Marginal Effect: ಕೆಲಸದ ಜಾಗದಲ್ಲಿ ನಮಗೆ ಕೊಟ್ಟ ಕೆಲಸಕ್ಕಿಂತ ಹೆಚ್ಚಾಗಿ ಮಾಡೋದು, ಸಹೋದ್ಯೋಗಿಗಳಿಗೆ ಹೆಲ್ಪ್ ಮಾಡೋದು, ಟೈಮ್ ಮೀರಿ ಕೆಲಸ ಮುಗಿಸೋದು ಒಳ್ಳೆಯ ಗುಣ ಅಂತಾನೇ ಹೇಳ್ತಾರೆ. ಆದ್ರೆ ಇದೇ ರೀತಿ ಪ್ರತಿದಿನ ಹೆಚ್ಚುವರಿ ಕೆಲಸ ಮಾಡ್ತಾ ಹೋದ್ರೆ, ಒಂದು ಹಂತದಲ್ಲಿ ಅದು ನಿಮ್ಮ ವಿಶೇಷ ಪ್ರಯತ್ನ ಅಂತ ಕಾಣದೆ, ನಿಮ್ಮ ನಾರ್ಮಲ್ ಕೆಲಸ ಅನ್ನೋ ಹಾಗೆ ಪರಿಗಣಿಸೋ ಸಾಧ್ಯತೆ ಇರುತ್ತೆ.
ಕೆಲಸದ ಜಾಗದಲ್ಲಿ ಹೆಚ್ಚುವರಿ ಕೆಲಸ ಮಾಡಿದ್ರೆ ಅದರಿಂದ ಏನು ಲಾಭ, ನಮ್ಮ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ, ಕೆಲಸಕ್ಕೆ ಒಂದು ಮಿತಿ ಇಟ್ಕೊಳ್ಳೋದು ಯಾಕೆ ಮುಖ್ಯ ಅನ್ನೋದನ್ನ ಮನೋವಿಜ್ಞಾನ ಮತ್ತು ಆರ್ಥಿಕ ಶಾಸ್ತ್ರದ ದೃಷ್ಟಿಯಿಂದಲೂ ವಿವರಿಸಲಾಗಿದೆ.
ಆರ್ಥಿಕ ಶಾಸ್ತ್ರದಲ್ಲಿ ಮಾರ್ಜಿನಲ್ ಎಫೆಕ್ಟ್ ಎಂದರೆ ಯಾವುದಾದರೂ ಒಂದು ಅಂಶವನ್ನು ಸ್ವಲ್ಪ ಹೆಚ್ಚಿಸಿದಾಗ ಅದರ ಫಲಿತಾಂಶದಲ್ಲಿ ಆಗುವ ಬದಲಾವಣೆ. ಉದಾಹರಣೆಗೆ, ಕೆಲಸಕ್ಕೆ ಹೆಚ್ಚುವರಿ ಸಮಯ ನೀಡಿದಾಗ ಅದರಿಂದ ಸಿಗುವ ಪ್ರಯೋಜನ ಎಷ್ಟು ಎಂಬುದನ್ನು ಅಳೆಯಬಹುದು. ಇದಕ್ಕೆ ಸಂಬಂಧಿಸಿದ ಪರಿಕಲ್ಪನೆಯೇ 'ಇಳಿಮುಖ ಸೀಮಾಂತ ತುಷ್ಟಿಗುಣದ ನಿಯಮ'.
ಅಂದರೆ, ಒಂದೇ ಅನುಭವವನ್ನು ಪದೇಪದೇ ಪಡೆಯುತ್ತಾ ಹೋದಂತೆ ಪ್ರತಿ ಹೆಚ್ಚುವರಿ ಘಟಕದಿಂದ ಸಿಗುವ ತೃಪ್ತಿ ಕಡಿಮೆಯಾಗಬಹುದು. ಹಸಿದಿರುವಾಗ ಮೊದಲ ತುತ್ತು ಹೆಚ್ಚು ಸಂತೋಷ ನೀಡಿದರೆ, ಹೊಟ್ಟೆ ತುಂಬಿದ ನಂತರ ಮತ್ತಷ್ಟು ತಿನ್ನುವುದರಿಂದ ಸಿಗುವ ತೃಪ್ತಿ ಕಡಿಮೆಯಾಗುತ್ತದೆ. ಇದೇ ತತ್ವವನ್ನು ಕೆಲಸದಲ್ಲಿ ಹೆಚ್ಚುವರಿ ಶ್ರಮದ ಮೌಲ್ಯ ಅರ್ಥಮಾಡಿಕೊಳ್ಳಲು ಬಳಸಬಹುದು.
ಕೆಲಸದ ಆರಂಭದಲ್ಲಿ ಜವಾಬ್ದಾರಿಗಿಂತ ಹೆಚ್ಚು ಕೆಲಸ ಮಾಡಿದರೆ ಅದನ್ನು ವಿಶೇಷ ಪ್ರಯತ್ನವೆಂದು ಗುರುತಿಸಬಹುದು. ಆದರೆ ಅದನ್ನೇ ಪ್ರತಿದಿನ ಮಾಡುತ್ತಾ ಹೋದರೆ, ಕ್ರಮೇಣ ಅದೇ ನಿಮ್ಮ ಸಾಮಾನ್ಯ ಕರ್ತವ್ಯ ಎಂಬ ನಿರೀಕ್ಷೆ ಬೆಳೆಯಬಹುದು. ಆರಂಭದಲ್ಲಿ ಸಿಗುತ್ತಿದ್ದ ಮೆಚ್ಚುಗೆ, ಕಾಲಕ್ರಮೇಣ ಕಡಿಮೆಯಾಗಿ ನಿಮ್ಮ ಹೆಚ್ಚುವರಿ ಶ್ರಮವೂ ಸಾಮಾನ್ಯ ಕೆಲಸದಂತೆ ಕಾಣಬಹುದು.
