ನ್ಯೂಸ್

ಸತ್ತವರು ಮತ್ತೆ ಬದುಕಬಹುದು? ಹಣ ಕೊಟ್ಟರೆ ಮೃತದೇಹವನ್ನು ಸುರಕ್ಷಿತವಾಗಿ ಇಡಲಿದೆ ಈ ಕಂಪನಿ!

ಮನುಷ್ಯರು ಸೇರಿದಂತೆ ಭೂಮಿಯ ಮೇಲಿನ ಯಾವುದೇ ಜೀವಿಗಳು ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಾವನ್ನು ಸೋಲಿಸುವ ಸಂಶೋಧನೆಯು ದಶಕಗಳಿಂದಲೂ ನಡೆದುಕೊಂಡು ಬರುತ್ತಿದೆ. ಆದರೆ, ಸಾವನ್ನು ಮೆಟ್ಟಿ ನಿಲ್ಲಲ್ಲು ವಿಜ್ಞಾನವು ಇದುವರೆಗೂ ಯಾವುದೇ ಮಾರ್ಗವನ್ನು ಕಂಡುಕೊಂಡಿಲ್ಲ. ಒಂದು ವೇಳೆ ಇದು ಸಾಧ್ಯವಾದರೆ ಹೇಗಿರುತ್ತೆ? ಭವಿಷ್ಯದಲ್ಲಿ ಸತ್ತವರು ಮತ್ತೆ ಬದುಕಿ ಬರುತ್ತಾರಾ?

ಕ್ರಯೋನಿಕ್ಸ್ ಎನ್ನುವುದು ವ್ಯಕ್ತಿಯ ಮೃತದೇಹವನ್ನು ಘನೀಕರಿಸುವ ಒಂದು ಪ್ರಕ್ರಿಯೆಯಾಗಿದೆ. ಒಂದು ವೇಳೆ ಸತ್ತವರನ್ನು ಮರಳಿ ಬದುಕಿಸುವ ತಂತ್ರಜ್ಞಾನವನ್ನು ಮಾನವರು ಅಭಿವೃದ್ಧಿಪಡಿಸಿದರೆ ಮೃತದೇಹಕ್ಕೆ ಮರಳಿ ಜೀವ ನೀಡಬಹುದು ಎನ್ನುತ್ತಾರೆ. ಜರ್ಮನಿಯ ಸ್ಟಾರ್ಟ್‌ಅಪ್‌ನವರು ಭವಿಷ್ಯದಲ್ಲಿ ಯಾವಾಗಲಾದರೂ ಬದುಕಲು ಬಯಸುವವರಿಗೆ ಕ್ರಯೋನಿಕ್ಸ್ ತಂತ್ರಜ್ಞಾನದ ಮೂಲಕ ಮೃತ ದೇಹವನ್ನು ಫ್ರೀಜ್‌ನಲ್ಲಿಡುವ ಭರವಸೆಯನ್ನು ಹೊತ್ತು ತಂದಿದ್ದಾರೆ. ಆ ಕಂಪನಿಯ ಹೆಸರು ಟುಮಾರೊ ಬಯೋ.

ಮೃತದೇಹವನ್ನು ಸಂಪೂರ್ಣವಾಗಿ ಸಂರಕ್ಷಿಸಲು ಈ ಕಂಪನಿಯು 1.8 ಕೋಟಿ ರೂ. ಮತ್ತು ಮೆದುಳನ್ನು ಮಾತ್ರ ಸಂರಕ್ಷಿಸಿಡಲು 67.2 ಲಕ್ಷ ರೂಪಾಯಿ ಚಾರ್ಜ್​ ಮಾಡುತ್ತದೆ. ಮೈನಸ್​ 198 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ದೇಹದಲ್ಲಿನ ಎಲ್ಲ ಜೈವಿಕ ಪ್ರಕ್ರಿಯೆಗಳನ್ನು ಅನಿರ್ದಿಷ್ಟವಾಗಿ ನಿಲ್ಲಿಸುವ ವಿಧಾನವನ್ನು ಈ ಕಂಪನಿಯು ಅಳವಡಿಸಿಕೊಂಡಿದೆ. ಮೃತದೇಹಗಳನ್ನು ನೈಟ್ರೋಜನ್​ ದ್ರವದಿಂದ ತುಂಬಿದ ವಿಶೇಷ ಉಕ್ಕಿನ ಪಾತ್ರೆಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.

ಇಲ್ಲಿಯವರೆಗೆ ಈ ಕಂಪನಿಯಿಂದ ಆರು ಜನರು ಮತ್ತು ಐದು ಸಾಕುಪ್ರಾಣಿಗಳನ್ನು ಕ್ರಯೋಪ್ರಿಸರ್ವ್ ಮಾಡಲಾಗಿದೆ. ಈ ಸೇವೆಗಾಗಿ ಈಗಾಗಲೇ 650ಕ್ಕೂ ಹೆಚ್ಚು ಮಂದಿ ಹಣ ಪಾವತಿಸಿದ್ದಾರೆ. ಕಂಪನಿಯ ಮುಖ್ಯ ಕೇಂದ್ರವು ಸ್ವಿಟ್ಜರ್ಲೆಂಡ್‌ನಲ್ಲಿದೆ. ಕಂಪನಿಯು ಬರ್ಲಿನ್, ಆಮ್​ಸ್ಟರ್​ಡ್ಯಾಮ್ ಮತ್ತು ಜ್ಯೂರಿಚ್‌ನಂತಹ ನಗರಗಳಲ್ಲಿ ಉದ್ಯೋಗಿಗಳನ್ನು ಹೊಂದಿದೆ. ಮೃತದೇಹಗಳನ್ನು ಸಂಗ್ರಹಿಸಲು ವಿಶೇಷ ಆಂಬ್ಯುಲೆನ್ಸ್ ಕೂಡ ಸಿದ್ಧವಾಗಿದೆ.

ಇಂದು ಪ್ರಪಂಚದ ವಿವಿಧ ಭಾಗಗಳಲ್ಲಿ ಕ್ರಯೋನಿಕ್ಸ್ ತಂತ್ರಜ್ಞಾನದ ಮೂಲಕ ಮೃತ ದೇಹಗಳನ್ನು ಫ್ರೀಜ್ ಮಾಡಲು ಸಹಾಯ ಮಾಡುವ ಅನೇಕ ಕಂಪನಿಗಳಿವೆ. ಕ್ರಯೋನಿಕ್ಸ್ ಪ್ರಕ್ರಿಯೆಯು ವೈಜ್ಞಾನಿಕ ಪ್ರಪಂಚದಿಂದಲೇ ಭಾರಿ ಟೀಕೆಗಳನ್ನು ಎದುರಿಸುತ್ತಿದೆ. ಏಕೆಂದರೆ, ಮಾನವರನ್ನು ಅಥವಾ ಇತರ ಯಾವುದೇ ಜೀವಿಗಳನ್ನು ಯಶಸ್ವಿಯಾಗಿ ಪುನರುಜ್ಜೀವನಗೊಳಿಸುವ ಸಾಧ್ಯತೆ ಸತ್ಯಕ್ಕೆ ದೂರವಿದೆ. ಆದಾಗ್ಯೂ, ಕ್ರಯೋನಿಕ್ಸ್ ಪ್ರತಿಪಾದಕರು ಒಂದು ಶತಮಾನದ ನಂತರ ಅಂತಹ ಸಾಧ್ಯತೆ ಇದೆ ಎಂದು ವಾದಿಸುತ್ತಾರೆ. (ಏಜೆನ್ಸೀಸ್​)