ನ್ಯೂಸ್

ಜೈಲಲ್ಲಿ ವಿಲಾಸಿ ಸವಲತ್ತಿಗೆ ಅಧಿಕಾರಿಗಳು ಸಾಥ್?

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತು ರೌಡಿ ವಿಲ್ಸನ್ ಗಾರ್ಡನ್ ನಾಗಗೆ ವಿಶೇಷ ಸವಲತ್ತು ಒದಗಿಸುವಲ್ಲಿ ಜೈಲಾಧಿಕಾರಿ, ಸಿಬ್ಬಂದಿ ಕೈವಾಡ ಪೊಲೀಸ್ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ.

ಕಾರಾಗೃಹದಲ್ಲಿ ರಾಜಾತಿಥ್ಯದ ಬಗ್ಗೆ ಮೂರು ತಂಡಗಳು ಪ್ರತ್ಯೇಕವಾಗಿ ತನಿಖೆ ಚುರುಕುಗೊಳಿಸಿದ್ದು, ಅಂತಿಮ ಹಂತಕ್ಕೆ ಬಂದಿದೆ. ದರ್ಶನ್, ರೌಡಿ ನಾಗ ಹಾಗೂ ಇತರರು ಕಾರಾಗೃಹದ ಆವರಣದಲ್ಲಿ ಚೇರ್‌ನಲ್ಲಿ ಕುಳಿತು ಕೈಯಲ್ಲಿ ಕಾಫಿ ಮತ್ತು ಸಿಗರೇಟ್ ಹಿಡಿದಿರುವಂತಹ ಫೋಟೋಗಳು ವೈರಲ್ ಆಗಿದ್ದವು. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಎರಡರಲ್ಲಿ ದರ್ಶನ್ ಹೆಸರು ಉಲ್ಲೇಖಿಸಲಾಗಿದೆ. ದರ್ಶನ್ ಹಾಗೂ ನಾಗನಿಗೆ ಟೀ, ಸಿಗರೇಟ್, ಚೇರ್ ಕೊಟ್ಟವರು ಯಾರು ಎಂಬುದರ ಬಗ್ಗೆ ಹುಳಿಮಾವು ಠಾಣೆ ಇನ್‌ಸ್ಪೆಕ್ಟರ್ ತನಿಖೆ ನಡೆಸುತ್ತಿದ್ದಾರೆ.

ಜೈಲಿನ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ನಾಗನ ಮೂಲಕ ಇವೆಲ್ಲವನ್ನು ಸರಬರಾಜು ಮಾಡಿರುವುದು ಗೊತ್ತಾಗಿದೆ. ಜೈಲಿನಲ್ಲಿ ರೌಡಿಯ ಪುತ್ರ, ತಂದೆ ಸತ್ಯನೊಂದಿಗೆ ನಟ ದರ್ಶನ್ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ಬಗ್ಗೆ ಬೇಗೂರು ಇನ್‌ಸ್ಪೆಕ್ಟರ್ ತನಿಖೆ ನಡೆಸುತ್ತಿದ್ದಾರೆ.

ವಿಡಿಯೋಕಾಲ್‌ಗೆ ಬಳಸಿರುವ ಮೊಬೈಲ್ ಸಹ ಜೈಲು ಅಧಿಕಾರಿಗಳ ಸಹಕಾರದಿಂದ ಪಡೆದಿರುವುದು ಎಂದು ತಿಳಿದು ಬಂದಿದೆ.

ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ತನಿಖೆ ಮಾಡುತ್ತಿರುವ ಮತ್ತೊಂದು ಪ್ರಕರಣದಲ್ಲಿ, ಜೈಲು ಅಧಿಕಾರಿಗಳು ಕಾರ್ಯವ್ಯಾಪ್ತಿ ಮೀರಿ ಕೈದಿಗಳನ್ನು ಬಳಸಿಕೊಂಡು ಕೆಲಸ ಮಾಡಿರುವುದು ಕಂಡುಬಂದಿದೆ.

ಈಗಾಗಲೇ ಅಮಾನತುಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆೆ. ವಿಡಿಯೋ ಕಾಲ್‌ಗೆ ಬಳಸಿರುವ ಮೊಬೈಲ್ ಅನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ರೌಡಿಶೀಟರ್ ಪುತ್ರ ಮತ್ತು ಸತ್ಯನ ಧ್ವನಿ ಮಾದರಿ ಪಡೆದು ಎ್ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಜತೆಗೆ ಸಂಬಂಧಪಟ್ಟ ಟೆಲಿಕಾಂ ಸಂಸ್ಥೆಗಳಿಗೂ ವರದಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ತಾಂತ್ರಿಕ ವರದಿ ಕೈಸೇರಿದ ಮೇಲೆ ಅಂತಿಮ ಹಂತಕ್ಕೆ ತಲುಪಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.