ಬೆಂಗಳೂರು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಸಾಲ ಪಡೆಯಲು ದೇಶದ ಶೇ.85ಕ್ಕಿಂತ ಹೆಚ್ಚು ಮಹಿಳಾ ಉದ್ಯಮಿಗಳು ಹೆಣಗಾಡುತ್ತಿದ್ದಾರೆ. ಇದು ಹಣಕಾಸಿನ ಬೆಂಬಲ ವ್ಯವಸ್ಥೆಯಲ್ಲಿನ ಅಂತರ ತಿಳಿಸಲಿದ್ದು, ಲಿಂಗ ಅಸಮಾನತೆ ಪರಿಹರಿಸುವ ಪ್ರಯತ್ನಗಳಾಗಬೇಕಿದೆ ಎಂದು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇಂಜಿನಿಯರಿಂಗ್ ಮ್ಯಾನುಫ್ಯಾಕ್ಚರರ್ ಎಂಟರ್‌ಪ್ರೆನರ್ನ್ ರಿಸೋರ್ಸ್ ಗ್ರೂಪ್ (ಇಎಂಇಆರ್‌ಜಿ) ಮತ್ತು ಎಂಎಸ್‌ಎಂಇ ಸೋಮವಾರ ಆಯೋಜಿಸಿದ್ದ ಫೋರ್ಜಿಂಗ್ ಲಿಂಕ್ಸ್, ಲೆವರೇಜಿಂಗ್ ನೆಟ್‌ವರ್ಕ್ಸ್, ರೀಚಿಂಗ್ ಔಟ್ ವಿ 8.0 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಯಕತ್ವ ಮತ್ತು ಉದ್ಯಮಶೀಲತೆ ಮಹಿಳೆಯರ ಭಾಗವಹಿಸುವಿಕೆ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಮಾಡಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ವೃದ್ಧಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆವಿಷ್ಕಾರ ಮತ್ತು ಉದ್ಯಮಶೀಲತೆಯನ್ನು ಪೋಷಿಸುವ ವ್ಯವಸ್ಥೆಯನ್ನು ಬೆಳೆಸುವಲ್ಲಿ ಸರ್ಕಾರವು ನಿರಂತರವಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಈ ಯೋಜನೆಯಲ್ಲಿ ಶೇ.4ರ ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಸಬ್ಸಿಡಿ ರೂಪದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.
ಮಹಿಳಾ ಉದ್ಯಮದಲ್ಲಿ ಭಾರತಕ್ಕೆ 57ನೇ ಸ್ಥಾನ:
ತಂತ್ರಜ್ಞಾನ ವಲಯದಲ್ಲಿನ ಸೂಚ್ಯಂಕದ ಪ್ರಕಾರ, ಮಹಿಳಾ ಉದ್ಯಮಶೀಲತೆಯ ಚಟುವಟಿಕೆಯಲ್ಲಿ ಭಾರತವು 65 ದೇಶಗಳಲ್ಲಿ 57ನೇ ಸ್ಥಾನದಲ್ಲಿದೆ. ದೇಶದ ಐದರಲ್ಲಿ ಒಂದು ವ್ಯವಹಾರವು ಮಹಿಳೆಯರಿಂದ ಮುನ್ನಡೆಸಲ್ಪಡುತ್ತಿದೆ. ಜಗತ್ತಿನಾದ್ಯಂತ ಮಹಿಳಾ ಉದ್ಯಮಿಗಳು ಯಶಸ್ಸು ಗಳಿಸುತ್ತಿದ್ದಾರೆ. ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕ್ಷೇತ್ರದಲ್ಲಿನ ಹೊಸ ಸವಾಲುಗಳಿಗೆ ಪರಿಹಾರಗಳನ್ನು ರೂಪಿಸುತ್ತಿದ್ದಾರೆ ಎಂದು ಶ್ಲಾಸಿದರು.
ಈ ವೇಳೆ ಪುಣೆಯ ಸಿಂಬಯೋಸಿಸ್ ಕಾನೂನು ಶಾಲೆ, ನಿರ್ದೇಶಕಿ ಡಾ. ಶಶಿಕಲಾ ಗುರ್ಪೂರ್, ಗ್ರೂಪ್‌ನ ಸಂಸ್ಥಾಪಕ-ಅಧ್ಯಕ್ಷೆ ಉಮಾ ರೆಡ್ಡಿ, ಅಧ್ಯಕ್ಷೆ ಡಾ. ಸುಮಿತಾ ನಾಯಕ್, ಉಪಾಧ್ಯಕ್ಷೆ ಪ್ರ್ರತಿಭಾ ನಕಿಲ್ ಮತ್ತು ಕಾರ್ಯದರ್ಶಿ ಆಶಾ ವಿ.ಎಂ. ಉಪಸ್ಥಿತರಿದ್ದರು.
ಮಹಿಳಾ ಉದ್ಯಮಿಗಳ ಉತ್ಪನ್ನಗಳನ್ನು ಉತ್ತೇಜಿಸಲು ಅವರಲ್ಲಿನ ಕೌಶಲ ಹೆಚ್ಚಿಸಲು ಮಾರುಕಟ್ಟೆ ತರಬೇತಿ ಅಗತ್ಯವಿದೆ. ವಿಶೇಷವಾಗಿ ಡಿಜಿಟಲ್ ಮಾರುಕಟ್ಟೆಯಲ್ಲಿ ಸರ್ಕಾರದ ಸಹಾಯ ಅಗತ್ಯವಿದೆ. - ಕೆ. ರತ್ನಪ್ರಭಾ, ಉಂಬುಂಟು ಒಕ್ಕೂಟ ಅಧ್ಯಕ್ಷೆ