ನ್ಯೂಸ್

ತನ್ನ ಸೌಂದರ್ಯದಿಂದಲೇ ಪ್ರೇಕ್ಷಕರ ಕಣ್ಣುಕುಕ್ಕಿದ 'ಕಾಂತಾರ' ಕನಕಾವತಿಯ ತಂದೆ ನಿಜ ಜೀವನದ ಹೀರೋ! | Rukmini Vasanth

ಮೋಹನ್​ ಶೆಟ್ಟಿ

Rukmini Vasanth Father: ಅ.02ರಂದು ಜಾಗತಿಕವಾಗಿ ತೆರೆಕಂಡ 'ಕಾಂತಾರ ಚಾಪ್ಟರ್​ 1' ಚಿತ್ರವು ಇದೀಗ ಬಿಡುಗಡೆಗೊಂಡ ಕೆಲವೇ ಕೆಲವು ದಿನಗಳಲ್ಲಿ ಬ್ಲಾಕ್​ಬಸ್ಟರ್​ ಹಿಟ್​ನತ್ತ ಸಾಗಿದೆ. ಕೇವಲ ಸಿನಿಪ್ರಿಯರ ಮೆಚ್ಚುಗೆ, ಪ್ರಶಂಸೆಗೆ ಮಾತ್ರ ಪಾತ್ರವಾಗದ ಈ ಸಿನಿಮಾ, ಭಾರತೀಯ ಹಾಗೂ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆಯನ್ನೇ ಕಾಣುತ್ತಿದೆ. ಈಗಾಗಲೇ 200 ಕೋಟಿ ರೂ. ಕ್ಲಬ್​ ದಾಟಿ ಮುನ್ನುಗ್ಗುತ್ತಿರುವ ಚಿತ್ರಕ್ಕೆ ವಿಶೇಷ ಮನ್ನಣೆ ದೊರಕುತ್ತಿದೆ. ಇದೇ ಸಮಯದಲ್ಲಿ ರಿಷಬ್ ಶೆಟ್ಟಿ ಕಾಂತಾರದಲ್ಲಿ ಕನಕಾವತಿ ಪಾತ್ರದಲ್ಲಿ ಮಿಂಚಿರುವ ಸೌತ್ ಬ್ಯೂಟಿ ರುಕ್ಮಿಣ ವಸಂತ್​ಗೆ ಅಭಿಮಾನದ ಅಲೆ ಜೋರಾಗಿದೆ.

'ಸಪ್ತ ಸಾಗರದಾಚೆ' ದಾಟಿ

ಕನ್ನಡದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದ ರುಕ್ಮಿಣಿ, ಬಳಿಕ ತಮಿಳು ಚಿತ್ರಗಳಲ್ಲಿಯೂ ನಟಿಸಿ, ಸೈಎನಿಸಿಕೊಂಡಿದ್ದಾರೆ. ಇತ್ತೀಚೆಗೆ, ಅವರು ನಟಿಸಿದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಕಾಂತಾರ ಚಾಪ್ಟರ್ 1' ಹೊಸ ಆಯಾಮ, ಖ್ಯಾತಿಯನ್ನೇ ತಂದುಕೊಟ್ಟಿದೆ. ಸಿನಿಮಾದ ಕೊನೆಯವರೆಗೂ ಕಾಣಿಸಿಕೊಳ್ಳುವ ರುಕ್ಮಿಣಿ, ರಾಜಕುಮಾರಿ ಕನಕಾವತಿ ಪಾತ್ರದಲ್ಲಿ ಸಿನಿಪ್ರೇಕ್ಷಕರ ಹುಬ್ಬೇರಿಸಿದ್ದಾರೆ. ತಮ್ಮ ನಟನೆ, ಆ್ಯಕ್ಷನ್​ ಮತ್ತು ಸೌಂದರ್ಯದಿಂದಲೇ ನೋಡುಗರನ್ನು ಮೋಡಿ ಮಾಡಿದ್ದಾರೆ. ಪ್ರಸ್ತುತ, ಟ್ರೆಂಡಿಂಗ್​ ಪಟ್ಟಿಯಲ್ಲಿರುವ ರುಕ್ಮಿಣಿ ವಸಂತ್ ಅವರ ತಂದೆ ಬಗ್ಗೆ ನೀವು ತಿಳಿಯದ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ.

