ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯ ಕಂದಾಯ ವಿಭಾಗ, ಗಂಗಾಜಲ, ಪೂಜಾ ಸಾಮಗ್ರಿಗಳಿಗೆ ಜಿಎಸ್‌ಟಿ ವಿನಾಯಿತಿ ಪಟ್ಟಿಯಲ್ಲಿವೆ ಎಂದು ಹೇಳಿದೆ. ಗಂಗಾ ಜಲ, ಕುಂಕುಮ, ಸಿಂದೂರ, ಕೈಬಳೆ ಇತ್ಯಾದಿಗಳಿಗೆ ಜಿಎಸ್‌ಟಿ ತೆರಿಗೆ ಇರುವುದಿಲ್ಲ ಎಂದು ಸಿಬಿಐಸಿ (CBIC- central board of indirect taxes and customs) ಹೇಳಿದೆ.
2017ರಲ್ಲಿ ನಡೆದ 14 ಮತ್ತು 15ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪೂಜಾ ಸಾಮಗ್ರಿಗಳಿಗೆ ಜಿಎಸ್‌ಟಿ ವಿಧಿಸುವುದರ ಸಂಬಂಧ ವಿಸ್ತೃತವಾಗಿ ಚರ್ಚಿಸಲಾಗಿದೆ. ಇವುಗಳನ್ನು ಜಿಎಸ್‌ಟಿ ವಿನಾಯಿತಿ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿತ್ತು. ಜಿಎಸ್‌ಟಿ ಜಾರಿಗೆ ಬಂದಾಗಿನಿಂದಲೂ ಈ ಐಟಂಗಳಿಗೆ ಜಿಎಸ್‌ಟಿ ಇಲ್ಲ,’ ಎಂದು ಸಿಬಿಐಸಿ ಹೇಳಿದೆ.
ಈ ಪೂಜಾ ಸಾಮಗ್ರಿಗಳಿಗೆ ಜಿಎಸ್‌ಟಿ ಇಲ್ಲ: ಕುಂಕುಮ, ಸಿಂದೂರ, ಗಾಜಿನ ಕೈಬಳೆ, ಪ್ಲಾಸ್ಟಿಕ್ ಕೈಬಳೆ, ಕಾಡಿಗೆ, ಅಗರಬತ್ತಿ, ಹಣೆಬೊಟ್ಟು, ಗೋರಂಟಿ, ವಿಭೂತಿ, ಕರ್ಪೂರ ಇತ್ಯಾದಿ ಎಲ್ಲಾ ರೀತಿಯ ಪೂಜಾ ಸಾಮಗ್ರಿಗಳಿಗೆ ಜಿಎಸ್‌ಟಿ ಇರುವುದಿಲ್ಲ.ಹಣ್ಣು, ತರಕಾರಿ, ಇತರ ಹಲವು ಅವಶ್ಯಕ ವಸ್ತುಗಳಿಗೂ ಜಿಎಸ್‌ಟಿ ಇಲ್ಲ.
ಭಾರತದಲ್ಲಿ ಹೆಚ್ಚುತ್ತಿರುವ ಜಿಎಸ್‌ಟಿ ಸಂಗ್ರಹ : ಈ ಹಣಕಾಸು ವರ್ಷದಲ್ಲಿ ಈವರೆಗೆ ಆಗಿರುವ ಸರಾಸರಿ ಮಾಸಿಕ ಜಿಎಸ್‌ಟಿ ಸಂಗ್ರಹ 1.65 ಲಕ್ಷಕೋಟಿ ರೂ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ (2022-23) ಸರಾಸರಿ ಮಾಸಿಕ ಜಿಎಸ್‌ಟಿ ಸಂಗ್ರಹ 1.51 ಲಕ್ಷ ಕೋಟಿ ರೂ ಇತ್ತು.
ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ರಾಜ್ಯ ನಂಬರ್ ಒನ್ ಆಗಿದೆ. ವಾಣಿಜ್ಯ ನಗರಿ ಮುಂಬೈನಿಂದ ಅತಿಹೆಚ್ಚು ಜಿಎಸ್‌ಟಿ ಸಂಗ್ರಹ ಆಗುತ್ತದೆ. ಮಹಾರಾಷ್ಟ್ರದ ಬಳಿಕ ಕರ್ನಾಟಕದಲ್ಲಿ ಅತಿಹೆಚ್ಚು ಜಿಎಸ್‌ಟಿ ಸಂಗ್ರಹ ಆಗುವುದು. ಬಹಳಷ್ಟು ಸ್ಟಾರ್ಟಪ್ಗಳು ಮತ್ತು ಉದ್ದಿಮೆಗಳು ಬೆಂಗಳೂರಿನಲ್ಲಿವೆ. ಹೀಗಾಗಿ, ಕರ್ನಾಟಕದಲ್ಲಿ ಜಿಎಸ್‌ಟಿ ಕಲೆಕ್ಷನ್ಸ್ ಬಹಳ ಅಧಿಕ ಇವೆ. ತಮಿಳುನಾಡು, ಗುಜರಾತ್ ರಾಜ್ಯಗಳಲ್ಲೂ ಹೆಚ್ಚಿನ ಜಿಎಸ್‌ಟಿ ಸಂಗ್ರಹ ಆಗುತ್ತದೆ.