ಶಿಕಾರಿಪುರ: ನಮ್ಮ ಚಾರಿತ್ರ್ಯವನ್ನು ಇಡೀ ಸಮಾಜ ಗಮನಿಸುವಂತೆ ರೂಪಿಸಿಕೊಳ್ಳಬೇಕು. ನಮಗೆ ಸಿಗುವ ಅವಕಾಶವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ಒಂದು ಸ್ನೇಹವಲಯ ನಿರ್ಮಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಯಶವಂತ್‌ಕುಮಾರ್ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಸಬಲೀಕರಣ ಯೋಜನಾ ಇಲಾಖೆ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಮಾನವ ಕಳ್ಳಸಾಗಣೆ ತಡೆ, ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ತಡೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಕಾನೂನಿನ ವ್ಯಾಪ್ತಿಯಲ್ಲಿ ಬದುಕು ಸಾಗಿಸಬೇಕು. ಕಾನೂನು ಬಾಹಿರ ಕೃತ್ಯಗಳು ನಡೆಸುತ್ತಿದ್ದರೆ ಅದನ್ನು ಪ್ರತಿಭಟಿಸುವುದು ಸಹ ನಮ್ಮ ಕರ್ತವ್ಯ. ಸಂವಿಧಾನ ನಮಗೆ ಇಂತಹ ಜವಾಬ್ದಾರಿ ನೀಡಿದೆ. ಮಾನವ ಕಳ್ಳಸಾಗಣೆ, ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ನಮ್ಮ ಸಮಾಜಕ್ಕೆ ಅಂಟಿದ ಶಾಪ. ನಾವೆಲ್ಲರೂ ಒಟ್ಟಾಗಿ ಸಮಾಜಘಾತುಕ ಶಕ್ತಿಗಳನ್ನು ಕುಗ್ಗಿಸಬೇಕು ಎಂದರು.
ನಮ್ಮ ಮೇಲೆ ಸಮಾಜ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಆ ನಿರೀಕ್ಷೆಗೆ ತಕ್ಕಂತೆ ನಾವು ಸ್ಪಂದಿಸಬೇಕು. ಕಾನೂನು ಸದಾ ನಿಮಗೆ ವಜ್ರಕವಚವಾಗಿರುತ್ತದೆ. ಕಾನೂನು ಬಾಹಿರ ಕೃತ್ಯಗಳಿಗೆ ನಾವು ಯಾವತ್ತೂ, ಯಾವ ಕಾರಣಕ್ಕೂ ಬೆಂಬಲ ನೀಡಬಾರದು. ವಿಚ್ಛಿದ್ರಕಾರಿ ಮನಸುಗಳಿಂದ ಸಮಾಜದ ಸ್ವಾಸ್ಥೃ ದಿನೆದಿನೇ ಹದಗೆಡುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಇಂತಹ ಕಾರ್ಯಕ್ರಮಗಳಿಂದ ಜನತೆಯಲ್ಲಿ ಜಾಗೃತಿ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆನಂದಪ್ಪ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರತ್ನಮ್ಮ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್, ಕಾರ್ಯದರ್ಶಿ ಎಚ್.ಪಿ.ಪ್ರಕಾಶ್, ಮೇಲ್ವಿಚಾರಕರಾದ ನೀಲಮ್ಮ, ಶಾರದಾ ಬಂಗೇರಾ, ನಂಜಾಕ್ಷಿ, ಸುನೀತಾ ಇತರರಿದ್ದರು.