ನ್ಯೂಸ್

ಪಿಎಸ್‌ಐ ಮರು ಪರೀಕ್ಷೆ ; ಮೂರು ತಿಂಗಳು ಬೇಡ, ಕೆಇಎಗೆ ನೀಡಬೇಡಿ…

ಬೆಂಗಳೂರು: ಪಿಎಸ್‌ಐ ಮರು ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

ಕೆಲವು ಅಭ್ಯರ್ಥಿಗಳು ಪರೀಕ್ಷೆಗೆ ಮೂರು ತಿಂಗಳು ಗಡುವು ನೀಡಬೇಕು. ಇದರಿಂದ ತಮಗೆ ಓದಲು ಅನುಕೂಲವಾಗುತ್ತದೆ ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅಲ್ಲದೆ ಮತ್ತೆ ಕೆಲವರು ಕೆಇಎಗೂ ಪರೀಕ್ಷೆ ಜವಾಬ್ದಾರಿ ನೀಡಬಾರದು. ಇತ್ತೀಚೆಗೆ ಕೆಇಎ ನಡೆಸಿದ ಪರೀಕ್ಷೆಯಲ್ಲೂ ಅಕ್ರಮವಾಗಿವೆ. ಕಾರಣ ಕೆಇಎಗೆ ನೀಡಬೇಡಿ ಎಂದು ಆಗ್ರಹಪಡಿಸಿದ್ದಾರೆ.

ಈ ಎಲ್ಲ ವಿಷಯಗಳ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿದರು. ಆದರೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಆಗಲಿಲ್ಲ. ಬಳಿಕ ಇನ್ನೊಂದು ಸಭೆಯನ್ನು ನಡೆಸಿ ಚರ್ಚಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪರೀಕ್ಷಾ ಅಕ್ರಮದ ಹಿನ್ನೆಲೆ:
2021, ಜನವರಿ 21 ರಂದು ಕರ್ನಾಟಕ ಪೊಲೀಸ್ ಇಲಾಖೆಯಿಂದ 454 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಿ, 2021, ಅಕ್ಟೋಬರ್ 3 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ದೊಡ್ಡ ಅಕ್ರಮ ನಡೆದಿರುವುದು ಬೆಳಕಿಗೆ ಬಂದು ತನಿಖೆ ನಡೆಸಲಾಗಿತ್ತು. ಅಚ್ಚರಿ ಎಂಬಂತೆ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿತ್ತು. ಜತೆಗೆ ಅಕ್ರಮಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಈ ಹಗರಣ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್, ಉನ್ನತ ಶಿಕ್ಷಣ ಇಲಾಖೆ, ಪಿಯು ಪರೀಕ್ಷಾ ಮಂಡಳಿ, ಕೆಇಎ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.