಂದು ಸಣ್ಣ ಕಥೆ ಕೇಳಿ. ಮೊಸಳೆ ತನ್ನ ಆಹಾರಕ್ಕಾಗಿ ಬೇಟೆ ಆಡುತ್ತದೆ. ಆದರೆ, ಅದನ್ನು ತಿನ್ನುವಾಗ ಆ ಬೇಟೆ ಸಾಯುತ್ತಿದೆಯಲ್ಲಾ ಎಂದು ಕಣ್ಣೀರು ಹಾಕುತ್ತದೆ ಎಂದು ಹಿಂದಿನಕಾಲದ ಜನರು ನಂಬಿದ್ದರು. ಆದ್ದರಿಂದ ಮೊಸಳೆ ಕಣ್ಣೀರು ಎನ್ನುವುದು ಸಾಮಾನ್ಯವಾಯಿತು. ಅದಕ್ಕೆ ಕಣ್ಣೀರು ಬರುತ್ತದೆ ಎನ್ನುವುದು ನಿಜ. ಅದಕ್ಕೆ ಕಣ್ಣಿನಲ್ಲಿ ಒಳರೆಪ್ಪೆ ಇರುವುದರಿಂದ ನೀರಿನೊಳಗೂ ಕಣ್ಣು ಬಿಟ್ಟು ನೋಡುತ್ತದೆ. ರಾತ್ರಿಯಲ್ಲೂ ಇದಕ್ಕೆ ಕಣ್ಣು ಚೆನ್ನಾಗಿ ಕಾಣಿಸುತ್ತದೆ.

ಪುರಾಣಗಳಲ್ಲಿ ಮೊಸಳೆ ಗಂಗೆಯ ವಾಹನ. ಆದ್ದರಿಂದ ಇದು ದೇವರಿಗೆ ಸಮಾನ ಎಂದು ಹೇಳಲಾಗುತ್ತದೆ. ಆದರೆ ಜನರು ಇದರ ಚರ್ಮಕ್ಕಾಗಿ ಬೇಟೆಯಾಡಿ ಕೊಲ್ಲುತ್ತಿದ್ದಾರೆ. ಆಗ ಇವರಿಗೆ ದೇವರು ಜ್ಞಾಪಕಕ್ಕೆ ಬರುವುದಿಲ್ಲ. ಹಳ್ಳಿಗೆ ಮೊಸಳೆ ಬಂದಿತ್ತು, ದೇವಸ್ಥಾನಕ್ಕೆ ಬಂದಿತ್ತು, ಹಳ್ಳಿಯ ಜನರು ಮೊಸಳೆಯನ್ನು ಹೊಡೆದು ಕೊಂದರು ಎನ್ನುವ ವಿಷಯಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಜನರಿಗೆ ಯಾವುದೇ ಒಂದು ಮಾಂಸಾಹಾರಿ ಅಥವಾ ವನ್ಯಪ್ರಾಣಿ ಕಂಡರೆ ಅದು ನಮ್ಮನ್ನು ತಿನ್ನುತ್ತದೆ ಎನ್ನುವ ಭಯ ಮೂಡುತ್ತದೆ. ಆದರೆ ಅದು ಸತ್ಯಕ್ಕೆ ದೂರ. ಕಾಡು ಪ್ರಾಣಿಗಳು ಹಳ್ಳಿಗೆ ಬರಲು ಹಲವು ಕಾರಣಗಳಿರುತ್ತವೆ. ಬದಲಾಗಿ ಅಂತಹ ಪ್ರಾಣಿಗಳ ಬಗ್ಗೆ ಜ್ಞಾನ ಇಲ್ಲದೇ ಇರುವ ಕಾರಣದಿಂದ ಕೊಲೆ ಮಾಡುತ್ತಾರೆ. ಕೆಲವು ಜಾತಿಯ ಮೊಸಳೆಗಳ ಸಂತತಿ ನಿರ್ವಂಶದ ಹಂತವನ್ನು ತಲುಪಿದೆ ಎನ್ನುವುದು ಕಳವಳಕಾರಿ ಸಂಗತಿಯೂ ಹೌದು.