ನ್ಯೂಸ್

ಯೂಟ್ಯೂಬ್​ನ ಒಂದು ದಿನದ ಆದಾಯ ಎಷ್ಟು ಗೊತ್ತಾ? ಈ ಲೆಕ್ಕಾಚಾರ ಗೊತ್ತಾದ್ರೆ ನಿಮ್ಮ ಹುಬ್ಬೇರುವುದು ಖಚಿತ! YouTube

YouTube : ಇಂದಿನ ಇಂಟರ್ನೆಟ್ ಜಗತ್ತಿನಲ್ಲಿ ಚಾಂಪಿಯನ್ ಆಗಿರುವ ಯೂಟ್ಯೂಬ್ ಕೇವಲ ಮನರಂಜನಾ ವೇದಿಕೆಯಾಗಿ ಮಾತ್ರವಲ್ಲದೆ, ಲಕ್ಷಾಂತರ ಜನರಿಗೆ ಜೀವನೋಪಾಯವಾಗಿಯೂ ಮಾರ್ಪಟ್ಟಿದೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಭಾರತದಿಂದ ಯುನೈಟೆಡ್ ಸ್ಟೇಟ್ಸ್​ವರೆಗೆ, ಯೂಟ್ಯೂಬ್ ಮೂಲಕ ಲಕ್ಷಾಂತರ ಡಾಲರ್​ಗಳಿಸುವ ಅನೇಕ ಕಂಟೆಂಟ್​ ಕ್ರಿಯೆಟರ್ಸ್ ಇದಾರೆ.

ಕಂಟೆಂಟ್​ ಕ್ರಿಯೆಟರ್​ಗಳು ಯೂಟ್ಯೂಬ್​ ಮೂಲಕ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ಆದರೆ, ಈ ವೇದಿಕೆಯ ಮಾಲೀಕರಾದ ಗೂಗಲ್ ಆಲ್ಫಾಬೆಟ್ ದಿನಕ್ಕೆ ಎಷ್ಟು ಗಳಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಬಹುತೇಕ ಮಂದಿಗೆ ಇದು ತಿಳಿದಿಲ್ಲ. ಆದರೆ, ನಾವಿಂದು ಈ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ.

ಯೂಟ್ಯೂಬ್‌ನ ವ್ಯವಹಾರ ಮಾದರಿ ತುಂಬಾ ಸರಳವಾಗಿದೆ. ಯೂಟ್ಯೂಬ್‌ನ ಆದಾಯವು ಜಾಹೀರಾತುಗಳು, YouTube Premium, ಚಾನಲ್ ಸದಸ್ಯತ್ವ, ಮತ್ತು ಇತರ ಮೂಲಗಳಿಂದ ಬರುತ್ತದೆ. ಅದು ತನ್ನ ಹೆಚ್ಚಿನ ಆದಾಯವನ್ನು ಯೂಟ್ಯೂಬ್‌ನಲ್ಲಿ ವಿಡಿಯೋಗಳ ನಡುವೆ ಪ್ರದರ್ಶಿಸಲಾಗುವ ಜಾಹೀರಾತುಗಳಿಂದ ಗಳಿಸುತ್ತದೆ. ಜಾಹೀರಾತುದಾರರು ತಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಚಾರ ಮಾಡಲು YouTube ಗೆ ಇಂತಿಷ್ಟು ಹಣವನ್ನು ಪಾವತಿ ಮಾಡುತ್ತದೆ.

YouTube ಗೆ ತಮ್ಮ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಕಂಟೆಂಟ್​ ಕ್ರಿಯೆಟರ್​ಗಳಿಗೆ ಜಾಹೀರಾತುದಾರರು ನೀಡಿದ ಹಣದ ಒಂದು ಭಾಗವನ್ನು ಯೂಟ್ಯೂಬ್​ ಪಾವತಿಸುತ್ತದೆ. ಇದರಿಂದಾಗಿ, ಲಕ್ಷಾಂತರ ಜನರು ಈಗ ಯೂಟ್ಯೂಬ್‌ನಿಂದ ಸಾಕಷ್ಟು ಹಣವನ್ನು ಗಳಿಸಲು ಸಮರ್ಥರಾಗಿದ್ದಾರೆ. ಇದರಿಂದ ಪ್ರಯೋಜನ ಪಡೆಯುವವರು ಅನೇಕರಿದ್ದಾರೆ. ಯೂಟ್ಯೂಬ್ ಅನೇಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ ಎಂದು ಹೇಳಲೇಬೇಕು.

ಗೂಗಲ್‌ನ ಪೋಷಕ ಕಂಪನಿಯಾದ ಆಲ್ಫಾಬೆಟ್ ಇಂಕ್. ಪ್ರತಿ ತ್ರೈಮಾಸಿಕದಲ್ಲಿ ತನ್ನ ಗಳಿಕೆಯ ವರದಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ, 2025ರ ಆರಂಭದವರೆಗಿನ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, Alphabet Inc. 2024ರಲ್ಲಿ ಸುಮಾರು 307.4 ಬಿಲಿಯನ್ ಡಾಲರ್​ ಆದಾಯವನ್ನು ಗಳಿಸಿದೆ ಎಂದು ವರದಿಯಾಗಿದೆ.

ಇದರಲ್ಲಿ ಯೂಟ್ಯೂಬ್‌ನ ಜಾಹೀರಾತು ಆದಾಯವು ಸುಮಾರು 31.5 ಬಿಲಿಯನ್ ಡಾಲರ್​ ಆಗಿದೆ. ಅಂದರೆ, ಯೂಟ್ಯೂಬ್ ಒಂದೇ ವರ್ಷದಲ್ಲಿ ಜಾಹೀರಾತುಗಳಿಂದಲೇ ಸುಮಾರು 31 ಬಿಲಿಯನ್ ಡಾಲರ್​ (ಸುಮಾರು ರೂ. 2.5 ಲಕ್ಷ ಕೋಟಿ) ಆದಾಯವನ್ನು ಗಳಿಸಿದೆ. ಇದನ್ನು ಒಂದು ದಿನಕ್ಕೆ ಲೆಕ್ಕ ಹಾಕಿದರೆ ಯೂಟ್ಯೂಬ್‌ನ ಜಾಹೀರಾತು ಆದಾಯವು ಸರಾಸರಿಯಾಗಿ ಒಂದು ದಿನಕ್ಕೆ ಸುಮಾರು 86.3 ಮಿಲಿಯನ್ ಡಾಲರ್​ (ಸುಮಾರು 720 ಕೋಟಿ ರೂ.) ಆಗಿರಬಹುದು.

ಸಾಮಾನ್ಯವಾಗಿ, YouTube ಜಾಹೀರಾತು ಆದಾಯದ ಸುಮಾರು 55% ಕ್ರಿಯೆಟರ್​ಗಳಿಗೆ ಮತ್ತು ಉಳಿದ 45% ಯೂಟ್ಯೂಬ್​ ಗೆ ಹೋಗುತ್ತದೆ ಎಂದು ಮೂಲಗಳು ಹೇಳುತ್ತವೆ. ಸಂಗೀತ, ಗೇಮಿಂಗ್, ವ್ಲಾಗಿಂಗ್ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಭಾರತೀಯ ಯೂಟ್ಯೂಬರ್‌ಗಳು ವಿಶ್ವದ ಪ್ರಮುಖ ಕ್ರಿಯೆಟರ್​ಗಳಲ್ಲಿ ಒಬ್ಬರು. ಯೂಟ್ಯೂಬ್​ ನಾವು ಮನರಂಜನೆ ಮತ್ತು ಕಲಿಯುವ ವಿಧಾನವನ್ನು ಬದಲಾಯಿಸಿದ್ದಲ್ಲದೆ, ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂಬುದು ಶ್ಲಾಘನೀಯ. (ಏಜೆನ್ಸೀಸ್​)