'ಕಾಂತಾರ' ಕನಕಾವತಿ

ಅಸಲಿಗೆ ರುಕ್ಮಿಣಿ ವಸಂತ್ ಅವರ ತಂದೆ ಓರ್ವ ಸಾಮಾನ್ಯ ವ್ಯಕ್ತಿಯಲ್ಲ. ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿ ಕರ್ನಲ್ ವಸಂತ್ ವೇಣುಗೋಪಾಲ್. ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ, ಪಠಾಣ್‌ಕೋಟ್, ರಾಂಚಿ, ಬೆಂಗಳೂರು ಸೇರಿ ಹಲವು ಸ್ಥಳಗಳಲ್ಲಿ ಸೇನಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2007ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಉರಿಯ ಮೇಲೆ ಉಗ್ರರು ದಾಳಿ ಮಾಡಿದಾಗ, ವಸಂತ್ ಮತ್ತು ಅವರೊಂದಿಗಿದ್ದ ಇತರೆ ಸೇನಾ ಅಧಿಕಾರಿಗಳು ಘರ್ಷಣೆಯಲ್ಲಿ ತೊಡಗಿದ್ದರು. ಈ ಸಮಯದಲ್ಲಿ, ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದ ಕರ್ನಲ್ ವಸಂತ್ ವೇಣುಗೋಪಾಲ್ ವೀರ ಮರಣ ಹೊಂದಿದರು.

ತಂದೆ-ತಾಯಿ ಕೊಡುಗೆ ಸ್ಮರಣೀಯ

ಹುತಾತ್ಮರಾದ ವಸಂತ್​ ಅವರಿಗೆ ಭಾರತ ಸರ್ಕಾರವು ಸೇನಾ ಅಧಿಕಾರಿಗಳಿಗೆ ನೀಡಲಾಗುವ ಅತ್ಯುನ್ನತ ಪದಕವಾದ ಅಶೋಕ ಚಕ್ರವನ್ನು ನೀಡಿ ಗೌರವಿಸಿತು. ರುಕ್ಮಿಣಿ ವಸಂತ್ ಏಳು ವರ್ಷದ ಬಾಲಕಿಯಾಗಿದ್ದಾಗ ಅವರ ತಂದೆ ವಸಂತ್ ವೇಣುಗೋಪಾಲ್ ನಿಧನರಾದರು. ರುಕ್ಮಿಣಿ ಅವರ ತಾಯಿ ಸುಭಾಷಿಣಿ ವಸಂತ್​ ಕೂಡ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಭರತನಾಟ್ಯ ನೃತ್ಯಗಾರ್ತಿ ಆಗಿದ್ದು, ಪತಿ ಅಗಲಿಕೆ ನಂತರ, ಅವರಂತೆಯೇ ಸೇನೆಯಲ್ಲಿ ಪತಿಯರನ್ನು ಕಳೆದುಕೊಂಡ ಮಹಿಳೆಯರನ್ನು ಬೆಂಬಲಿಸಲು ವೀರ ರತ್ನ ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾರೆ. ರುಕ್ಮಿಣಿ ಅವರ ಪೋಷಕರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳು ಸ್ಮರಣೀಯ. ಪ್ರಸ್ತುತ, ಭಾರತೀಯ ಚಿತ್ರೋದ್ಯಮದಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ರುಕ್ಮಿಣಿ, ಯಶ್ ಅಭಿನಯಿಸುತ್ತಿರುವ 'ಟಾಕ್ಸಿಕ್‌' ಮತ್ತು ಎನ್​ಟಿಆರ್​ ಅವರ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್​ ಆಗಿ ಹೊರಹೊಮ್ಮುತ್ತಿದ್ದಾರೆ,(ಏಜೆನ್ಸೀಸ್).