ಹೆಚ್ಚು ಹೊತ್ತು ಕೆಲಸ ಮಾಡಿದ್ರೆ ಅಷ್ಟೇ ಹೆಚ್ಚು ಫಲಿತಾಂಶ ಸಿಗುತ್ತೆ ಅಂತೇನಿಲ್ಲ. ನಿರಂತರ ಕೆಲಸ, ವಿಶ್ರಾಂತಿ ಇಲ್ಲದಿರುವುದು ಮತ್ತು ಒತ್ತಡದಿಂದ ಏಕಾಗ್ರತೆ ಕಡಿಮೆಯಾಗಬಹುದು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಕೆಲಸದ ಗುಣಮಟ್ಟದ ಮೇಲೂ ಪರಿಣಾಮ ಬೀರಬಹುದು. ಒಂದು ಹಂತದ ನಂತರ ಹೆಚ್ಚುವರಿ ಶ್ರಮ ಹಾಕಿದ್ರೂ ಅದಕ್ಕೆ ತಕ್ಕ ಫಲಿತಾಂಶ ಸಿಗದೇ ಇರಬಹುದು. ಹೀಗಾಗಿ ಹೆಚ್ಚು ಗಂಟೆ ಕೆಲಸ ಮಾಡೋದಕ್ಕಿಂತ, ಇರುವ ಸಮಯದಲ್ಲಿ ಕೆಲಸವನ್ನ ಪರಿಣಾಮಕಾರಿಯಾಗಿ ಮಾಡೋದು ಮುಖ್ಯ.
ನಿಗದಿತ ಜವಾಬ್ದಾರಿ ಮತ್ತು ಹೆಚ್ಚುವರಿ ಕೆಲಸದ ನಡುವಿನ ಗಡಿ ಸ್ಪಷ್ಟವಾಗಿಲ್ಲದಿದ್ದರೆ, ಉದ್ಯೋಗಿಗಳ ಮೇಲೆ ಒತ್ತಡ ಹೆಚ್ಚಾಗಬಹುದು. ಯಾವಾಗಲೂ ಹೆಚ್ಚುವರಿ ಕೆಲಸ ಮಾಡಬೇಕು ಎಂಬ ನಿರೀಕ್ಷೆ ಬೆಳೆದರೆ, ವಿಶ್ರಾಂತಿ ಮತ್ತು ವೈಯಕ್ತಿಕ ಸಮಯಕ್ಕೆ ಅವಕಾಶ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ ಮಾನಸಿಕ ಹಾಗೂ ದೈಹಿಕ ಬಳಲಿಕೆ, ಕೆಲಸದ ಮೇಲಿನ ಆಸಕ್ತಿ ಕಡಿಮೆಯಾಗುವುದು ಮತ್ತು ಬರ್ನ್ಔಟ್ನಂತಹ ಸಮಸ್ಯೆಗಳು ಎದುರಾಗಬಹುದು.
ನಿಗದಿತ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುವುದು ಉದ್ಯೋಗಿಯ ಕರ್ತವ್ಯ. ಆದರೆ ಹೆಚ್ಚುವರಿ ಕೆಲಸವನ್ನು ಪ್ರತಿದಿನದ ನಿರೀಕ್ಷೆಯನ್ನಾಗಿ ಮಾಡಿಕೊಳ್ಳುವ ಬದಲು, ಅಗತ್ಯವಿದ್ದಾಗ ಮತ್ತು ಸೂಕ್ತ ಮನ್ನಣೆ ಸಿಗುವ ಸಂದರ್ಭಗಳಲ್ಲಿ ಮಾಡುವುದು ಉತ್ತಮ. ಕೆಲಸದ ಸಮಯ, ಜವಾಬ್ದಾರಿ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಹೆಚ್ಚುವರಿ ಶ್ರಮಕ್ಕೆ ಸೂಕ್ತ ಮನ್ನಣೆ, ಪ್ರತಿಫಲ ಮತ್ತು ಬೆಳವಣಿಗೆಯ ಅವಕಾಶಗಳು ಸಿಗುವ ಕೆಲಸದ ವಾತಾವರಣವೂ ಅಷ್ಟೇ ಅಗತ್ಯ.
ಒಟ್ಟಿನಲ್ಲಿ, ಕೆಲಸದಲ್ಲಿ ಶ್ರಮ ಹಾಕುವುದು ಮುಖ್ಯ. ಆದರೆ ನಿಮ್ಮ ಸಮಯ ಮತ್ತು ಸಾಮರ್ಥ್ಯಕ್ಕೆ ಮಿತಿ ಇಲ್ಲದಂತೆ ಕೆಲಸ ಮಾಡುವುದು ಸರಿಯಲ್ಲ. ನಿಮ್ಮ ಕೆಲಸಕ್ಕೆ ಸರಿಯಾದ ಮೌಲ್ಯ ಸಿಗಬೇಕಾದರೆ, ವೃತ್ತಿಪರ ಗಡಿಗಳನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ.