ನ್ಯೂಸ್

ಮನುಷ್ಯ ವೆಜ್​ ಅಂಡ್​ ನಾನ್​ವೆಜ್​ ಆಗಿದ್ದು ಹೇಗೆ ಗೊತ್ತಾ?

ಕೆಲ ಜೀವಿಗಳು ಮೂಗಿನ ಮುಖಾಂತರ ವಾಸನೆ ನೋಡಿದರೆ ಇನ್ನೂ ಕೆಲವು ನಾಲಿಗೆಯ ಮುಖಾಂತರ ವಾಸನೆ ನೋಡುತ್ತಾ ವಿಕಾಸಗೊಳ್ಳುತ್ತಿವೆ. ಯಾವುದೇ ಸಸ್ಯಾಹಾರಿಗಳಿಗೆ ಉಗುರುಗಳಿಲ್ಲ, ಬದಲಾಗಿ ಗೊರಸುಗಳಿವೆ, ಕೋರೆ ಹಲ್ಲುಗಳ ಬದಲಾಗಿ ದವಡೆ ಹಲ್ಲುಗಳಿವೆ. ಎರಡು ಬಿಡಿ ಗೊರಸಿನ ಪ್ರಾಣಿಗಳಾದ ಹಸು, ಎಮ್ಮೆ, ಜಿಂಕೆ ಮುಂತಾದವುಗಳಿಗೆ ಕೊಂಬುಗಳಿವೆ. ಒಂದು ಇಡಿ ಗೊರಸಿನ ಕುದುರೆ, ಕತ್ತೆ, ಹೇಸರಗತ್ತೆಗಳಿಗೆ ಕೊಂಬುಗಳು ವಿಕಾಸಗೊಂಡಿಲ್ಲ. ವಿವಿಧ ಜಾತಿಯ ಪ್ರಾಣಿಗಳು ವಿವಿಧ ಶೈಲಿಯ ಕೊಂಬುಗಳನ್ನು ಹೊಂದಿವೆ. ಕೆಲವು ಪ್ರಾಣಿಗಳ ಕೊಂಬು ಪ್ರತಿವರ್ಷ ಬಿದ್ದುಹೋಗಿ ಪುನಃ ಬೆಳೆಯುತ್ತವೆ. ಕೆಲವು ಪ್ರಾಣಿಗಳ ಕೊಂಬುಗಳು ಮೊಂಡವಾಗಿರುತ್ತವೆ, ಕೆಲವು ಪ್ರಾಣಿಗಳ ಕೊಂಬು ಮೊನಚಾಗಿರುತ್ತವೆ. ಆ ಕೊಂಬುಗಳನ್ನು ನೋಡುವುದೇ ಒಂದು ಚಂದ. ಈ ಎಲ್ಲ ಸಸ್ಯಾಹಾರಿಗಳ ಒಂದೊಂದು ಕಣ್ಣು ಪ್ರತ್ಯೇಕವಾಗಿ ನೋಡಲು ಶಕ್ತವಾಗಿವೆ. ಇವುಗಳು ತಿಂದ ಸಸ್ಯಗಳ ಪತ್ರಹರಿತ್ತು ಕರಗುವ ಸಲುವಾಗಿ ಇವುಗಳ ಕರಳು ತನ್ನ ದೇಹದ ಮೂರು ಪಟ್ಟು ಉದ್ದವಾಗಿ ವಿಕಾಸಗೊಂಡಿದೆ.

ಮಾಂಸಾಹಾರಿ ಪ್ರಾಣಿಗಳಿಗೆ ವಸಡು ಹಲ್ಲುಗಳ ಬದಲಾಗಿ ಕೋರೆ ಹಲ್ಲುಗಳು, ಗೊರಸಿನ ಬದಲಾಗಿ ಮೊನಚಾದ ಉಗುರುಗಳು ವಿಕಾಸಗೊಂಡಿವೆ. ಇವುಗಳಿಗೆ ಕೊಂಬುಗಳು ಹುಟ್ಟುವುದೇ ಇಲ್ಲ. ಇವುಗಳ ಎರಡೂ ಕಣ್ಣುಗಳು ಒಟ್ಟಿಗೇ ನೋಡುತ್ತವೆ. ಮನುಷ್ಯ ಪಳಗಿಸಿದ ಬೆಕ್ಕು ಮತ್ತು ನಾಯಿಗಳು ಈಗ ಅಗಿದು ತಿನ್ನಲು ಪ್ರಾರಂಭಿಸಿವೆ.

ಮಾಂಸಾಹಾರಿ ಪ್ರಾಣಿಗಳ ರೀತಿ ಮನುಷ್ಯ ಎರಡೂ ಕಣ್ಣುಗಳಿಂದ ಒಟ್ಟಿಗೇ ನೋಡುತ್ತಾನೆ. ಮನುಷ್ಯನಿಗೆ ಕೋರೆ ಹಲ್ಲುಗಳೂ ಇವೆ, ದವಡೆ ಹಲ್ಲುಗಳೂ ಇವೆ. ಕರುಳು ಸಸ್ಯಾಹಾರಿಗಳ ಹಾಗೆ ದೇಹದ ಮೂರು ಪಟ್ಟು ಉದ್ದವಿದೆ. ಆದ್ದರಿಂದ ಮನುಷ್ಯ ಮಿಶ್ರಾಹಾರಿಯಾಗಿ ವಿಕಾಸಗೊಂಡಿದ್ದಾನೆ ಎನ್ನಬಹುದು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