ನ್ಯೂಸ್

ದೇಗುಲ ಸ್ಥಳಾಂತರ ಭಕ್ತರು ಬಯಸುತ್ತಾರೆಯೇ ?ಪಿಐಎಲ್ ವಿಚಾರಣೆ ವೇಳೆ ಪ್ರಶ್ನೆ ಎತ್ತಿದ ಹೈಕೋರ್ಟ್

ಬೆಂಗಳೂರು :  ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿರುವ ಅಲ್ಲಮಪ್ರಭು ಸ್ವಾಮಿ ದೇವಸ್ಥಾನವನ್ನು ಅಲ್ಲಿನ ಸ್ಥಳೀಯರು ಹಾಗೂ ಭಕ್ತರು ಸ್ಥಳಾಂತರಗೊಳಿಸಲು ಬಯಸುತ್ತಾರೆಯೇ ಎಂದು ರಾಜ್ಯ ಸರ್ಕಾರ ಪರಿಶೀಲಿಸಬೇಕೆಂದು ಹೈಕೋರ್ಟ್ ಮೌಖಿಕವಾಗಿ ನುಡಿದಿದೆ.

ದೇವಾಲಯವು ವರ್ಷದ 6 ತಿಂಗಳು ನೀರಿನಲ್ಲಿ ಮುಳುಗುವುದರಿಂದ ಅದನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂದು ಕೋರಿ ಮಹಾರಾಷ್ಟ್ರದ ಕೊಲ್ಲಾಪುರದ ಕಾನೂನು ವಿದ್ಯಾರ್ಥಿನಿ ನಿಖಿಲ್ ವಿಠ್ಠಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರನ್ನು ಉದ್ದೇಶಿಸಿ ನೀವು ದೇಗುಲವನ್ನು ಸ್ಥಳಾಂತರ ಮಾಡದಿದ್ದರೆ ಅದು ಶಿಥಿಲವಾಗುತ್ತದೆ. ಇಲ್ಲಿ ಪ್ರಶ್ನೆ ಇರುವುದು ಸಾರ್ವಜನಿಕರಿಗೆ ಸ್ಥಳಾಂತರ ಬೇಕೇ ಅಥವಾ ಬೇಡವೆ ಎಂಬುದು. ಹಾಗಾಗಿ ಅವರ ಅಭಿಪ್ರಾಯ ಆಲಿಸಿದ ನಂತರ ಸರ್ಕಾರ ನಿರ್ಧಾರವನ್ನು ಕೈಗೊಳ್ಳಬಹುದು.

ಮುಂದುವರಿದು ದೇವಾಲಯ ಈಗಿರುವ ಜಾಗದಲ್ಲಿಯೇ ಇರಬೇಕೇ ಅಥವಾ ಸ್ಥಳಾಂತರ ಮಾಡಬೇಕೇ ಎಂಬ ಬಗ್ಗೆ ಸ್ಥಳೀಯ ಜನರು, ಭಕ್ತರ ಅಭಿಪ್ರಾಯಗಳನ್ನು ಸರ್ಕಾರದ ಅಧಿಕಾರಿಗಳು ಆಲಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.

ಈ ಹಿಂದಿನ ವಿಚಾರಣೆ ವೇಳೆ ದೇಗುಲಕ್ಕೆ ಸಂಬಂಧಿಸಿದ ಶಾಸನ ಹಾಗೂ ಪಳೆಯುಳಿಕೆಗಳು ಕರ್ನಾಟಕ ಪಾರಂಪರಿಕ ಸ್ಮಾರಕಗಳ ಕಾಯಿದೆ 1961ರನ್ವಯ ಪುರಾತನ ಸ್ಮಾರಕಗಳ ವ್ಯಾಪ್ತಿಗೆ ಬರಲಿದೆಯೇ ಎಂಬ ಬಗ್ಗೆ ನಿರ್ಧರಿಸಲು ತ್ರಿಸದಸ್ಯ ತಜ್ಞರ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು.

ಸಮಿತಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್, ಸಮಿತಿ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಏಕೆಂದರೆ ದೇವಾಲಯ ಸದ್ಯ ಅಣೆಕಟ್ಟೆಯ ಹಿನ್ನೀರಿನಲ್ಲಿ ಜಲಾವೃತ್ತಗೊಂಡಿದೆ. ಹಾಗಾಗಿ ಸಮಿತಿ ನೀರು ಖಾಲಿಯಾದ ಬಳಿಕ ಭೇಟಿ ನೀಡುವುದಾಗಿ ತಿಳಿಸಿದೆ ಎಂದು ಹೇಳಿದೆ.

ಸರ್ಕಾರ ತೀರ್ಮಾನಿಸಲಿ:

ವಿಚಾರಣೆ ವೇಳೆ ಎಎಸ್‌ಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಕಾನೂನು ಪ್ರಕಾರ ರಾಜ್ಯ ಸರಕಾರವೇ ಪ್ರಾಚೀನ ಸ್ಮಾರಕವೆಂದು ಸಂರಕ್ಷಣೆ ಮಾಡಬೇಕಿದೆ. ಹಾಗಾಗಿ ಸರ್ಕಾರವೇ ಈ ಕುರಿತು ತೀರ್ಮಾನಿಸಬೇಕು. ಅಣೆಕಟ್ಟೆ ನಿರ್ಮಾಣದ ವೇಳೆಯೇ ಜನರನ್ನು ಸ್ಥಳಾಂತರ ಮಾಡಿದಂತೆ ದೇವಾಲಯವನ್ನು ಸ್ಥಳಾಂತರ ಮಾಡಬೇಕಿತ್ತು ಎಂದರು.